More

    ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ

    ಸಿರಗುಪ್ಪ: ಗ್ರಾಮದಲ್ಲಿ ಮದ್ಯದ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಇಟಿಗಿಹಾಳು ಗ್ರಾಮಸ್ಥರು ಶನಿವಾರ ಸೀಮಾಂಧ್ರಕ್ಕೆ ಸಂರ್ಪಕ ಕಲ್ಪಿಸುವ ರಾಜ್ಯ ಹೆದ್ದಾರಿಯ ರಸ್ತೆ ಸಂಚಾರ ತಡೆಯುವುದರ ಜತೆಗೆ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

    ಗ್ರಾಮದ ಮುಖಂಡ ಲೋಕನಾಥ ರೆಡ್ಡಿ ಮಾತನಾಡಿ, ಮದ್ಯದ ಅಂಗಡಿ ತೆರವಿಗೆ ಎರಡ್ಮೂರು ತಿಂಗಳಿನಿಂದ ತಹಸೀಲ್ದಾರ್, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈವರೆಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರತಿದಿನ ಸೀಮಾಂಧ್ರದಿಂದ ನೂರಾರು ಜನ ಗ್ರಾಮಕ್ಕೆ ಬಂದು ಮದ್ಯದಂಗಡಿಯಲ್ಲಿ ಮದ್ಯ ಖರೀದಿಸಿ ಗ್ರಾಮದ ಕಟ್ಟೆ, ಜಮೀನುಗಳಲ್ಲಿ ಕುಳಿತು ಪಾರ್ಟಿ ಮಾಡಿ ಮದ್ಯದ ಬಾಟಲ್‌ಗಳನ್ನು ಜಮೀನುಗಳಲ್ಲಿ ಬಿಸಾಡುತ್ತಿದ್ದಾರೆ. ಮದ್ಯದಂಗಡಿ ಹತ್ತಿರವೇ ಶಾಲೆ ಮತ್ತು ಬಸ್‌ನಿಲ್ದಾಣವಿದ್ದು, ಕುಡಕರು ಮಹಿಳೆಯರು, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಊರಿನ ನೆಮ್ಮದಿಗೆ ಕಂಟಕವಾಗಿರುವ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

    ಸ್ಥಳಕ್ಕೆ ಅಬಕಾರಿ ಇಲಾಖೆ ಸಿಪಿಐ ಪ್ರಲ್ಹಾದ್ ಆಚಾರ್, ಪಿಎಸ್‌ಐ ಶಂಕರ್ ಗುಡದೂರ್, ಸಿರಗುಪ್ಪ ಸಿಪಿಐ ಟಿ.ಆರ್.ಪವಾರ್ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ಬಳಿಕ ಗ್ರಾಮದಲ್ಲಿ ಇಂದಿನಿಂದ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ ಬಳಿಕ ಗ್ರಾಮದ ಜನರು ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts