More

    ಸಿಗಂದೂರು ವಿವಾದ ಭುಗಿಲೇಳಲು ಕಾಗೋಡು ತಿಮ್ಮಪ್ಪ ಕಾರಣ

    ಸಾಗರ: ಸಿಗಂದೂರು ದೇವಸ್ಥಾನದ ವಿವಾದ ಭುಗಿಲೇಳಲು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರಣ ಎಂದು ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಆಪಾದಿಸಿದ್ದಾರೆ. ಮೊದಲು ಈ ವಿಷಯ ಪ್ರಸ್ತಾಪ ಮಾಡಿದ್ದು ಅವರೇ. ಇದೀಗ ಕಾಂಗ್ರೆಸ್ಸಿಗರೆಲ್ಲಾ ಒಂದಾಗಿ ಸಿಗಂದೂರು ವಿವಾದವನ್ನು ಒಂದೊಂದು ಬಗೆಯಲ್ಲಿ ವಿಶ್ಲೇಷಿಸಿ ಸಿಗಂದೂರು ರಾಮಪ್ಪ ಅವರ ಹೆಸರನ್ನು ಹಾಳುಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್ಟರು ಅಪಾರ ಹಣ ಮಾಡಿದ್ದಾರೆ. ದೇವಸ್ಥಾನಕ್ಕೆ ಅಪಾರ ಹಣ, ಆಭರಣ ಬರುತ್ತಿದ್ದು ಅದನ್ನು ಮುಜರಾಯಿಗೆ ಸೇರಿಸಬೇಕು ಎಂದು ಮೊದಲು ಒತ್ತಾಯ ಮಾಡಿದ್ದೇ ಕಾಗೋಡು ತಿಮ್ಮಪ್ಪ. ಆದರೆ ಕಾಂಗ್ರೆಸ್ ಮುಖಂಡರು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

    ಸಿಗಂದೂರು ದೇವಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು 2015 ಮತ್ತು 2017ರಲ್ಲಿ ಜಿಲ್ಲಾಧಿಕಾರಿಗೆ ಉಪವಿಭಾಗಾಕಾರಿ ವರದಿ ಸಲ್ಲಿಸಿದ್ದಾರೆ. ದೇವಸ್ಥಾನ ಸೇರಿದಂತೆ ಅಕ್ರಮ ಕಟ್ಟಡ ತೆರವು ಮಾಡಲು ತಹಸೀಲ್ದಾರ್​ಗೆ ಉಪವಿಭಾಗಾಧಿಕಾರಿ ಆದೇಶ ನೀಡಿದ್ದಾರೆ. ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಾ ಬಂದಿವೆ. ಈ ಎಲ್ಲ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರೇ ಒಂದಲ್ಲ ಒಂದು ಅಧಿಕಾರದ ಹುದ್ದೆಯಲ್ಲಿದ್ದರು. ಈಗ ಮಾತನಾಡುತ್ತಿರುವ ಕಾಗೋಡು ತಿಮ್ಮಪ್ಪ ಆಗ ಏಕೆ ಅವರು ಮೌನವಾಗಿದ್ದರು ಎಂದು ಪ್ರಶ್ನಿಸಿದರು.

    ಬಿಜೆಪಿ ಸರ್ಕಾರ ಈಡಿಗ ಜನಾಂಗಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಬಿಜೆಪಿಯಲ್ಲಿ ಅತಿಹೆಚ್ಚು ಈಡಿಗ ಸಮುದಾಯದ ಚುನಾಯಿತ ಪ್ರತಿನಿಧಿಗಳಿದ್ದಾರೆ. ಯಡಿಯೂರಪ್ಪ ಅವರು ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಈಡಿಗ ಸಮಾಜಕ್ಕೆ ಶಿವಮೊಗ್ಗದಲ್ಲಿ 1 ಎಕರೆ ಜಾಗ ಮಂಜೂರು ಮಾಡಿದ್ದು, ಸಮುದಾಯ ಭವನ ನಿರ್ವಿುಸಲು 1 ಕೋಟಿ ರೂ. ಅನುದಾನ ನೀಡಿದ್ದಾರೆ. ಜಿಲ್ಲೆಯ ಬಹುತೇಕ ಈಡಿಗ ಸಮುದಾಯ ಭವನಕ್ಕೆ ಬಿಜೆಪಿ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಅವರ ಪಾತ್ರ ಪ್ರಮುಖವಾಗಿದೆ ಎಂದರು.

    ಸಿಗಂದೂರು ವಿವಾದದ ಬಗ್ಗೆ ಮಾತನಾಡುತ್ತಿರುವ ಬಹುತೇಕ ಈಡಿಗ ಮುಖಂಡರು ಕಾಂಗ್ರೆಸ್​ನವರಾಗಿದ್ದಾರೆ. ಇದು ಜನಾಂಗದ ಒಕ್ಕೊರಲಿನ ಧ್ವನಿ ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ಬೇಳೆ ಬೇಯಿಸಿಕೊಳ್ಳಲು ಸಮೂಹವನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಅದೇ ರೀತಿ ಶೇಷಗಿರಿ ಭಟ್ ವಿಷಯದಲ್ಲಿ ಸಹ ಭಟ್ಟರ ಪರವಾಗಿ ಮಾತನಾಡುತ್ತಿರುವವರು ಕೆಲವೇ ಬ್ರಾಹ್ಮಣ ಮುಖಂಡರಾಗಿದ್ದಾರೆಯೆ ವಿನಃ ಸಮೂಹದ ಧ್ವನಿ ಅಲ್ಲ ಎಂದರು.

    ರಾಜ್ಯಸಭಾ ಸದಸ್ಯರಾಗಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಗಂದೂರು ದೇವಸ್ಥಾನ, ಅದರ ಅಭಿವೃದ್ದಿ ಬಗ್ಗೆ ಏನು ಗೊತ್ತಿದೆ. ಅವರು ಸಹ ಸಿಗಂದೂರು ವಿವಾದದೊಳಗೆ ಬಿಜೆಪಿಯನ್ನು ಎಳೆದು ತರುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

    ಬಿಜೆಪಿ ತಾಲ್ಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ರವಿಕುಮಾರ್, ಸಿ.ಮಂಜಪ್ಪ, ದೇವೇಂದ್ರಪ್ಪ ಯಲಕುಂದ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts