More

    ಪಾಸಿಟಿವಿಟಿಯಲ್ಲಿ ಜಿಲ್ಲೆಗೆ ಶಿರಸಿ ಫಸ್ಟ್

    ಕಾರವಾರ: ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಶಿರಸಿ ಮೊದಲ ಸ್ಥಾನದಲ್ಲಿದೆ. ಕಳೆದ ಒಂದು ವಾರದ ಮಾಹಿತಿ (ಮೇ 15ರಿಂದ 21) ಯಂತೆ ಜಿಲ್ಲೆಯಲ್ಲಿ ಒಟ್ಟಾರೆ 13384 ಜನರ ಕೋವಿಡ್ ಪರೀಕ್ಷೆ ಮಾಡಲಾಗಿದೆ. 6171 (ಪರೀಕ್ಷೆಗೊಳಪಟ್ಟವರಲ್ಲಿ ಶೇ. 41.51) ಜನರಿಗೆ ಸೋಂಕು ಖಚಿತವಾಗಿದೆ. 6366 ಜನ ಗುಣವಾಗಿದ್ದು, 115 ಜನ (ಸೋಂಕಿತರಲ್ಲಿ ಶೇ. 1.9) ಮೃತಪಟ್ಟಿದ್ದಾರೆ. ಅದರಲ್ಲಿ ಶಿರಸಿಯಲ್ಲಿ ಅತಿ ಹೆಚ್ಚು ಎಂದರೆ ಶೇ. 57.2ರಷ್ಟು ಸೋಂಕು ಖಚಿತವಾಗಿದ್ದು. 28 ಜನ ಮೃತಪಟ್ಟಿದ್ದಾರೆ. ಮರಣ ಪ್ರಮಾಣದಲ್ಲಿ ಮುಂಡಗೋಡ ಮುಂದಿದ್ದು, ಒಟ್ಟಾರೆ ಸೋಂಕಿತರಲ್ಲಿ ಶೇ. 4.9ರಷ್ಟು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಕೋವಿಡ್ ವಾರ್ ರೂಂ ಮಾಹಿತಿಯಲ್ಲಿ ತಿಳಿಸಲಾಗಿದೆ.

    ಶೇ. 72ರಷ್ಟು ಪರೀಕ್ಷೆ: ಜಿಲ್ಲೆಯ ಜನಸಂಖ್ಯೆ ಹಾಗೂ ಆರ್​ಟಿ-ಪಿಸಿಆರ್ ಪ್ರಯೋಗಾಲಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋವಿಡ್ ಪರೀಕ್ಷೆಗೆ ಗುರಿ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 2400 ಜನರ ಗಂಟಲ ದ್ರವ ಸಂಗ್ರಹದ ಗುರಿ ಹೊಂದಲಾಗಿದೆ. ದಿನಕ್ಕೆ ಸರಾಸರಿ 2028 (ಗುರಿಯ ಶೇ. 72.83) ರಷ್ಟು ಪರೀಕ್ಷೆ ಮಾಡಲಾಗುತ್ತಿದೆ. ಸಿದ್ದಾಪುರದಲ್ಲಿ (ಶೇ. 128.71) ಯಲ್ಲಾಪುರದಲ್ಲಿ (ಶೇ. 108.55) ಗಂಟಲ ದ್ರವ ಸಂಗ್ರಹದಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ.

    ಸೋಂಕಿನ ಪ್ರಮಾಣ ಇಳಿಕೆ

    ಮೇ 5ರಿಂದ 10 ರವರೆಗಿನ ಕೇಂದ್ರ ಆರೋಗ್ಯ ಇಲಾಖೆ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ. 46.6 ರಷ್ಟಿತ್ತು. ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು. ದೇಶದ ಟಾಪ್ 15 ಜಿಲ್ಲೆಗಳಲ್ಲಿ ಉತ್ತರ ಕನ್ನಡ ಸೇರಿತ್ತು. ಈ ವಾರದ (ಮೇ 15ರಿಂದ 21) ವರದಿಯಂತೆ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ. 42ಕ್ಕೆ ಇಳಿಕೆಯಾಗಿದೆ. ಶೇ. 44.7 ರಷ್ಟಿರುವ ಮೈಸೂರು, ರಾಜ್ಯಕ್ಕೆ ಮೊದಲ ಸ್ಥಾನಕ್ಕೇರಿದೆ. ಶೇ. 40.3 ರಷ್ಟು ಪಾಸಿಟಿವಿಟಿ ಪ್ರಮಾಣ ಇರುವ ಹಾಸನ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಆದರೆ, ದೇಶದ ಅತಿ ಹೆಚ್ಚು ಪಾಸಿಟಿವಿಟಿ ಹೊಂದಿರುವ ಟಾಪ್ 10 ಜಿಲ್ಲೆಗಳ ಸಾಲಿನಲ್ಲಿ ಉತ್ತರ ಕನ್ನಡವೂ ಸೇರಿದೆ.

    1200 ಜನರಿಗೆ ಸೋಂಕು

    ಶುಕ್ರವಾರ ರಾತ್ರಿಯ ಜಿಲ್ಲಾ ಹೆಲ್ತ್ ಬುಲೆಟಿನ್​ನಂತೆ 1200 ಜನರಿಗೆ ಕೋವಿಡ್ ಖಚಿತವಾಗಿದ್ದು, 7 ಜನ ಮೃತಪಟ್ಟಿದ್ದಾರೆ. ಕಾರವಾರದಲ್ಲಿ 132, ಅಂಕೋಲಾ-36, ಕುಮಟಾ-89, ಹೊನ್ನಾವರ-59, ಭಟ್ಕಳ-64, ಶಿರಸಿ-184, ಸಿದ್ದಾಪುರ-113, ಯಲ್ಲಾಪುರ-62, ಮುಂಡಗೋಡ-174, ಜೊಯಿಡಾ-108, ದಾಂಡೇಲಿ ಮತ್ತು ಹಳಿಯಾಳ ಸೇರಿ 179, ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಕಾರವಾರ, ಹೊನ್ನಾವರ, ಸಿದ್ದಾಪುರದಲ್ಲಿ ತಲಾ 1, ಸಿದ್ದಾಪುರ ಮತ್ತು ಹಳಿಯಾಳದಲ್ಲಿ ತಲಾ ಇಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ.

    ಯುವಕರೇ ಹೆಚ್ಚು!!

    ಕಳೆದ ಒಂದು ವಾರದ ಸಾವಿನ ಪ್ರಮಾಣವನ್ನು ಪರಿಶೀಲನೆ ನಡೆಸಿದಾಗ ಶೇ. 70ರಷ್ಟು ಜನರು ವಿಳಂಬವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮೃತಪಟ್ಟಿದ್ದಾರೆ. ಇನ್ನು 35ರಿಂದ 50ರ ವಯೋಮಾನದ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿದ್ದು, ಕಂಡುಬಂದಿದೆ. 60 ವರ್ಷ ಮೇಲಿನವರು ಬೇಗನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣವಾಗುತ್ತಿದ್ದಾರೆ. ಆದರೆ, ‘ನಮಗೇನೂ ಆಗದು’ ಎಂಬ ಯುವಕರ ಮನೋಭಾವ ಅವರ ಜೀವಕ್ಕೆ ಎರವಾಗುತ್ತಿದೆ. ಇದರಿಂದ 45 ವರ್ಷ ಮೇಲ್ಪಟ್ಟ ಎಲ್ಲರನ್ನೂ ಆ ವಯೋಮಾನದ ಕೆಳಗಿನ ವಿವಿಧ ಕಾಯಿಲೆ ಇರುವ ಎಲ್ಲ ಸೋಂಕಿತರನ್ನೂ ಕೋವಿಡ್ ಕೇರ್ ಸೆಂಟರ್​ಗೆ ಸೇರಿಸಲು ನಿರ್ಧರಿಸಲಾಗಿದೆ. ಅಗತ್ಯ ಬಿದ್ದಿಲ್ಲಿ ತಕ್ಷಣ ಚಿಕಿತ್ಸೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

    ರಾಷ್ಟ್ರದಲ್ಲೇ ಅತಿ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು ಎಂದು ಗುರುತಿಸಿಕೊಂಡಿದೆ. ಹೆಚ್ಚು ಕೋವಿಡ್ ರೊಗಿಗಳನ್ನು ಹೊಂದಿದೆ ಎಂಬುದಕ್ಕಿಂತ ನಾವು ಹೆಚ್ಚು ಪರೀಕ್ಷೆ ಮಾಡಿ ಸೋಂಕಿತರನ್ನು ಗುರುತಿಸಿದ್ದೇವೆ ಎಂದು ಹೇಳಬಹುದು. ಆದರೆ, ರಾಜ್ಯದ ಇತರ ಕೆಲ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಮಾಣ ಕಡಿಮೆ ಇದೆ. ಸಾವಿನ ಪ್ರಮಾಣ ಕಡಿಮೆ ಇದೆ.

    | ಮುಲ್ಲೈ ಮುಗಿಲನ್ ಎಂ.ಪಿ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts