More

    ಬಿ.ಸತ್ಯನಾರಾಯಣ ಅವರ ಪುಣ್ಯತಿಥಿ ಮುಗೀತಾ ಇದ್ದಂತೆ ಜೆಡಿಎಸ್ ಅಭ್ಯರ್ಥಿ ಯಾರೆಂಬ ಚರ್ಚೆ ಶುರುವಾಯ್ತು..

    ತುಮಕೂರು: ಶಿರಾ ಶಾಸಕ ಬಿ.ಸತ್ಯನಾರಾಯಣ ಪುಣ್ಯತಿಥಿಗೆ ಜನಸಾಗರವೇ ಹರಿದುಬಂದಿತ್ತು. ಸಚಿವ ಜೆ.ಸಿ.ಮಾಧುಸ್ವಾಮಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ತಿಪ್ಪೇಸ್ವಾಮಿ ಮತ್ತಿತರರು ಪುಷ್ಪನಮನ ಸಲ್ಲಿಸಿ ಸತ್ಯಣ್ಣ ಅವರನ್ನು ಸ್ಮರಿಸಿದರು.

    ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬಿ.ಸತ್ಯನಾರಾಯಣ ಜತೆಗಿನ ಒಡನಾಟವನ್ನು ಸ್ಮರಿಸುವ ಜತೆಗೆ ಭವಿಷ್ಯದಲ್ಲಿಯೂ ಸತ್ಯಣ್ಣ ಅವರ ಕುಟುಂಬ ಹಾಗೂ ಬೆಂಬಲಿಗರ ಹಿತ ಕಾಯುವುದಾಗಿ ಭರವಸೆ ನೀಡಿದರು. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಬಿ.ಸತ್ಯನಾರಾಯಣ ಅವರ ನಡೆ ನಮಗೆಲ್ಲಾ ದಾರಿದೀಪವಾಗಿದೆ, ಅವರ ಸಾಕಷ್ಟು ಚುನಾವಣೆಯಲ್ಲಿ ನಾನು ಪ್ರಚಾರ ನಡೆಸಿ ಅವರ ಅನುಭವದ ಪಾಠ ಕಲಿತಿದ್ದೆ, ರಾಜಕೀಯ ಸಂಕಷ್ಟದ ಸಮಯದಲ್ಲಿ ಜೆಡಿಎಸ್ ಪರವಾಗಿದ್ದ ಕೆಲವೇ ಶಾಸಕರಲ್ಲಿ ಸತ್ಯಣ್ಣ ಪ್ರಮುಖರು, ನಮ್ಮ ಕುಟುಂಬ ಸತ್ಯಣ್ಣ ಕುಟುಂಬದ ಬೆನ್ನಿಗೆ ನಿಲ್ಲಲಿದೆ ಎಂದರು.

    ಸತ್ಯನಾರಾಯಣ ಪುಣ್ಯತಿಥಿ ನಡೆದ ಬೆನ್ನಲ್ಲೇ ಶಿರಾ ಕ್ಷೇತ್ರದಲ್ಲಿ ಶೀಘ್ರದಲ್ಲಿಯೇ ನಡೆಯಲಿರುವ ಉಪಚುನಾವಣೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಜೆಡಿಎಸ್, ಕಾಂಗ್ರೆಸ್ ಹಾಗೂ ಕ್ಷೇತ್ರದಲ್ಲಿ ಅಷ್ಟೇನು ಇತಿಹಾಸವಿಲ್ಲದ ಬಿಜೆಪಿ ಕೂಡ ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿವೆ.  ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ರಾಜಕೀಯ ಜೀವನದ ಅಳಿವು, ಉಳಿವಿನ ಪ್ರಶ್ನೆ ಕೂಡ ಈ ಉಪಚುನಾವಣೆ ಫಲಿತಾಂಶವೇ ನಿರ್ಧರಿಸಲಿದೆ.

    ಯಾರಾಗಬಹುದು ಜೆಡಿಎಸ್ ಅಭ್ಯರ್ಥಿ?: ಪುಣ್ಯತಿಥಿಯಲ್ಲಿ ಸತ್ಯಣ್ಣನ ಗುಣಗಾನದ ಜತೆಗೆ ಉಪಚುನಾವಣೆಯಲ್ಲಿ ಜೆಡಿಎಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ವಿಷಯದ ಬಗ್ಗೆಯೇ ನೆರೆದಿದ್ದ ಜನರು ರ್ಚಚಿಸುತ್ತಿದ್ದರು. ಸತ್ಯಣ್ಣ ಕುಟುಂಬ ಸದಸ್ಯರಲ್ಲಿ ಒಬ್ಬರು ಅಥವಾ ದೇವೇಗೌಡರ ಕುಟುಂಬವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರವರಿಗೆ ತೋಚಿದಂತೆ ಮಾತನಾಡಿಕೊಂಡರು.

    ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಡಾ.ರಾಜೇಶ್​ಗೌಡ, ಮುಖಂಡ ಉಗ್ರೇಶ್, ಸಿ.ಆರ್.ಉಮೇಶ್ ಮತ್ತಿತರರ ಹೆಸರ ಜತೆಗೆ ಸ್ಥಳೀಯ ಪ್ರಭಾವಿ ಸಮುದಾಯದ ಮಠಾಧೀಶರೊಬ್ಬರ ಹೆಸರೂ ಕೆಲವು ಗುಂಪುಗಳಲ್ಲಿ ಕೇಳಿಬಂತು. ಕಾಂಗ್ರೆಸ್​ನಲ್ಲಿ ಟಿ.ಬಿ.ಜಯಚಂದ್ರ ಅಭ್ಯರ್ಥಿಯಾಗುವುದು ಖಚಿತವಾಗಿದ್ದರೂ ಡಾ.ರಾಜೇಶ್​ಗೌಡ ಬಗ್ಗೆಯೂ ಚರ್ಚೆಯಾಗುತ್ತಿರುವುದು ಸುಳ್ಳಲ್ಲ. ಈ ಹಿಂದಿನ ಚುನಾವಣೆಗಳ ಇತಿಹಾಸದಲ್ಲಿ ಅಷ್ಟೇನು ಬಲವಿಲ್ಲದ ಬಿಜೆಪಿ ಕೂಡ ಕ್ಷೇತ್ರವನ್ನು ತೆಕ್ಕೆಗೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿದೆ.

    ಟಿಬಿಜೆ ಜತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಚುನಾವಣೆ ಗೆಲ್ಲಲು ವಿವಿಧ ಕಸರತ್ತು ಆರಂಭಿಸಿ ಸುದ್ದಿಯಾಗಿದ್ದಾರೆ. ಕೆ.ಎನ್.ರಾಜಣ್ಣ ಕೂಡ ಸ್ಪರ್ಧಿಸುವ ಮಾತನಾಡಿ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದ್ದಾರೆ. ಜತೆಗೆ ಕ್ಷೇತ್ರದಲ್ಲಿ ಗೆಲುವು ನಿರ್ಧರಿಸುವ ಬಲವಿರುವ ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಹಾಗೂ ಹಿಂದುಳಿದ ವರ್ಗದ ಬೆಂಬಲದೊಂದಿಗೆ ವಿಧಾನಸಭೆಗೆ ಆಯ್ಕೆ ಮಾಡಲು ಜಿಲ್ಲೆಯ ಒಂದು ರಾಜಕೀಯ ಗುಂಪು ಕಸರತ್ತು ನಡೆಸುತ್ತಿರುವುದು ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.

    ಸಂಸದ ಪ್ರಜ್ವಲ್​ರೇವಣ್ಣರ ಕಾಲಿಗೆರಗಿದ ಮಧುಗಿರಿ ಶಾಸಕ : ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅವರು ನೂರಾರು ಜನರ ಮುಂದೆಯೇ ತಮಗಿಂತ ವಯಸ್ಸಿನಲ್ಲಿ ಕಿರಿಯರಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾಲಿಗೆರಗಿ ಆಶೀರ್ವಾದ ಪಡೆದದ್ದು ಆಶ್ಚರ್ಯ ಮೂಡಿಸಿತು. ರಾಜ್ಯ ರಾಜಕಾರಣದಲ್ಲಿ ಹಿರಿಯರಿಗೆ ಕಾಲಿಗೆರಗಿ ವಿಧೇಯತೆ ಅಥವಾ ಅಭಿಮಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆಯಾದರೂ ವರಿಷ್ಠರ ವಂಶದ ಕುಡಿ ಎಂಬ ಕಾರಣಕ್ಕೆ ಅತೀ ಕಿರಿಯ ಸಂಸದನ ಕಾಲಿಗೆರಗಿದ್ದು ಅಪರೂಪವಾಗಿದೆ. ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾಲಿಗೆರಗಿ ಆಶೀರ್ವಾದ ಪಡೆದಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

    ಸತ್ಯನಾರಾಯಣ ಅವರ ಕುಟುಂಬ ಬಯಸಿದರೆ ಉಪಚುನಾವಣೆಯಲ್ಲಿ ಗಟ್ಟಿಕಾಳನ್ನು ಜೆಡಿಎಸ್​ನಿಂದ ಸ್ಪರ್ಧೆಗೆ ಇಳಿಸಲಿದ್ದೇವೆ, ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರನ್ನು ಉಳಿಸಿಕೊಳ್ಳುವ ಕೆಲಸವನ್ನು ಪಕ್ಷ ಮಾಡಲಿದೆ. ಚುನಾವಣೆ ಘೊಷಣೆಯಾದರೆ ಸ್ಥಳೀಯರ ಅಭಿಪ್ರಾಯ ಪಡೆದು ವರಿಷ್ಠರು ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ.

    ಪ್ರಜ್ವಲ್ ರೇವಣ್ಣ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts