More

    ದೇಶದ ಬಡತನ ತೊಲಗಿಸಲು ಆಗಿಲ್ಲ

    ಸಿಂಧನೂರು: ದೇವ ಭಯವನ್ನು ಬಿಟ್ಟ ವ್ಯಕ್ತಿಗಳು ಕೋಮುವಾದ, ಭಯೋತ್ಪಾದನೆ ಸೇರಿದಂತೆ ಹಲವು ವಿಧದಲ್ಲಿ ದ್ವೇಷ ಹರಡುವ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಲಾಲ್‌ಹುಸೇನ್ ಕಂದಗಲ್ ಹೇಳಿದರು.

    ನಗರದ ಹಳೇ ಬಜಾರಿನ ಮಸ್ಜೀದ್ ಎ ಹುದಾದಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಸದ್ಬಾವನಾ ವೇದಿಕೆ ಮತ್ತು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.

    ಕಳೆದ ಆರು ದಶಕಗಳ ಕಾಲ ದೇಶವನ್ನಾಳಿದ ಸರ್ಕಾರ ಗರೀಬಿ ಹಟಾವೋ ಘೋಷಣೆಯೊಂದಿಗೆ ಆಡಳಿತ ನಡೆಸಿದೆ. ಆದಾಗ್ಯೂ ಬಡತನ ತೊಲಗಿಲ್ಲ. ಇತ್ತೀಚಿನ 10 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಉಳ್ಳವರಿಗೆ ಬೆಣ್ಣೆ, ಹಸಿದವರಿಗೆ ಬಣ್ಣದ ಮಾತು ಹೇಳುವ ಮೂಲಕ ದೇಶದ ಜನತೆಯನ್ನು ಭ್ರಮೆಯಲ್ಲಿ ಇಡಲಾಗಿದೆ. ಬಣ್ಣದ ಮಾತಿನಿಂದ ಸ್ವಾರ್ಥ ಈಡೇರಿಸಿಕೊಳ್ಳುವ ಧೋರಣೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಉಪವಾಸಕ್ಕೆ ಎಲ್ಲ ಧರ್ಮದಲ್ಲಿಯೂ ವಿಶೇಷ ಮಹತ್ವ ನೀಡಲಾಗಿದೆ. ಇದರಿಂದ ಪರರ ಹಸಿವನ್ನು ಅರ್ಥ ಮಾಡಿಕೊಳ್ಳಲು, ಮನುಷ್ಯರಲ್ಲಿ ಸಮಾನತೆ, ಪಂಚೇಂದ್ರಿಗಳ ಮೇಲೆ ನಿಯಂತ್ರಣ, ಏಕದೇವೋಪಾಸನೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

    ರಾಮಕೃಷ್ಣ ಆಶ್ರಮದ ಸದಾನಂದ ಮಹಾರಾಜರು ಮಾತನಾಡಿ, ಪರಮಹಂಸರು, ವಿವೇಕಾನಂದರು ಎಲ್ಲ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಭಗವಂತನು ಒಬ್ಬನೇ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಎಂದು ತಿಳಿಸಿದರು.
    ಸಾನಿಧ್ಯ ವಹಿಸಿದ್ದ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮವು ದೇವರು ನಿರಾಕಾರ ರೂಪದಲ್ಲಿದ್ದಾನೆಂದು ನಂಬಿದೆ ಎಂದರು.

    ಸದ್ಬಾವನಾ ವೇದಿಕೆಯ ಅಧ್ಯಕ್ಷ ಡಾ.ಚನ್ನನಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಡಿ.ಎಚ್.ಕಂಬಳಿ, ಮುಖಂಡ ಶೇಖ್‌ಸಾಬ ಸಾಹುಕಾರ ಮುಳ್ಳೂರು, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನ್, ಶಾಂತಿ ಸಂದೇಶ ಸಂಸ್ಥೆಯ ಪಂಪಯ್ಯಸ್ವಾಮಿ ಸಾಲಿಮಠ ಇದ್ದರು. ತನ್ವೀರ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts