More

    ಮಾರಿ ಜಾತ್ರೆಗೆ ಸಿಹಿಮೊಗೆ ಸಜ್ಜು

    ಶಿವಮೊಗ್ಗ: ಎರಡು ವರ್ಷಕ್ಕೊಮ್ಮೆ ಇತಿಹಾಸ ಹಾಗೂ ಪುರಾಣಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆಗೆ ಶಿವಮೊಗ್ಗ ಸಜ್ಜಾಗಿದೆ. ಮಾ.12ರಿಂದ ನಡೆಯುವ ಐದು ದಿನಗಳ ಜಾತ್ರೆಗೆ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ಇಡೀ ನಗರ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.

    ಜಾತ್ರೆ ಹಿನ್ನೆಲೆಯಲ್ಲಿ ಕೋಟೆ ರಸ್ತೆ, ಎಸ್‌ಪಿಎಂ ರಸ್ತೆ, ಗಾಂಧಿಬಜಾರ್ ಒಳಗೊಂಡಂತೆ ಎಲ್ಲೆಡೆ ಬಂಟಿಂಗ್ಸ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು ಇಡೀ ನಗರವನ್ನು ಸಿಂಗರಿಸಲಾಗಿದೆ. ವಿವಿಧ ನಾಯಕರ ಹೆಸರಲ್ಲಿ ಜಾತ್ರೆಗೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಾತ್ರೆ ಬಗ್ಗೆ ಆಟೋಗಳ ಮೂಲಕ ಪ್ರಚಾರ ಮಾಡುವ ಕಾರ್ಯ ಭರದಿಂದ ಸಾಗಿದೆ.
    ಶಿವಮೊಗ್ಗ ನಗರವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿದೆ. ವೀರಭದ್ರೇಶ್ವರ ಟಾಕೀಸ್ ರಸ್ತೆ, ಕುವೆಂಪು ರಸ್ತೆ, ನೆಹರು ರಸ್ತೆ, ಜೈಲ್ ರಸ್ತೆ ಸೇರಿ ಅನೇಕ ಕಡೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತಿದೆ. ಮಾರಿಕಾಂಬ ದೇವಸ್ಥಾನದಿಂದ ಗಾಂಧಿಬಜಾರ್ ರಸ್ತೆ ಸೇರಿ ಶಿವಪ್ಪನಾಯಕ ವೃತ್ತದವರೆಗೆ ಲಕ್ಷಾಂತರ ಭಕ್ತರು ಬಂದುಹೋಗುವ ಕಾರಣ ಸರದಿಯಲ್ಲಿ ನಿಲ್ಲುವವರಿಗೆ ಬಿಸಿಲಿನ ತಾಪ ತಟ್ಟದಂತೆ ಪರದೆ ವ್ಯವಸ್ಥೆ ಮಾಡಲಾಗಿದೆ.

    ಗಮನ ಸೆಳೆದ ಚಂದ್ರಘಂಟಾ ದೇವಿ ಕಲಾಕೃತಿ
    ಗಾಂಧಿಬಜಾರ್ ಮಹಾದ್ವಾರದಲ್ಲಿ ಅಮರಶಿಲ್ಪ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ, ಶಿಲ್ಪಿ ಜೀವನ್ ನಿರ್ಮಿಸಿದ ಚಂದ್ರಘಂಟಾ ದೇವಿ ಕಲಾಕೃತಿ ಗಮನ ಸೆಳೆಯಿತು. ನವದುರ್ಗೆಯರಲ್ಲಿ ಪ್ರಮುಖವಾಗಿರುವ ಚಂದ್ರಘಂಟಾ ದೇವಿಯ ಕಲಾಕೃತಿಯನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಕ್ರೇನ್ ಮೂಲಕ ಕಲಾಕೃತಿಯನ್ನು ಕೂರಿಸಿದ ಬೆನ್ನಲ್ಲೇ ಜನರು ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts