More

    ಸರಳ ವಿವಾಹ ಜನರ ಆಶಯ

    ಕೊಲ್ಲೂರು: ಯುವಪೀಳಿಗೆ, ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರ ಆಶಯದಂತೆ ಸರಳ ವಿವಾಹ ಯೋಜನೆ ಆಯೋಜಿಸಲಾಗಿದ್ದು, ಈ ಮೂಲಕ ಸಮಾಜದಲ್ಲಿ ಆದಶರ್ಪ್ರಾಯ ಜೀವನ ನಡೆಸುವಂತಾಗಲಿ ಎಂಬ ಹರಕೆ, ಹಾರೈಕೆ ಸರ್ಕಾರದ್ದು ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗಮಂಟಪದಲ್ಲಿ ಬುಧವಾರ ಉಚಿತ ಸರಳ ಸಾಮೂಹಿಕ ವಿವಾಹ (ಸಪ್ತಪದಿ)ಕ್ಕೆ ಚಾಲನೆ ನೀಡಿ ಮಾತನಾಡಿದರು.

    ಶಾಸಕರು ನವದಂಪತಿಗೆ ದೇವಳ ವತಿಯಿಂದ ಕೊಡುವ ಪಂಚೆ, ಶಲ್ಯ ವರನಿಗೆ ಹಾಗೂ ವಧುವಿಗೆ 6 ಗ್ರಾಂ ಚಿನ್ನದ ಗುಂಡು ಇರುವ ಕರಿಮಣಿ ಸರ ಹಸ್ತಾಂತರಿಸಿದರು. ಒಟ್ಟು ನಾಲ್ಕು ಜೋಡಿ ಶ್ರೀ ಮೂಕಾಂಬಿಕಾ ಸಾನ್ನಿಧ್ಯದಲ್ಲಿ ಸತಿಪತಿಗಳಾದರು.

    ದೇವಳಕ್ಕೆ ಭೇಟಿ ನೀಡಿದ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಸಪ್ತಪದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಂಪತಿಗೆ ಶುಭ ಹಾರೈಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ.ಅತುಲ್‌ಕುಮಾರ್ ಶೆಟ್ಟಿ, ಶೇಖರ ಪೂಜಾರಿ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್, ಮಾಜಿ ಸದಸ್ಯರಾದ ಕೆ.ರಮೇಶ ಗಾಣಿಗ, ಕೆ.ವಿ.ಶ್ರೀಧರ ಅಡಿಗ ಭಾಗವಹಿಸಿದ್ದರು. ಸಂತೋಷ್ ಕೊಠಾರಿ ಕಾರ್ಯಕ್ರಮ ನಿರ್ವಹಿಸಿ, ವಿಘ್ನರಾಜ್ ಆಚಾರ್ಯ ವಂದಿಸಿದರು.

    ಇತ್ತೀಚಿನ ದಿನಗಳಲ್ಲಿ ಪೈಪೋಟಿಯೆಂಬಂತೆ ಮದುವೆಗಳಿಗೆ ಲಕ್ಷಾಂತರ ರೂ. ಖರ್ಚು ಮಾಡುವ ಮೂಲಕ ಅನಗತ್ಯ ದುಂದು ವೆಚ್ಚ ಮಾಡುವುದನ್ನು ನೋಡುತ್ತಿದ್ದೇವೆ. ಇದರಿಂದ ಸಾಮಾನ್ಯ ಜನರಿಗೆ ಆರ್ಥಿಕವಾಗಿ ಹಿನ್ನಡೆಯಾಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಸರಳ ಹಾಗೂ ಸಾಮೂಹಿಕ ವಿವಾಹ ಮಾಡಿಕೊಳ್ಳುವುದರಿಂದ ಆರ್ಥಿಕ ಹೊರೆ ತಗ್ಗಿಸಬಹುದು.
    ಬಿ.ಎಂ.ಸುಕುಮಾರ ಶೆಟ್ಟಿ
    ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts