More

    ಶರಣರ ಕಾಯಕ ಸಂಸ್ಕೃತಿ ಅಳವಡಿಸಿಕೊಳ್ಳಿ: ಸಿದ್ಧೇಶ್ವರಶ್ರೀ

    ವಿಜಯಪುರ: ಜಗತ್ತಿಗೆ ಶ್ರೇಷ್ಠ ಅನುಭಾವಿ ಅಣ್ಣ ಬಸವಣ್ಣನನ್ನು ನೀಡಿದ ಹಿರಿಮೆ ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ, ಇಂತಹ ಪಾವನ ನೆಲದಲ್ಲಿ ಜೀವಿಸುವ ನಾವೆಲ್ಲರೂ ಧನ್ಯರು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಭಾರತ ವಿಕಾಸ ಸಂಗಮ, ಶ್ರೀ ಸಿದ್ಧೇಶ್ವರ ಸಂಸ್ಥೆ, ವೀರಶೈವ ಮಹಾಸಭಾ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ‘ಅಮರಗಣಂಗಳ ಕಾಯಕ ಚಿತ್ರ ದರ್ಶನ’ ಶರಣರ ಕುರಿತ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

    ಜಗತ್ತಿಗೆ ಕಾಯಕ ಸಿದ್ಧಾಂತ ಮೊದಲಾದ ಉದಾತ್ತ ಸಂದೇಶಗಳನ್ನು ನೀಡಿದ ಶ್ರೇಷ್ಠ ಅನುಭಾವಿ ಅಣ್ಣ ಬಸವಣ್ಣ, ಕಾಯಕ ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡಿದ್ದ ಬಸವಾದಿ ಶರಣರ ಕುರಿತಾದ ಅರ್ಥಪೂರ್ಣವಾದ ಗ್ರಂಥವನ್ನು ಹೊರತರುತ್ತಿರುವುದು ಸಂತೋಷದ ಸಂಗತಿ. ಪ್ರತಿಯೊಬ್ಬ ಶರಣರ ಕಾಯಕವನ್ನು ಚಿತ್ರ ಸಮೇತವಾಗಿ ಅವರ ಕಾಯಕದ ವಿವರ ಹಾಗೂ ಸಂಕ್ಷಿಪ್ತ ಮಾಹಿತಿಯನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ.ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋದರೆ ಸಾಕ್ಷಾತ್ ನೂರಾರು ಶರಣರನ್ನು ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ. ಅಷ್ಟೊಂದು ಸುಂದರವಾಗಿ ಈ ಪುಸ್ತಕ ಮೂಡಿಬಂದಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

    ಭಾರತ ವಿಕಾಸ ಸಂಗಮದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯ ಒಡನಾಡಿಗಳಾಗಿ ನಾವು ಬದುಕಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ರಾಜಕಾರಣದ ಪ್ರಭಾವದಿಂದಾಗಿ ನಾವು ಧರ್ಮ, ಸಂಸ್ಕೃತಿಯಿಂದ ವಿಮುಖವಾಗಿ ಬದುಕುತ್ತಿದ್ದೇವೆ. ಅಹಂಕಾರ, ದ್ವೇಷ ಮೊದಲಾದ ದುರ್ಗುಣಗಳು ಹೆಚ್ಚಾಗುತ್ತಿವೆ. ಕಾಯಕ, ದಾಸೋಹವನ್ನು ಪ್ರತಿಪಾದಿಸಿದ ಬಸವಾದಿ ಶರಣರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಧರ್ಮ, ಸಂಸ್ಕೃತಿ ಹಾಗೂ ಕಾಯಕದ ಮಾರ್ಗದಲ್ಲಿ ನಡೆದರೆ ಪ್ರವಾಹದಂತೆ ಕಾಡುತ್ತಿರುವ ವೈಷಮ್ಯ, ಅಹಂಕಾರ ಎಂಬ ದುರ್ಗುಣಗಳು ಸಂಪೂರ್ಣ ದೂರವಾಗಿ ಮಾನವ ಜನ್ಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.

    ಬಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಆಶೀವರ್ಚನ ನೀಡಿದರು. ಶ್ರೀ ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ನಿರ್ದೇಶಕ ಸಂ.ಗು. ಸಜ್ಜನ, ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥ ಎನ್.ಎಂ. ಬಿರಾದಾರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ, ಮಾಜಿ ಶಾಸಕ ಆರ್.ಆರ್. ಕಲ್ಲೂರ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತೆ ಮೀನಾಕ್ಷಿ ಕಲ್ಲೂರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಸಂಘಟಕರಾದ ವಿ.ಸಿ. ನಾಗಠಾಣ, ಮ.ಗು. ಯಾದವಾಡ, ಸಿದ್ಧರಾಮಪ್ಪ ಉಪ್ಪಿನ, ಡಾ.ಸೋಮಶೇಖರ ವಾಲಿ, ಡಾ.ಎಂ.ಎಸ್. ಚಾಂದಕವಠೆ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts