More

    ಒಂದು ಜೋಡಿ ಹೋರಿಯ ಬೆಲೆ ಬರೋಬ್ಬರಿ 6.5 ಲಕ್ಷ ರೂ.! ; ಸಿದ್ಧಗಂಗಾ ಮಠದ ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ ರಾಸುಗಳು

    ತುಮಕೂರು: ಕೇಳಲು ಆಶ್ಚರ್ಯ ಎನಿಸಿದರೂ ನಾವು, ನೀವು ನಂಬಲೇಬೇಕು. ಇಲ್ಲಿ ಒಂದು ಜೋಡಿ ಹೋರಿಯ ಬೆಲೆ ಬರೋಬ್ಬರಿ 6.5 ಲಕ್ಷ ರೂ. ಅಂದರೆ ಉಳುಮೆಗೆ ಕೊಂಡುಕೊಳ್ಳುವ ಟ್ರ್ಯಾಕ್ಟರ್ ಬೆಲೆಗೆ ಸಮ. ಸಿದ್ಧಗಂಗಾ ಮಠದ ಐತಿಹಾಸಿಕ ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದನಗಳ ಪರಿಷೆ ನಡೆಯುತ್ತಿದ್ದು, ನಾಡಿನೆಲ್ಲೆಡೆಯಿಂದ ಜಾತ್ರೆಗೆ ರೈತರು ನೆಚ್ಚಿನ ರಾಸುಗಳನ್ನು ಕರೆತಂದಿದ್ದು, ವ್ಯಾಪಾರ ಭರಾಟೆ ಸಾಗಿದೆ.

    ಜಾತ್ರೆಯಲ್ಲಿ 15 ಸಾವಿರ ಬೆಲೆಯಿಂದ 6.5 ಲಕ್ಷದವರೆಗೂ ಹೋರಿಗಳು ಇವೆ. 2 ಲಕ್ಷ ರೂ. ಮೇಲ್ಪಟ್ಟು ಬೆಲೆಬಾಳುವ ಆರೋಗ್ಯ, ದೃಢಕಾಯದ 80ಕ್ಕೂ ಹೆಚ್ಚು ಜೋಡಿ ಎತ್ತುಗಳು ಆಕರ್ಷಣೀಯವೆನಿಸಿವೆ. ಬೆಲೆಬಾಳುವ ಎತ್ತುಗಳ ಮೆರವಣಿಗೆ ಪ್ರತಿನಿತ್ಯ ಸಂಜೆ ನಡೆಯುತ್ತಿದ್ದು, ದನಗಳ ಜಾತ್ರೆಗೆ ಮತ್ತಷ್ಟು ಮೆರುಗು ತಂದುಕೊಡುತ್ತಿದೆ. ಗುರುವಾರ ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ದನಗಳ ಜಾತ್ರೆ ನಡೆಯುತ್ತಿದ್ದು, ಡಾ.ಶಿವಕುಮಾರ ಸ್ವಾಮೀಜಿ ಅವರ ನೆಚ್ಚಿನ ಕಾರ್ಯಕ್ರಮ ಎನಿಸಿದ್ದ ದನಗಳ ಜಾತ್ರೆ ಅಷ್ಟೇ ವೈಭವದಿಂದ ಮುಂದುವರಿದಿದೆ. ಉತ್ತಮ ರಾಸುಗಳ ಆಯ್ಕೆಗಾಗಿ ಪಶುಪಾಲನಾ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಪಶು ಇಲಾಖೆ ವೈದ್ಯರು, ಅನುಭವಿ ರೈತರು, ವರ್ತಕರು ಸೇರಿ 14 ಸದಸ್ಯರಿದ್ದರು.

    ಜಾತ್ರೆಯಲ್ಲಿ 60 ರಿಂದ 65 ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಯಿತು. ಪ್ರಶಸ್ತಿಗಾಗಿ ಬಿತ್ತನೆ ಹೋರಿ ಮತ್ತು ಎತ್ತುಗಳು ಎಂಬ ಎರಡು ವಿಭಾಗದಲ್ಲಿ ರಾಸುಗಳನ್ನು ಆಯ್ಕೆ ಮಾಡಲಾಯಿತು. ಬಿತ್ತನೆ ಹೋರಿ ವಿಭಾಗದಲ್ಲಿ ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿ ಕೂಡಿದ ಹೋರಿ ಹಾಗೂ ಜತೆ ಎತ್ತಿನ ವಿಭಾಗದಲ್ಲೂ ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿ ಕೂಡಿದ ಎತ್ತುಗಳು ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.

    ಮುಂಜಾಗ್ರತಾ ಕ್ರಮ: ಸಾವಿರಾರು ರಾಸುಗಳು ಒಂದೆಡೆ ಸೇರುವ ಜಾಗದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿದ್ದು, ಪಶುಸಂಗೋಪನಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

    ಹಾಲು ಹಲ್ಲಿನ ಹೋರಿ: ವಿಭಾಗದಲ್ಲಿ ನೆಲಮಂಗಲ ತಾಲೂಕು ಚೀಣಿಹಳ್ಳದ ಪರಮೇಶ್ ದ್ವಿತೀಯ, ರಾಮನಗರ ತಾಲೂಕು ತಾಳವಾಡಿಯ ಶಿವಕುಮಾರ್ ತೃತೀಯ ಹಾಗೂ ಆರು ಜನರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

    ಎರಡು ಹಲ್ಲಿನ ಹೋರಿ: ರಾಮನಗರ ತಾಲೂಕು ದೇವರದೊಡ್ಡಿಯ ಚಿಕ್ಕಣ್ಣ ದ್ವಿತೀಯ, ತುಮಕೂರು ತಾಲೂಕು ಮುತ್ಸಂದ್ರದ ನಾರಾಯಣಪ್ಪ ಹಾಗೂ ಅರಕಲಗೂಡುನ ಮಂಜಯ್ಯ ತೃತೀಯ ಹಾಗೂ ಐವರಿಗೆ ಸಮಾಧಾನಕರ ಬಹುಮಾನ.

    ಆರು ಹಲ್ಲಿನ ಎತ್ತುಗಳು: ಕೊರಟಗೆರೆ ತಾಲೂಕಿನ ನಾಗೇಶ್, ಗೆದ್ದಲಹಳ್ಳಿಯ ಮಹಮದ್ ಇಸ್ಮಾಯಿಲ್, ಚಿಕ್ಕಣ್ಣ ದೇವರಹಟ್ಟಿಯ ಪಾಪಣ್ಣ ಪ್ರಥಮ, ಅಮ್ಮನಘಟ್ಟದ ಹೋರಿ ಈರಣ್ಣ, ಮರಳೂರಿನ ಕೃಷ್ಣಪ್ಪ ದ್ವಿತೀಯ, ಬೆಂ.ಉತ್ತರ ತಾಲೂಕಿನ ಪುಟ್ಟಪ್ಪ ತೃತೀಯ ಬಹುಮಾನ.

    ಎರಡು ಹಲ್ಲಿನ ಎತ್ತುಗಳು: ರಾಜಾಜಿನಗರದ ರಘು ಪ್ರಥಮ, ಸ್ವಾಂದೇನಹಳ್ಳಿಯ ಗಂಗರಾಜು ದ್ವಿತೀಯ, ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಟಿ.ಎಲ್.ನಾಗರಾಜು ತೃತೀಯ ಬಹುಮಾನ.

    ನಾಲ್ಕು ಹಲ್ಲಿನ ಎತ್ತುಗಳು: ರಾಮನಗರ ಜಿಲ್ಲೆ ವಿರೂಪಸಂದ್ರದ ಹೊನ್ನಗಂಗಯ್ಯ ಪ್ರಥಮ, ರಾಜಾಜಿನಗರದ ರಘು, ಚಿಕ್ಕಣ್ಣ ದೇವರಹಟ್ಟಿಯ ಪಾಪಣ್ಣ ದ್ವಿತೀಯ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಎಸ್.ಗೊಲ್ಲಹಳ್ಳಿಯ ಕಾಳಹನುಮಯ್ಯ ತೃತೀಯ ಬಹುಮಾನ ಪಡೆದರು.

    ಬೆಲೆಬಾಳುವ ಹೋರಿಗಳು: ದ್ಯಾವಪ್ಪ ಎಂಬುವವರ 1 ಜೋಡಿ ಹೋರಿಗೆ ಬರೋಬ್ಬರಿ 6.5 ಲಕ್ಷ. ಈ ಎತ್ತುಗಳನ್ನು ಮಕ್ಕಳಂತೆ ಜೋಪಾನ ಮಾಡಲಾಗುತ್ತಿದೆ. ಇವು ಹಾಲು, ಮೊಸರು, ಮೊಟ್ಟೆ, ಬೆಲ್ಲ, ಹಿಂಡಿ, ಬೂಸ ತಿಂದು ಮಜಬೂತಾಗಿ ಬೆಳೆದಿವೆ. ದಿನಕ್ಕೊಮ್ಮೆ ಮಾಲಿಷ್ ಕೂಡ ಮಾಡಲಾಗುವುದು. ಜಾತ್ರೆಯಲ್ಲಿ ಈ ಜೋಡಿಗೆ ಅತ್ಯಂತ ಬೇಡಿಕೆ ಕಂಡುಬಂದಿದ್ದು 8 ಲಕ್ಷಕ್ಕೆ ಮಾರಾಟವಾಗುತ್ತವೆ ಎಂಬ ವಿಶ್ವಾಸ ಮಾಲೀಕರದ್ದು. ಇಂತಹ ಸಾಕಷ್ಟು ರಾಸುಗಳು ಜಾತ್ರೆಯಲ್ಲಿವೆ.

    8 ಸಾವಿರಕ್ಕೂ ಹೆಚ್ಚು ರಾಸುಗಳು: ಜಾತ್ರೆಗೆ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾ., ದೊಡ್ಡಬಳ್ಳಾಪುರ ಜಿಲ್ಲೆಗಳು ಸೇರಿ ಜಿಲ್ಲೆಯ ಲ್ಲೆಡೆಯಿಂದ 8 ಸಾವಿರಕ್ಕೂ ಹೆಚ್ಚು ರಾಸುಗಳು ಬಂದಿವೆ. ರೈತರಿಗೆ ಲೋಪವಾಗದಂತೆ ನೀರು, ನೆರಳು, ಮೇವು ವ್ಯವಸ್ಥೆಯನ್ನು ಮಠದಲ್ಲಿ ಕಲ್ಪಿಸಲಾಗಿದೆ.

    ಸಿದ್ಧಗಂಗೆ ಜಾತ್ರೆಯಲ್ಲಿ ಉತ್ತಮ ರಾಸುಗಳು ಬರುವುದು ವಾಡಿಕೆಯಾಗಿದೆ, ದೇಶೀಯ ತಳಿ ರಾಸುಗಳ ವೈಭವ ಕಣ್ತುಂಬಿಕೊಳ್ಳುವುದೇ ಚಂದ. ಎರಡು ವಿಭಾಗಗಳಲ್ಲೂ ಉತ್ತಮ ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ.
    ಕೋರಿ ಮಂಜುನಾಥ್, ಆಯ್ಕೆ ಸಮಿತಿ ಸದಸ್ಯ

    ಸಿದ್ಧಗಂಗಾ ಮಠದ ಜಾತ್ರೆಯಲ್ಲಿ ರೈತರನ್ನು ಉತ್ತೇಜಿಸುವ ಸಲುವಾಗಿ ಬಹುಮಾನ ನೀಡಲಾಗುತ್ತಿದೆ. ರೈತರಿಗೆ ಉಪಯೋಗುವ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುವುದು ನಾಡಿಗೆ ಮಾದರಿ ಎನಿಸಿದೆ.
    ದೇವಪ್ಪ, ಹಳ್ಳಿಕಾರ್ ಹೋರಿಯ ಮಾಲೀಕ

    ದೇಶೀಯ ತಳಿಗಳನ್ನು ರಕ್ಷಿಸುತ್ತಿರುವ ರೈತರಿಗೆ ಸರ್ಕಾರದಿಂದ ಸಹಕಾರ, ಸೌಲಭ್ಯವಿಲ್ಲ. ಹೋರಿಗಳನ್ನು ರಕ್ಷಿಸಿ, ಸಾಕಲು ಸಾವಿರಾರು ರೂ.ಖರ್ಚಾಗುತ್ತದೆ. ದೇಶೀಯ ತಳಿಗಳ ರಕ್ಷಿಸಲು ಸರ್ಕಾರ ವಿಶೇಷ ಯೋಜನೆ ತರಲಿ.
    ಸುನೀಲ್, ರೈತ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts