More

    ಶಿರಾದಲ್ಲಿ ಘಟಾನುಘಟಿಗಳ ಮತಪ್ರಚಾರ ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

    ಶಿರಾ: ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದ್ದು, ಘಟಾನುಘಟಿ ನಾಯಕರು ಅಖಾಡಕ್ಕಿಳಿದು ಅಭ್ಯರ್ಥಿ ಪರವಾಗಿ ಮತಬೇಟೆ ಆರಂಭಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುರುವಾರ ಕೂಡ ಪ್ರಚಾರ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಮತಯಾಚಿಸಿದರು.

    ಕಾಡಜ್ಜನ ಪಾಳ್ಯದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಈ ಭಾಗದಲ್ಲಿ ನೀರು ತಂದು ಭಗೀರಥ ಎಂದು ಕರೆಸಿಕೊಂಡಿದ್ದಾರೆ. ಇಲ್ಲಿನ ಜನರು ಹಣಕ್ಕೆ ಮಾರುಹೋಗದೆ ಸ್ವಾಭಿಮಾನಿಗಳಾಗಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.

    ಬಿಜೆಪಿ ಅಭ್ಯರ್ಥಿ ಹಾಗೂ ಅವರ ತಂದೆ ನನ್ನ ಬಳಿ ಬಂದು ಕಾಂಗ್ರೆಸ್ ಟಿಕೆಟ್ ಕೇಳಿದರು, ಮೊದಲು ಪಕ್ಷದ ಪರವಾಗಿ ಕೆಲಸ ಮಾಡಿ ಜಯಚಂದ್ರ ನಮ್ಮ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದೆ. ಜೆಡಿಎಸ್‌ನಲ್ಲಿಯೂ ಟಿಕೆಟ್ ಕೇಳಿ ಕಡೆಗೆ ಬಿಜೆಪಿಯಲ್ಲಿ ಸ್ಪರ್ಧಿಸಿದ್ದಾರೆ, ಕಾರ್ಯಕರ್ತರ ಪಕ್ಷ ಎಂದು ಹೇಳುವ ಬಿಜೆಪಿಗೆ ಇಲ್ಲಿ ಕಾರ್ಯಕರ್ತನೇ ಸಿಗಲಿಲ್ಲ ಎಂದು ಛೇಡಿಸಿದರು. ನನ್ನ ಸರ್ಕಾರದಲ್ಲಿ ಬಡವರಿಗೆ ನೀಡಿದ 7 ಕೆಜಿ ಅಕ್ಕಿಯನ್ನು ಕಡಿತ ಮಾಡಿದ ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆದಿದೆ, ಯಡಿಯೂರಪ್ಪ ಏನೂ ಅವರ ಮನೆಯಿಂದ ತಂದುಕೊಡುತ್ತಿದ್ದರೆ ಎಂದು ಪ್ರಶ್ನಿಸಿದರು.

    ನಾವು ಜಾರಿಗೊಳಿಸಿದ್ದ ಹಾಲಿಗೆ 5 ರೂ. ಪ್ರೋತ್ಸಾಹಧನ ಮಕ್ಕಳಿಗೆ ಉಚಿತ ಹಾಲು, ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್, ಕುರಿ ಸತ್ತರೆ 5 ಸಾವಿರ, ದನಕರು ಸತ್ತರೆ 10 ಸಾವಿರ ಯೋಜನೆಗಳನ್ನು ಬಿಜೆಪಿ ನಿಲ್ಲಿಸಿರುವುದೇ ಅವರ ಸಾಧನೆ ಎಂದರು. ಶಿರಾ ಜನರು ಸ್ವಾಭಿವಾನಿಗಳು, ಮರ್ಯಾದೆ ಇರುವವರು, ಬಿಜೆಪಿ ಆಮಿಷಕ್ಕೆ ಬಲಿಯಾಗಬೇಡಿ. ಮತ್ತೆ ಒಳ್ಳೆಯ ಕಾಂಗ್ರೆಸ್ ಸರ್ಕಾರ ಬರಬೇಕೆಂದರೆ ಈ ಚುನಾವಣೆಯಲ್ಲಿ ಜಯಚಂದ್ರ ಗೆಲ್ಲಿಸಬೇಕು, ನಾನು ಬಡವರಿಗಾಗಿ ಮಾಡಿದ್ದ ಕೆಲಸವನ್ನು ನೆನಪಿಸಿಕೊಳ್ಳಿ ಎಂದು ಹೇಳಿದರು. ಅಭ್ಯರ್ಥಿ ಟಿ.ಬಿ.ಜಯಚಂದ್ರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಚಳ್ಳಕೆರೆ ಶಾಸಕ ರುಮೂರ್ತಿ, ಕೂಡ್ಲಿಗಿ ವಾಜಿ ಶಾಸಕ ಪಿ.ಟಿ.ಪರಮೇಶ್ವರ್‌ನಾಯಕ್ ಮತ್ತಿತರ ಜತೆ ಸ್ಥಳೀಯ ಮುಖಂಡರು ಇದ್ದರು.

    ಮಾಸ್ಕ್ ತೆಗೀಬೇಡಿ ಎಂದ ಸಿದ್ದರಾಮಯ್ಯ : ಮಾಸ್ಕ್ ತೆಗೆದು ವಾತನಾಡಿ ಎಂದು ಜನರು ಕೇಳಿದರೂ ಸಿದ್ದರಾಮಯ್ಯ ಒಪ್ಪಲಿಲ್ಲ, ನಾನು ಮಾಸ್ಕ್ ತೆಗೆಯುವುದಿಲ್ಲ ನೀವು ಮಾಸ್ಕ್ ತೆಗೆಯಬೇಡಿ. ಕರೊನಾ ಒಂದು ಗಂಭೀರವಾದ ಕಾಯಿಲೆ. ನೀವು ಊರಿನಲ್ಲಿದ್ದಾಗಲೂ ಯಾವುದೇ ಕಾರಣಕ್ಕೂ ಮಾಸ್ಕ್ ತೆಗೆಯಬೇಡಿ. ನಾನೊಂದು ಬಾರಿ ಕಾಯಿಲೆಯ ಗಂಭೀರತೆ ಅನುಭವಿಸಿದ್ದೇನೆ. ನಿಮಗ್ಯಾರಿಗೂ ಬರುವುದು ಬೇಡ ಎಂದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ಗೆ ರಾಜಕೀಯ ಜ್ಞಾನ ಕಡಿಮೆ, ಅವರೊಬ್ಬ ಯಕಶ್ಚಿತ್ ರಾಜಕಾರಣಿ, ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ರಾಜ್ಯಾಧ್ಯಕ್ಷನಾದವರು ಮತ ಕೇಳುವಾಗ ಅಧಿಕಾರದಲ್ಲಿದ್ದು ಏನು ಮಾಡಿದ್ದೇವೆ ಎಂದು ಹೇಳುವುದನ್ನು ಬಿಟ್ಟು ಬಂಡೆ, ಹುಲಿ ಎಂದರೇ ಜನರ ಹೊಟ್ಟೆ ತುಂಬುವುದಿಲ್ಲ.
    ಸಿದ್ದರಾಮಯ್ಯ ವಿಪಕ್ಷ ನಾಯಕ

    ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ನಿರುದ್ಯೋಗಿಗಳಾದವರು ಯಾರೆಂದರೆ ಯಾರು ಅವರಪ್ಪನ ಹೆಸರು, ತಾತನ ಹೆಸರು ಹೇಳಿಕೊಂಡು ಯುವರಾಜರಾಗಿದ್ದರೊ ಅವರು ಮಾತ್ರ. ಅರ್ಹರಿಗೆ, ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗ ಸಿಕ್ಕಿದೆ.
    ತೇಜಸ್ವಿಸೂರ್ಯ
    ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts