ಸಿಂಧನೂರು: ಭಾರತದಲ್ಲಿರುವಷ್ಟು ದೇವಾಲಯಗಳು ಜಗತ್ತಿನ ಯಾವ ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಶ್ರೀ ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.
ಬೊಮ್ಮನಾಳ (ಇಜೆ) ಗ್ರಾಮದಲ್ಲಿ ಶುಕ್ರವಾರ ಈಶ್ವರ, ಗಣಪತಿ, ನಂದಿ, ಆಂಜನೇಯ, ವೆಂಕಟೇಶ್ವರ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಬೆಲೆ ಇದೆ. ಈ ಸಂಪ್ರದಾಯಗಳು ಇಡೀ ಜಗತ್ತಿಗೆ ಮಾದರಿಯಾಗಿವೆ. ದೇವಾಲಯಗಳನ್ನು ಕಟ್ಟಿಕೊಂಡು ಶಾಂತಿ ಪಡೆಯುವ ವ್ಯವಸ್ಥೆ ಭಾರತದಲ್ಲಿದೆ ಎಂದರು.
ಭಕ್ತರು ಯಾವುದೇ ಸಹಾಯ ಪಡೆಯದೆ ಅಪರೂಪದ ಶಿಲೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ದೇವರುಗಳನ್ನು ಒಂದೆಡೆ ಪ್ರತಿಷ್ಠಾಪಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಧರ್ಮವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ರಂಭಾಪುರಿ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿ, ಸನ್ಮಾರ್ಗದ ಬದುಕು ಕಟ್ಟಿಕೊಳ್ಳಲು ಜಗದ್ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದರು. ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಒಳಗಿನ ಮೈಲಿಗೆ ತೊಳೆಯಲು ಧರ್ಮ ಬೇಕೆಂದು ತಿಳಿಸಿದರು.
ನವಲಕಲ್ ಶ್ರೀ ಸೋಮನಾಥ ಶಿವಾಚಾರ್ಯರು ಮಾತನಾಡಿದರು. ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಸ್ವಾಮೀಜಿ, ಗುಂಡ ಶ್ರೀಶೈಲ ಶಾಖಾಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತುರ್ವಿಹಾಳ ಪುರವರ ಮಠದ ಶ್ರೀ ಅಮರಗುಂಡ ಶಿವಾಚಾರ್ಯರು, ಬಂಗಾರಿಕ್ಯಾಂಪ್ ಶ್ರೀ ಸದಾನಂದ ಶರಣರು, ರೌಡಕುಂದದ ಶ್ರೀ ಶಿವಯೋಗಿ ಶಿವಾಚಾರ್ಯರು, ಶ್ರೀ ಅಮರಯ್ಯಸ್ವಾಮಿ, ಶ್ರೀ ಪಂಪಯ್ಯಸ್ವಾಮಿ, ಮಾಜಿ ಸಚಿವ ಗಾಲಿ ಜನಾದರ್ನರಡ್ಡಿ, ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ಸದಸ್ಯ ಸೋಮನಗೌಡ ಬಾದರ್ಲಿ ಇದ್ದರು.
ಗ್ರಾಮದ ಹೊರವಲಯದ 45ನೇ ಉಪಕಾಲುವೆಯಿಂದ ಗ್ರಾಮದವರೆಗೆ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಿಂದ ನಡೆಯಿತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭ-ಕಳಸದೊಂದಿಗೆ ಭಾಗವಹಿಸಿದ್ದರು.