More

    ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಬಸ್ ತಡೆದು ಆಕ್ರೋಶ

    ಪರಶುರಾಮಪುರ: ಹೋಬಳಿ ವ್ಯಾಪ್ತಿಯ ವಿವಿಧೆಡೆ ರಸ್ತೆ ಡಾಂಬರೀಕರಣ ಹಾಗೂ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸಿರಿಮಜ್ಜನಹಳ್ಳಿ ಮಾರ್ಗದ ರಸ್ತೆ ಬಳಿ ಭಾನುವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ನೇತೃತ್ವ ವಹಿಸಿದ್ದ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಪರಶುರಾಮಪುರಕ್ಕೆ ಆಂಧ್ರದ ಸಂಪರ್ಕ ಕಲ್ಪಿಸುವ ಸಿರಿಮಜ್ಜನಹಳ್ಳಿ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ, ಕೊರಕಲು ಉಂಟಾಗಿವೆ.

    ಈ ಮಾರ್ಗದಲ್ಲಿ ವಾಹನ, ಜನ, ಜಾನುವಾರುಗಳು ಸಂಚರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಈ ಮಾರ್ಗದ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಆದರೂ ಈವರೆಗೆ ಅಧಿಕಾರಿಗಳು, ಸಂಬಂಧಿಸಿದ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಇದೇ ರೀತಿ ಗ್ರಾಮದ ಕಲ್ಯಾಣದುರ್ಗ ರಸ್ತೆಯ ಕಾನೆಹಳ್ಳ, ಪಾವಗಡ ರಸ್ತೆಯ ಕೆರೆ ಕೋಡಿಯ ಹಳ್ಳ ಸೇರಿದಂತೆ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ

    ಮಳೆಗಾಲ ಆರಂಭದ ಹಿನ್ನೆಲೆ ಇಲ್ಲಿ ವಾಹನ, ಜನ, ಜಾನುವಾರು, ದಿನನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸಲಿಕ್ಕೆ ಸಾಧ್ಯವಾಗದೇ ಸುತ್ತು ಬಳಸಿಕೊಂಡು ಹೋಗಬೇಕಾದ ದುಸ್ಥಿತಿ ಬಂದೊದಗಿದೆ.

    ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ಹೋಬಳಿ ವ್ಯಾಪ್ತಿಯ ಐದಾರು ಕಡೆಗಳಲ್ಲಿನ ಮುಖ್ಯ ರಸ್ತೆಗಳ ನಿರ್ಮಾಣ

    ಸೇರಿದಂತೆ ಕೆಲ ಕಡೆಗಳಲ್ಲಿ ಸೇತುವೆಗಳ ನಿರ್ಮಾಣ ಕೈಗೊಳ್ಳದೆ ಹೋದರೆ ಸಾರ್ವಜನಿಕರು, ರೈತ ಸಂಘಟನೆ ವತಿಯಿಂದ ಬೀದಿಗಿಳಿದು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಂಘದ ಚಳ್ಳಕೆರೆ ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ ಮಾತನಾಡಿ, ಕಳೆದ ಮಳೆಗಾಲದಲ್ಲಿ ಕಾನೆಹಳ್ಳದ ಬಳಿ ಕೊರ‌್ಲಕುಂಟೆಯ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಹಳ್ಳದಲ್ಲಿ ಬಿತ್ತು ಮೃತಪಟ್ಟರು.

    ಈಗ ಮಳೆಗಾಲ ಆರಂಭವಾದರೂ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜನ, ಜಾನುವಾರುಗಳ ಪ್ರಾಣವನ್ನೂ ಲೆಕ್ಕಿಸದೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ.

    ಸರ್ಕಾರ ಈ ಸ್ಥಳಗಳಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳದೇ ಹೋದರೆ ನಮ್ಮ ರೈತರೇ ಒಗ್ಗೂಡಿ ಇಲ್ಲಿ ರಸ್ತೆ ಸಂಚಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಇದೇ ವೇಳೆ ಪರಶುರಾಮಪುರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತ ಸಂಘಟನೆಗಳ ಪದಾಧಿಕಾರಿಗಳು ಸಿರಿಮಜ್ಜನಹಳ್ಳಿ ಮಾರ್ಗದ ರಸ್ತೆ, ಪಾವಗಡ ರಸ್ತೆಯ ಕೆರೆಯ ಕೋಡಿ ಹಾಗೂ ಕಾನೆಹಳ್ಳದ ಬಳಿ ಬಸ್ ತಡೆದು ಆಕ್ರೋಶ ಹೊರಹಾಕಿದರು.

    ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದುರಂಗಸ್ವಾಮಿ, ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ, ಹನುಮಂತರಾಯ, ಹನುಮಂತಪ್ಪ,

    ಜಂಪಣ್ಣ, ಪ್ರಕಾಶ, ಪರಮೇಶಣ್ಣ, ಬಸವರಾಜು, ರಜಾಕ್‌ಸಾಬ್, ನಿವೀನಗೌಡ, ಗೆಂಡೆತಿಮ್ಮಣ್ಣ, ರತ್ನಪ್ಪ, ಅಣ್ಣಪ್ಪ, ತಿಮ್ಮಯ್ಯ, ರಾಜು, ಕರಿಯಣ್ಣ,

    ತಿಪ್ಪೇಸ್ವಾಮಿ ಸೇರಿದಂತೆ ಪರಶುರಾಮಪುರ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts