More

    ಬಜೆಟ್​ ಮಧ್ಯದಲ್ಲಿ ಅಸ್ವಸ್ಥರಾದ ನಿರ್ಮಲಾ ಸೀತಾರಾಮನ್​; 160 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಕವಿ ಕಾಳಿದಾಸ, ಸಿಂಧು ನಾಗರೀಕತೆಯ ಉಲ್ಲೇಖ

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಬರೋಬ್ಬರಿ ಎರಡೂವರೆ ತಾಸುಗಳ ಸುದೀರ್ಘ ಬಜೆಟ್​ ಭಾಷಣ ಮಾಡಿ ದಾಖಲೆ ನಿರ್ಮಿಸಿದರು.

    ಕಾಶ್ಮೀರಿ ಪದ್ಯಗಳು, ತಮಿಳು ಕವಿಗಳ ಕೋಟ್​ಗಳು, ಸರಸ್ವತಿ-ಸಿಂಧು ನಾಗರೀಕತೆಗಳನ್ನು ಬಜೆಟ್​ ಮಂಡನೆಯ ಭಾಷಣದಲ್ಲಿ ಉಲ್ಲೇಖ ಮಾಡಿದ್ದ ವಿಶೇಷವಾಗಿತ್ತು. ಅಷ್ಟು ಸುದೀರ್ಘವಾಗಿ ಬಜೆಟ್​ ಮಂಡನೆ ಮಾಡಿದರೂ ಇನ್ನೂ ಎರಡು ಪೇಜ್​ಗಳಷ್ಟನ್ನು ಓದುವುದು ಬಾಕಿ ಇತ್ತು. ಆದರೆ ನಿರ್ಮಲಾ ಸೀತಾರಾಮನ್ ಸ್ವಲ್ಪ ಅಸ್ವಸ್ಥರಾದಂತೆ ಕಂಡುಬಂದರು. ಹಾಗಾಗಿ ಮಧ್ಯದಲ್ಲಿಯೇ ಮುಗಿಸಿದರು.

    ನಿರ್ಮಲಾ ಸೀತಾರಾಮನ್​ ಕಾಶ್ಮೀರಿ, ಹಿಂದಿ ಪದ್ಯಗಳೊಂದಿಗೆ ತಿರುವಲ್ಲುವರ್​ ಮತ್ತು ಕವಿ ಕಾಳಿದಾಸನ ಕವಿತೆಗಳನ್ನೂ ಹೇಳಿದರು.

    ನಿರ್ಮಲಾ ಸೀತಾರಾಮನ್​ ಕಳೆದ ಬಾರಿ ತಮ್ಮ ಮೊದಲ ಬಜೆಟ್​ನ್ನು ಮಂಡಿಸಲು 137 ನಿಮಿಷಗಳ ಅವಧಿಯನ್ನು ತೆಗೆದುಕೊಂಡಿದ್ದರು. ಅದೇ ಸುದೀರ್ಘ ಬಜೆಟ್​ ಮಂಡನೆಯಾಗಿತ್ತು. ಈಗ ಅವರದ್ದೇ ದಾಖಲೆಯನ್ನು ಅವರೇ ಮುರಿದು 160 ನಿಮಿಷ ಬಜೆಟ್​ ಓದಿದ್ದಾರೆ.

    ಬಜೆಟ್​ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ಹೇಳಿದರು. ಆದರೆ ಈ ವೇಳೆ ಪ್ರತಿಪಕ್ಷಗಳು ವಿರೋಧ ಕೂಡ ವ್ಯಕ್ತಪಡಿಸಿದವು.

    ಇಂದು ವೈಯಕ್ತಿಕ ಆದಾಯ ತೆರಿಗೆದಾರರ ತೆರಿಗೆ ಪಾವತಿಯ ಪ್ರಮಾಣವನ್ನು ಕಡಿತ ಮಾಡಿದ್ದನ್ನು ಎಲ್ಲ ಪಕ್ಷಗಳೂ ಬೆಂಚ್​ಗಳನ್ನು ಬಡಿದು ಸ್ವಾಗತಿಸಿದರು. ಈ ವೇಳೆ ನರೇಂದ್ರ ಮೋದಿಯವರೂ ಉಳಿದವರ ಜತೆ ಸೇರಿಕೊಂಡರು.

    150 ನಿಮಿಷಗಳ ಕಾಲ ಬಜೆಟ್​ ಓದಿದ ನಿರ್ಮಲಾ ಸೀತಾರಾಮನ್​ ಅಸ್ವಸ್ಥರಾದಂತೆ ಕಂಡು ಬಂದಾಗ ಅವರಿಗೆ ನೀರು ನೀಡಲಾಯಿತು. ಅಲ್ಲಿದ್ದ ಕೇಂದ್ರ ಸಚಿವ ನಿತಿನ್​ ಗಡ್ಕರಿ ಒಂದು ಚಾಕಲೇಟ್​ನ್ನೂ ಕೊಟ್ಟರು. ಅದಾದ ಮೇಲೆ ಕೂಡ ಸ್ವಲ್ಪ ಹೊತ್ತು ಭಾಷಣ ಮುಂದುವರಿಸಿದರು. ಆದರೆ ಕೊನೆಗೆ ಆಗದೆ ಹೋದಾಗ ಅನಿವಾರ್ಯವಾಗಿ ಭಾಷಣವನ್ನು ಮುಕ್ತಾಯಗೊಳಿಸಿದರು.

    ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್ ಮತ್ತು ಅಮಿತ್​ ಷಾ ಕೂಡ ನಿರ್ಮಲಾ ಸೀತಾರಾಮನ್​ ಜತೆ ಮಾತನಾಡಿದರು. ಬಜೆಟ್​ ಓದಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್​ ಸ್ಪೀಕರ್​ಗೆ ಮನವಿ ಮಾಡಿಕೊಂಡರು. ಕೂಡಲೇ ಲೋಕಸಭೆಯನ್ನು ಮುಂದೂಡಲಾಯಿತು.

    ಪ್ರಧಾನಿ ನರೇಂದ್ರ ಮೋದಿ ಎದ್ದು ಬಂದು ನಿರ್ಮಲಾ ಸೀತಾರಾಮನ್​ಗೆ ಶುಭ ಕೋರಿದರು. ಪಿಯುಷ್​ ಗೋಯೆಲ್​, ಸ್ಮೃತಿ ಇರಾನಿ ಸೇರಿ ಹಲವು ಸಚಿವರು, ಕಾಂಗ್ರೆಸ್​ ಸಂಸದರು ಆಗಮಿಸಿ ನಿರ್ಮಲಾ ಸೀತಾರಾಮನ್​ ಆರೋಗ್ಯದ ಬಗ್ಗೆ ವಿಚಾರಿಸಿದರು. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts