More

    ಸೋನಿಯಾ ಸೂತ್ರಧಾರಿ ಪಟೇಲ್, ತೀಸ್ತಾ ಪಾತ್ರಧಾರಿ?: ಮೋದಿ ವಿರುದ್ಧ ಅಹ್ಮದ್ ಪಟೇಲ್ ಸಂಚು ಎಂದ ಎಸ್​ಐಟಿ

    ನವದೆಹಲಿ: ಗುಜರಾತ್​ನ 2002ರ ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಸಿಲುಕಿಸುವ ಸಂಚಿನ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪ್ರೇರಕ ಶಕ್ತಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ವೇಳೆ ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡ ಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಹೆಸರು ಉಲೇಖಿಸಿದೆ. ಮೋದಿ ವಿರುದ್ಧ ಅವರು ದೊಡ್ಡ ಪಿತೂರಿ ನಡೆಸಿದ್ದರು ಎಂದು ಆರೋಪಿಸಿದೆ.

    ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದ ಅಹ್ಮದ್ ಪಟೇಲ್ ಕಾಂಗ್ರೆಸ್​ನ ಪ್ರಮುಖ ನಾಯಕರಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಮೋದಿಯವರ ರಾಜಕೀಯ ಜೀವನಕ್ಕೆ ಹಾನಿ ಮಾಡಲು ಪಟೇಲ್​ರನ್ನು ಬಳಸಿಕೊಂಡರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಸ್ಪಷ್ಟೀಕರಣ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

    ಗುಜರಾತ್ ಗಲಭೆಗಳಲ್ಲಿ ನರೇಂದ್ರ ಮೋದಿ ಪಾತ್ರವಿಲ್ಲ ಎಂಬ ವಿಶೇಷ ತನಿಖಾ ತಂಡದ ವರದಿ ಗಣನೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್ ಇತ್ತೀಚಿಗಷ್ಟೇ ಮೋದಿ ಅವರಿಗೆ ಕ್ಲೀನ್​ಚಿಟ್ ನೀಡಿದ ತೀರ್ಪು ಪ್ರಕಟಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪ್ರಕರಣದಲ್ಲಿ ಮೋದಿ ಬಂಧನಕ್ಕೆ ಹೋರಾಟ ನಡೆಸಿದ್ದ ತೀಸ್ತಾ ಸೆಟಲ್ವಾಡ್​ರನ್ನು ಗುಜರಾತ್ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದರು.

    ಅಹ್ಮದ್ ಪಟೇಲ್​ರನ್ನು ಸಮರ್ಥಿಸಿಕೊಂಡ ಕಾಂಗ್ರೆಸ್, ಪಟೇಲ್ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಪ್ರಧಾನಿ ಮೋದಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸೃಷ್ಟಿಸಿದ ಕೋಮು ಹತ್ಯಾಕಾಂಡದಲ್ಲಿ ತಮ್ಮದೇನೂ ಪಾತ್ರವಿಲ್ಲ. ಈ ಆಪಾದನೆಗಳಿಂದ ತಮ್ಮನ್ನು ಮುಕ್ತಗೊಳಿಸುವ ವ್ಯವಸ್ಥಿತ ತಂತ್ರದ ಭಾಗವಾಗಿ ಆರೋಪ ಮಾಡುತ್ತಿದ್ದಾರೆ. ವಿಶೇಷ ತನಿಖಾ ತಂಡ ಕೂಡ ತನ್ನ ರಾಜಕೀಯ ಯಜಮಾನನ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಿದೆ ಎಂದು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾತ್ರಾ, ಸೆಟಲ್ವಾಡ್ ಮತ್ತು ಇತರೆ ಆರೋಪಿಗಳ ನಡೆ ದುರುದ್ದೇಶಪೂರಿತ ಎಂದು ಸುಪ್ರೀಂಕೋರ್ಟ್ ಒತ್ತಡದಿಂದ ಅಭಿಪ್ರಾಯಪಟ್ಟಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಸೋನಿಯಾ ಗಾಂಧಿ ಅವರು ಮೋದಿ ವಿರುದ್ಧ ಏಕೆ ಪಿತೂರಿ ನಡೆಸಿದ್ದರು ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿ ಮೂಲಕ ರಾಷ್ಟ್ರಕ್ಕೆ ಉತ್ತರ ನೀಡಲಿ. ನಾನು ಪಟೇಲ್ ವಿರುದ್ಧ ವಾಗ್ದಾಳಿ ಮಾಡುತ್ತಿಲ್ಲ. ಏಕೆಂದರೆ ಸೋನಿಯಾ ಗಾಂಧಿ ನಿರ್ದೇಶನದಂತೆ ಅವರು ಕಾರ್ಯನಿರ್ವಹಿಸಿದ್ದರು. ಇವೆಲ್ಲದರ ಹಿಂದೆ ತಮ್ಮ ಪುತ್ರ ರಾಹುಲ್ ಗಾಂಧಿಯನ್ನು ರಾಜಕೀಯದಲ್ಲಿ ಮೇಲೆ ತರುವ ಉದ್ದೇಶವಿತ್ತು ಎಂದು ಪಾತ್ರಾ ಹೇಳಿದ್ದಾರೆ.

    ಅಫಿಡವಿಟ್​ನಲ್ಲಿ ಇರುವ ಇನ್ನಿತರ ಪ್ರಮುಖ ಅಂಶಗಳು

    ಬಿಜೆಪಿ ನಾಯಕರನ್ನು ಗಲಭೆ ಪ್ರಕರಣಗಳಲ್ಲಿ ಸಿಲುಕಿಸಲು ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ಸೆಟಲ್ವಾಡ್ ದಿಲ್ಲಿಯಲ್ಲಿ ಭೇಟಿಯಾಗುತ್ತಿದ್ದರು ಎಂದು ಎಸ್​ಐಟಿ ಅಫಿಡವಿಟ್​ನಲ್ಲಿ ದಾಖಲಾಗಿದೆ. ಕಾಂಗ್ರೆಸ್ ಪಕ್ಷ ಶಬಾನಾ, ಜಾವೇದ್​ಗೆ ಮಾತ್ರ ಏಕೆ ರಾಜ್ಯಸಭೆ ಸದಸ್ಯತ್ವ ನೀಡುತ್ತಿದೆ? ತಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿಲ್ಲ ಎಂದು 2006ರಲ್ಲಿ ಸೆಟಲ್ವಾಡ್ ಕಾಂಗ್ರೆಸ್ ನಾಯಕರೊಬ್ಬರನ್ನು ಕೇಳಿದ್ದರ ಬಗ್ಗೆ ಸಾಕ್ಷಿಯೊಬ್ಬರು ಹೇಳಿ ದ್ದನ್ನೂ ಉಲ್ಲೇಖಿಸಲಾಗಿದೆ. ಗುಜರಾತಿನಲ್ಲಿ ಮುಗ್ಧ ವ್ಯಕ್ತಿಗಳನ್ನು ಅಪರಾಧಿಗಳನ್ನಾಗಿ ಬಿಂಬಿಸುವ ತಂತ್ರಕ್ಕೆ ಪ್ರತಿಯಾಗಿ ಎದುರಾಳಿ ರಾಜಕೀಯ ಪಕ್ಷದಿಂದ ಅಕ್ರಮವಾಗಿ ಹಣಕಾಸು ನೆರವು, ಇತರ ಪ್ರಯೋಜನ, ಉಡುಗೊರೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸೆಟಲ್ವಾಡ್ ವಿರುದ್ಧ ತನಿಖೆ ಇನ್ನೂ ನಡೆಯುತ್ತಿದೆ. ಈಗ ಬಿಡುಗಡೆಯಾದರೆ, ಸಾಕ್ಷಿಗಳನ್ನು ಬೆದರಿಸಿ, ನಾಶ ಮಾಡಲು ಯತ್ನಿಸಬಹುದು ಎಂದು ವಾದಿಸಿ ಜಾಮೀನು ನೀಡಲು ವಿರೋಧಿಸಿದೆ.

    ಸೆಟಲ್ವಾಡ್ ವೈಯಕ್ತಿಕ ಬಳಕೆಗಾಗಿ ಪಟೇಲ್ ರೂ. 30 ಲಕ್ಷ ನೀಡಿದ್ದರು. ಅಂದರೆ ಸೋನಿಯಾ ಕೊಟ್ಟ ಹಣವನ್ನು ಪಟೇಲ್ ತಲುಪಿಸಿದ್ದಾರೆ. ದುರಂತ ಎಂದರೆ ಇದೇ ಸೆಟಲ್ವಾಡ್​ಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಅವರನ್ನು ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರನ್ನಾಗಿಯೂ ಮಾಡಲಾಯಿತು. ಗಲಭೆ ಸಂತ್ರಸ್ತರಿಗಾಗಿ ಇದ್ದ ಹಣವನ್ನು ವೈನ್ ಮತ್ತು ಹಾಲಿಡೇ ರೆಸಾರ್ಟ್​ಗಳಲ್ಲಿ ಖರ್ಚು ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ಕೂಡ ಹೇಳಿತ್ತು.

    | ಸಂಬಿತ್ ಪಾತ್ರಾ ಬಿಜೆಪಿ ನಾಯಕ

    ಗಾಂಧಿ ಕುಟುಂಬಕ್ಕೆ ಒತ್ತಡ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಒಳಪಟ್ಟಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದೀಗ ಗುಜರಾತ್ ಗಲಭೆಗೆ ಸಂಬಂಧಿಸಿ ಗುಜರಾತ್ ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ಅಫಿಡವಿಟ್ ಕಾಂಗ್ರೆಸ್​ಗೆ ಇನ್ನಿಲ್ಲದ ರಾಜಕೀಯ ಒತ್ತಡ ತಂದಿದೆ. ಒಂದೆಡೆ ಸೋನಿಯಾ ಗಾಂಧಿ ಇಡಿ ತನಿಖೆಗೆ ಹಾಜರಾಗಬೇಕು, ವರ್ಷಾಂತ್ಯದಲ್ಲಿ ಗುಜರಾತ್ ಚುನಾವಣೆಗಳೂ ನಡೆಯಲಿರುವುದರಿಂದ ರಾಜ್ಯ ರಾಜಕೀಯದಲ್ಲೂ ಇದು ಬಿರುಗಾಳಿ ಎಬ್ಬಿಸುವ ನಿರೀಕ್ಷೆಯಿದೆ.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts