More

    ಪಾರದರ್ಶಕ ಎಲೆಕ್ಷನ್‌ಗೆ ಸಕಲ ಸಿದ್ಧತೆ- ಚುನಾವಣಾಧಿಕಾರಿ ಸತೀಶ್ ಮಾಹಿತಿ

    ಸಿರಗುಪ್ಪ: ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಜಾರಿಗೆ ತರುವ ಎಲ್ಲ ನೀತಿ ಸಂಹಿತೆಗಳ ಪ್ರಕಾರ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್ ತಿಳಿಸಿದರು.

    ನಗರದ ತಾಲೂಕು ಚುನಾವಣಾ ಕಚೇರಿಯಲ್ಲಿ ಗುರುವಾರ ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿ, ಶೀಘ್ರ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ಘೋಷಣೆ ನಂತರ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದರು.

    ರಾಜ್ಯ ಚುನಾವಣಾ ಆಯೋಗವು ತಾಲೂಕಿನಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಧಿಕಾರಿಗಳ ವಿವಿಧ ತಂಡಗಳನ್ನು ರಚಿಸಲಾಗುವುದು. ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಕುಳಿತು ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

    ತಾಲೂಕಿನಲ್ಲಿ ಒಟ್ಟು 3123 ಮತದಾರರು 80 ವರ್ಷ ಮೇಲ್ಪಟ್ಟವರಿದ್ದು, 3817 ಅಂಗವಿಕಲರಿದ್ದಾರೆಂದು ಸಮಿಕ್ಷೆಯಿಂದ ತಿಳಿದು ಬಂದಿದೆ. ಇವರೆಲ್ಲರೂ ಮನೆಯಲ್ಲೇ ಕುಳಿತು ಮತದಾನ ಮಾಡಲು 11 ಬಿ ಫಾರಂ ಕೊಡಲಾಗುವುದು. ಇದಕ್ಕೆ ಸಂಬಂಧಿಸಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

    ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಮಾತನಾಡಿದರು. ತಾಪಂ ಇಒ ಎಂ.ಬಸಪ್ಪ, ಸಮಾಜ ಕಲ್ಯಾಣಾಧಿಕಾರಿ ರಾಜೇಶ್ವರಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಿ.ಎನ್.ಕುಮಾರ್, ಯಲ್ಲಪ್ಪ, ಶೇಕಪ್ಪ, ಶಿವಪ್ಪ, ದೊಡ್ಡ ರಾಮು ಇದ್ದರು.

    ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ: ತಾಲೂಕಿನ ಸೀಮಾಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಇಟಿಗಿಹಾಳ್, ಕೆ.ಬೆಳಗಲ್, ಮಾಟಸೂಗೂರು, ವತ್ತುಮುರುವಣಿ ಮತ್ತು ಇಬ್ರಾಹಿಂಪುರ ಬಳಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದೆಂದು ತಾಲೂಕು ಚುನಾವಣಾಧಿಕಾರಿ ಸತೀಶ್ ತಿಳಿಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾಲೂಕಿನ ಬಾಗೇವಾಡಿ, ಬಿ.ಎಂ.ಸೂಗೂರು ಗ್ರಾಮದ ಮತದಾನ ಕೇಂದ್ರಗಳು ಮತ್ತು ಜಿಪಂ ಕಚೇರಿಯ ಮತದಾನ ಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಬದಲಾಯಿಸಲಾಗಿದ್ದು, ಬಾಗೇವಾಡಿಯ ಹೊಸ ಶಾಲೆಗೆ ಮೂರು ಕೇಂದ್ರಗಳನ್ನು, ಬಿ.ಎಂ.ಸೂಗೂರು ಗ್ರಾಮದ ಹೊಸ ಶಾಲೆಯಲ್ಲಿ 2 ಕೇಂದ್ರ ಮತ್ತು ಜಿಪಂ ಇಂಜಿನಿಯರಿಂಗ್ ಕಚೇರಿ ಕಟ್ಟಡದಲ್ಲಿದ್ದ ಮತದಾನ ಕೇಂದ್ರವನ್ನು ಬಿಸಿಎಂ ಇಲಾಖೆ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ತಾಲೂಕಿನಲ್ಲಿ ಒಟ್ಟು 2,10,817 ಮತದಾರರಿದ್ದು, 1,03,880 ಪುರುಷರು, 1,06,870 ಮಹಿಳೆ ಹಾಗೂ 67 ಇತರ ಮತದಾರರಿದ್ದಾರೆ ಎಂದರು. ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾಪಂ ಇಒ ಎಂ.ಬಸಪ್ಪ, ಸಮಾಜ ಕಲ್ಯಾಣಾಧಿಕಾರಿ ರಾಜೇಶ್ವರಿ ಇದ್ದರು.

    ಇವಿಎಂ ಮತಯಂತ್ರದ ಮೂಲಕ ಮತದಾನ ನಡೆಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಇವಿಎಂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಸೆಕ್ಟರ್ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇವಿಎಂ ಮತ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯದಲ್ಲಿ 22 ಸೆಕ್ಟರ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
    | ಸತೀಶ್, ತಾಲೂಕು ಚುನಾವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts