More

    ದತ್ತಿದಾನ ಶಾಸನಗಳು ರಾಜಮಹಾರಾಜರ ಕಾಲದಲ್ಲಿದ್ದವು

    ಸಿಂದಗಿ: ಸಾವಿರಾರು ವರ್ಷಗಳ ಇತಿಹಾಸವಿರುವ ದ್ರಾವಿಡ ಭಾಷೆ ಅತಿ ದೊಡ್ಡ ಭಾಷೆಯಾಗಿದ್ದು, ಕನ್ನಡವು ಸಂಪತ್ಭರಿತವಾಗಿದೆ ಎಂದು ಹಿರಿಯ ಸಾಹಿತಿ ಡಾ. ಎಂ.ಎಂ. ಪಡಶೆಟ್ಟಿ ಹೇಳಿದರು.
    ನಗರದ ಸಿಎಂ ಮನಗೂಳಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕನ್ನಡ ಎಂಬುದು ಒಂದು ಭಾಷೆಯಾಗದೆ, ಪ್ರತಿಯೊಬ್ಬ ಕನ್ನಡಿಗನ ಬದುಕಾಗಿ ಬೆಳಕಾಗಿ ಅದು ಕಲೆ, ಸಾಹಿತ್ಯ, ಸಂಗೀತ ವಾಂಗ್ಮಯದಲ್ಲಿ ಸಾಕಾರಗೊಳ್ಳುತ್ತದೆ. ದತ್ತಿದಾನ ಶಾಸನಗಳು ರಾಜಮಹಾರಾಜರ ಕಾಲದಲ್ಲಿ ಇತ್ತು. ಅದನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ ಮುಂದುವರೆಸಿಕೊಂಡು ಹೋಗುವ ಸಂಪ್ರದಾಯ ಸ್ತುತ್ಯಾರ್ಹವಾಗಿದೆ. ಜತೆಗೆ ದತ್ತಿ ಪ್ರಶಸ್ತಿ ನೀಡುವುದು, ಸಾಧಕರನ್ನು ಗುರುತಿಸುವುದು, ಕನ್ನಡದ ಚಟುವಟಿಕೆಯನ್ನು ನಿರಂತರ ನಡೆಸಿಕೊಂಡು ಹೊರಟಿರುವುದು ಅಭಿನಂದನೀಯವಾಗಿದೆ ಎಂದರು.
    ಬಳಗಾನೂರ ಶಾಲೆ ಮುಖ್ಯ ಶಿಕ್ಷಕ ಎಸ್.ಬಿ. ಪಾಗದ ಉಪನ್ಯಾಸ ನೀಡಿ, ಅನುಭಾವವೆಂಬುದು ಕೂಸು ಕಂಡ ಕನಸು, ಅದೊಂದು ಅನುಸಂಧಾನ, ಪ್ರಗತಿ, ಧರ್ಮದ ಹಾದಿಯಲ್ಲಿ ಜೀವನ ಮುಕ್ತಿಯ ಮಾರ್ಗವಾಗಿದೆ. ಅಂತರಂಗದ ಕಸ ಗುಡಿಸಲು ಬುದ್ಧ ಬಂದ, ಅಜ್ಞಾನದ ಕತ್ತಲೆ ಕಳೆಯಲು ಶಂಕರ ಬಂದ, ಅಸ್ಪಶ್ಯತೆಯ ಮೈಲಿಗೆ ತೊಳೆಯಲು ಬಸವ ಬಂದ, ಮೋಹದ ರಾಡಿ ತೊಳೆಯಲು ಮಹಾವೀರ ಬಂದ, ಆದರೂ ವ್ಯವಸ್ಥೆ ಸರಿಯಾಗಲಿಲ್ಲ. ಈಗ ಹೇಳುವುದೆಲ್ಲ ಮುಗಿದಿದೆ. ತತ್ವಾದರ್ಶಗಳನ್ನು ಆಚರಣೆಗೆ ತರುವುದೊಂದೆ ಬಾಕಿ ಇದೆ ಎಂದರು.
    ಪಿಇಎಸ್ ಕಾಲೇಜಿನ ಉಪನ್ಯಾಸಕ ಬಿ.ಜಿ. ಅಂಜುಟಗಿ ಮಾತನಾಡಿ, ದೇಶ ಕಟ್ಟಲು ಬಂದೂಕು ಹಿಡಿದು ಗಡಿ ಕಾಯುವ ಯೋಧರಂತೆಯೇ ದೇಶಭಕ್ತಿಯ ವಿಶಾಲ ಮನೋಭಾವದ ಯುವಕರ ಅಗತ್ಯವಿದೆ ಎಂದರು.
    ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಬಿ. ಸಿಂದಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿದ್ಧಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ದೇವರೆಡ್ಡಿ, ಪ್ರಾಧ್ಯಾಪಕ ಅರವಿಂದ ಮನಗೂಳಿ ಇದ್ದರು. ದತ್ತಿ ಸಂಚಾಲಕ ಸಾಯಿಬಣ್ಣ ದೇವರಮನಿ ನಿರೂಪಿಸಿದರು. ಡಾ. ಪ್ರಕಾಶ ರಾಗರಂಜಿನಿ ವಂದಿಸಿದರು. ಪ್ರಾಧ್ಯಾಪಕ ಎಂ.ಬಿ. ಬಿರಾದಾರ, ಜಿ.ಪಿ. ಕಾಂಬಳೆ, ಎಂ.ಎಸ್. ಹೊಸಮನಿ, ಎಂ.ಎಲ್. ಪರಮಾನಂದ, ವಿ.ಡಿ. ಮಾಸ್ತಿ ಮತ್ತು ಶೋಭಾ ಪೂಜಾರಿ ಮತ್ತಿತರರಿದ್ದರು.

    ದತ್ತಿದಾನ ಶಾಸನಗಳು ರಾಜಮಹಾರಾಜರ ಕಾಲದಲ್ಲಿದ್ದವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts