More

    ಯುವ ಗಾಯಕಿ ನೇಣಿಗೆ ಶರಣು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ, ನಾಗರಬಾವಿಯಲ್ಲಿ ಕೃತ್ಯ

    ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಉದಯೋನ್ಮುಖ ಹಿನ್ನೆಲೆ ಗಾಯಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ನಾಗರಬಾವಿ ನಿವಾಸಿ ಸುಷ್ಮಿತಾ (26) ಮೃತ ಗಾಯಕಿ. ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಷ್ಮಿತಾ ಪಾಲಕರು ದೂರು ಕೊಟ್ಟಿದ್ದಾರೆ.

    ಸುಷ್ಮಿತಾ ಪತಿ ಶರತ್ ಕುಮಾರ್ ಹಾಗೂ ಆತನ ಸಹೋದರಿ ಗೀತಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅನ್ನಪೂರ್ಣೆಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

    ಹಾಲುತುಪ್ಪ, ಶ್ರೀಸಾಮಾನ್ಯ ಚಿತ್ರ ಸೇರಿ ಕೆಲ ಸಿನಿಮಾಗಳಿಗೆ ಸುಷ್ಮಿತಾ ಹಾಡು ಹಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಮಾರಂಭವೊಂದರಲ್ಲಿ ಶರತ್ ಪಾಲಕರು ಸುಷ್ಮಿತಾಳನ್ನು ಗಮನಿಸಿದ್ದರು. ಆಕೆಯ ತಾಯಿಯನ್ನು ಒತ್ತಾಯಿಸಿ ಶರತ್ ಜತೆ ವಿವಾಹ ಮಾಡಿಸಿದ್ದರು. ದಂಪತಿ ಕುಮಾರಸ್ವಾಮಿ ಲೇಔಟ್​ನಲ್ಲಿ ವಾಸವಿದ್ದರು.

    ಎಂಬಿಎ ಪದವೀಧರ ಶರತ್ ಕಾರು ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದು, ವಿವಾಹವಾಗಿ ಕೆಲ ತಿಂಗಳವರೆಗೆ ಪತ್ನಿ ಜತೆ ಅನ್ಯೋನ್ಯವಾಗಿದ್ದ. ಇತ್ತೀಚೆಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸಲು ಆರಂಭಿಸಿದ್ದ. ಅಲ್ಲದೆ, ಆತನ ಸಹೋದರಿ ಕೂಡ ಸುಷ್ಮಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ಆರೋಪಿಸಿದ್ದಾರೆ.

    ಪತಿಯ ಕಿರುಕುಳ ತಾಳಲಾರದೆ ಸುಷ್ಮಿತಾ ಭಾನುವಾರ (ಫೆ.16) ನಾಗರಬಾವಿಯಲ್ಲಿ ತವರುಮನೆಗೆ ಬಂದಿದ್ದಳು. ಈ ವೇಳೆ ತಾಯಿ ಮನೆಯಲ್ಲಿ ಇರಲಿಲ್ಲ. ಕೆ.ಆರ್.ಪೇಟೆ ಸಮೀಪದ ಊರಿಗೆ ಹೋಗಿದ್ದರು. ಸಹೋದರ ಸಚಿನ್ ಮಾತ್ರ ಇದ್ದ ಮನೆಯಲ್ಲಿದ್ದ. ರಾತ್ರಿ ಊಟ ಮಾಡಿ ಕೊಠಡಿಗೆ ತೆರಳಿದ ಸುಷ್ಮಿತಾ, ವಾಟ್ಸ್ ಆಪ್​ನಲ್ಲಿ ಡೆತ್​ನೋಟ್ ಬರೆದು ತಾಯಿ ಹಾಗೂ ಸಹೋದರನಿಗೆ ಕಳುಹಿಸಿ ಕೊಠಡಿಯಲ್ಲಿನ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮೀನಾಕ್ಷಿ ಮತ್ತು ಸಹೋದರ ಮೆಸೇಜ್ ನೋಡಿಲ್ಲ. ಸೋಮವಾರ (ಫೆ.17) ಬೆಳಗ್ಗೆ ಮೀನಾಕ್ಷಿ ಊರಿನಿಂದ ಮನೆಗೆ ವಾಪಾಸಾಗಿದ್ದು, ಕೊಠಡಿ ಬಳಿ ಹೋದಾಗ ಬಾಗಿಲು ತೆಗೆದಿಲ್ಲ. ಬಳಿಕ ಸುಷ್ಮಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಾಯಿಗೆ ಓದಲು ಆಗಿಲ್ಲ: ಪುತ್ರಿ ಆತ್ಮಹತ್ಯೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುಷ್ಮಿತಾ ತಾಯಿ ಮೀನಾಕ್ಷಿ, ಪುತ್ರಿ ನನಗೆ ಸಂದೇಶ ಕಳುಹಿಸಿದ್ದಳು. ಇಂಗ್ಲಿಷ್ ಸರಿಯಾಗಿ ಬಾರದ ಕಾರಣ ಮೆಸೇಜ್ ನೋಡಿ ಸುಮ್ಮನಾದೆ. ಬೇರೆಯವರಿಗೆ ತೋರಿಸಿದ್ದರೂ ನನ್ನ ಪುತ್ರಿಯನ್ನು ಬದುಕಿಸಿಕೊಳ್ಳುತ್ತಿದ್ದೆ ಎಂದು ಕಣ್ಣೀರು ಹಾಕಿದರು. 20 ಲಕ್ಷ ರೂ. ಖರ್ಚು ಮಾಡಿ ಶರತ್ ಜತೆ ವಿವಾಹ ಮಾಡಿಕೊಟ್ಟಿದ್ದೆ.

    150 ಗ್ರಾಂ ಚಿನ್ನಾಭರಣ ನೀಡಿದ್ದೆ. ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳದ ಬಗ್ಗೆ ನಾಲ್ಕು ಬಾರಿ ಸುಷ್ಮಿತಾ ಹೇಳಿಕೊಂಡಿದ್ದಳು. ನಿತ್ಯವೂ ಹಣಕ್ಕಾಗಿ ಹಿಂಸೆ ನೀಡುತ್ತಾರೆ ಎಂದಿದ್ದಳು. ಎಲ್ಲರ ಜೀವನದಲ್ಲೂ ಮನಸ್ತಾಪ ಸಹಜ. ಅನುಸರಿಸಿಕೊಂಡು ಹೋಗುವಂತೆ ಆಕೆಗೆ ಬುದ್ಧಿ ಹೇಳಿದ್ದೆ. ಶರತ್ ನಾಲ್ಕು ಬಾರಿ ಹಲ್ಲೆ ನಡೆಸಿದ್ದನ್ನು ನನ್ನ ಬಳಿ ಹೇಳಿಕೊಂಡಿದ್ದಳು ಎಂದು ಮೀನಾಕ್ಷಿ ಆರೋಪಿಸಿದ್ದಾರೆ.

    ವಾಟ್ಸ್​ಆಪ್​ನಲ್ಲಿ ಡೆತ್​ನೋಟ್ ಸಂದೇಶ: ನೇಣಿಗೆ ಶರಣಾಗುವ ಮುನ್ನ ಸುಷ್ಮಿತಾ, ತಾಯಿ ಹಾಗೂ ಸಹೋದರನ ಮೊಬೈಲ್​ಗೆ ವಾಟ್ಸ್ ಆಪ್​ನಲ್ಲಿ ಡೆತ್​ನೋಟ್ ಸಂದೇಶ ಕಳುಹಿಸಿದ್ದಾಳೆ.ಅದರಲ್ಲಿ ‘ಅಮ್ಮ ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನಗೆ ಅವರು (ಶರತ್) ತಮ್ಮ ದೊಡ್ಡಮ್ಮನ ಮಾತು ಕೇಳಿ ಚಿತ್ರಹಿಂಸೆ ಕೊಡುತ್ತಿದ್ದರು. ಮಾತು ಎತ್ತಿದ್ರೆ ಮನೆ ಬಿಟ್ಟು ಹೋಗು ಎನ್ನುತ್ತಿದ್ದರು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ಕಾರಣ. ಎಷ್ಟು ಬೇಡಿಕೊಂಡರೂ, ಕಾಲು ಹಿಡಿದರೂ ಅವರ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ಸಾಯುವುದಕ್ಕೆ ನನಗೆ ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದಲೂ ಇದೇ ರೀತಿ ಹಿಂಸೆ ನೀಡುತ್ತಿದ್ದರು, ಅದನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts