More

    ಆರು ಮೇಸ್ಟ್ರು, ಮೂರು ರೂಮ್!

    ಆನಂದಪುರ: ಯಡೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಮೇಲ್ಛಾವಣಿ ಶಿಥಿಲವಾಗಿದ್ದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ದುರಸ್ತಿ ಕಂಡಿಲ್ಲ.
    ಶಾಲೆಯಲ್ಲಿ ಒಟ್ಟು ಏಳು ಕೊಠಡಿಗಳಿದ್ದು ಆರು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಎಲ್ಲ ಕೊಠಡಿಗಳು ಪಕಾಶಿ ಮತ್ತು ಹೆಂಚಿನ ಮೇಲ್ಛಾವಣಿಯವಾಗಿವೆ. ಕಳೆದ ಮೂವತ್ತು ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿದ ಈ ಶಾಲೆ ಆರಂಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆಯ ಪ್ರಮಾಣ ಏರುಗತಿ ಹೊಂದಿದ ಕಾರಣ ಸ್ವಲ್ಪ ವರ್ಷದಲ್ಲಿಯೇ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.
    ಮೇಲ್ಛಾವಣಿಯ ಪಕಾಶಿ ಮತ್ತು ರೀಪುಗಳು ಗೆದ್ದಲು ಹಿಡಿದು ಶಿಥಿಲವಾಗಿವೆ. ಮೂರು ಕೊಠಡಿಗಳ ಪಕಾಶಿ ಗೆದ್ದಲಿಗೆ ತುತ್ತಾಗಿ ತುಂಡು ತುಂಡಾಗಿ ಬೀಳುತ್ತಿವೆ. ಕಳೆದ ವರ್ಷ ಅಗಸ್ಟ್‌ನಲ್ಲಿಯೇ ಕಟ್ಟಡ ಶಿಥಿಲವಾಗಿದ್ದು ಎಸ್‌ಡಿಎಂಸಿಯವರು ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶಾಲೆಯ ಸ್ವಲ್ಪ ದೂರದಲ್ಲಿ ಗ್ರಾಪಂ ಕಚೇರಿಯಿದ್ದು ಗ್ರಾಪಂಗೆ ಸಹ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸಹ ಚರ್ಚೆಯಾಗಿದ್ದು ವಿಶೇಷ ಅನುದಾನಕ್ಕಾಗಿ ತಾಪಂ, ಜಿಪಂ ಹಾಗೂ ಸಾಗರದ ಶಾಸಕರಿಗೆ ವರದಿಯೊಂದಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ೆಬ್ರವರಿ ತಿಂಗಳವರೆಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ದುರಸ್ತಿ ಕಾಮಗಾರಿ ಮಂಜೂರಾಗಿದೆ ಎಂದು ಶಾಸಕರ ಕಚೇರಿಯಿಂದ ಮಾಹಿತಿ ಬಂದಿತ್ತು. ಆದರೆ ಈವರೆಗೂ ಮೇಲ್ಛಾವಣಿ ದುರಸ್ತಿಯಾಗಿಲ್ಲ. ಕಳೆದ ತಿಂಗಳು ಜೋರಾಗಿ ಮಳೆ ಸುರಿದಾಗ ಕೆಲವು ಹೆಂಚು ಉದುರಿ ಬಿದ್ದಿದೆ. ರಾತ್ರಿ ವೇಳೆ ಈ ಘಟನೆ ನಡೆದ ಕಾರಣ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಈಗ ಎರಡು ವಾರದಿಂದ ಈ ಮೂರು ಕೊಠಡಿಯಲ್ಲಿ ಪಾಠ ಪ್ರವಚನ ಮಾಡಲು ಸಾಧ್ಯವಾಗದೆ ಉಳಿದ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ.
    ಒಂದೊಂದು ಕೊಠಡಿಯಲ್ಲಿ ಬಹು ತರಗತಿ ನಡೆಯಬೇಕಾದ ಅನಿವಾರ್ಯತೆ ಇದ್ದು ವೇಳಾಪಟ್ಟಿಯಂತೆ ಮಕ್ಕಳಿಗೆ ಪಾಠ ಮಾಡಲು ಸಾಧ್ಯವಾಗದಂತೆ ಆಗಿದೆ. ಶಾಲೆಯ ಮೂರು ಕೊಠಡಿ ಮೇಲ್ಛಾವಣಿ ಶಿಥಿಲವಾಗಿದೆ. ಉಳಿದ ಮೂರು ಕೊಠಡಿಯಲ್ಲಿ ಮಕ್ಕಳನ್ನು ತುಂಬಿಕೊಂಡು ಇಕ್ಕಟ್ಟಿನಲ್ಲಿ ಕುಳ್ಳಿರಿಸಿ ಪಾಠ ಪ್ರವಚನ ಮಾಡಲಾಗುತ್ತಿದೆ. ಶೀಘ್ರ ದುರಸ್ತಿ ಕಾರ್ಯ ನಡೆಯಬೇಕಾಗಿದೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಮಹಮದ್ ಜಿಯಾವುಲ್ಲಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts