More

    ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ಗೆ ಚುನಾವಣೆ ಕಳೆ

    ಪರಶುರಾಮ ಭಾಸಗಿ ವಿಜಯಪುರ

    ಮಹಾಮಾರಿ ಕರೊನಾ ನಡುವೆಯೇ ಪ್ರತಿಷ್ಟಿತ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಗೆ ಮುನ್ನುಡಿ ಬರೆಯಲಾಗಿದ್ದು ಚುನಾವಣೆ ಅಧಿಕಾರಿಯನ್ನಾಗಿ ಸಹಕಾರಿ ಉಪ ನಿಬಂಧಕ ಪಿ.ಬಿ. ಕಾಳಗಿ ಅವರನ್ನು ನೇಮಕ ಮಾಡಲಾಗಿದೆ.
    ಜೂ. 10 ರಂದೇ ಸಹಕಾರಿ ಸಂಘಗಳ ಜಂಟಿ ನಿಬಂಧಕರು ಹಾಗೂ ಸಹಕಾರಿ ಚುನಾವಣೆ ಪ್ರಾಧಿಕಾರದ ಚುನಾವಣೆ ಅಧಿಕಾರಿ ಎಂ.ಲೀಲಾ ನೇಮಕ ಆದೇಶ ಹೊರಡಿಸಿದ್ದು ಆ ಮೂಲಕ ಚುನಾವಣೆ ಪ್ರಕ್ರಿಯೆ ಆರಂಭಗೊಂಡಂತಾಗಿದೆ. ಕಳೆದ ಫೆ. 29, 2020ರಂದೇ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರು ಚುನಾವಣೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದನ್ನಾಧರಿಸಿ ಚುನಾವಣೆ ಅಧಿಕಾರಿಯನ್ನು ನೇಮಿಸಿರುವ ಪ್ರಾಧಿಕಾರ ಹಂತ ಹಂತವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆದೇಶಿಸಿದೆ. ಕರೊನಾ ಮುನ್ನೆಚ್ಚರಿಕೆಯೊಂದಿಗೆ ಪ್ರಕ್ರಿಯೆ ನಡೆಸಬೇಕಿದ್ದು ಕಾಲ ಕಾಲಕ್ಕೆ ಚುನಾವಣೆ ಸಿದ್ಧತೆ ವರದಿ ನೀಡಲು ಮತ್ತು ನಿರ್ದಿಷ್ಟ ಪಡಿಸಿರುವ ಸದಸ್ಯರ ಸಂಖ್ಯೆ ಹಾಗೂ ಅನ್ವಯಿಸುವ ಮೀಸಲಾತಿ ಅನುಸರಿಸಲು ಸೂಚಿಸಿದ್ದಾರೆ.

    ಸೆ.3, 2020ಕ್ಕೆ ಅವಧಿ ಮುಕ್ತಾಯ

    ಹಾಲಿ ಆಡಳಿತ ಮಂಡಳಿಯ ಅವಧಿ ಇನ್ನೂ ಸೆ.3, 2020ರವರೆಗಿದ್ದು ಆಗಲೇ ಚುನಾವಣೆ ಕಣ ಸಿದ್ಧಗೊಳಿಸಲಾಗುತ್ತಿದೆ. ಆ.23, 2015ಕ್ಕೆ ಹಾಲಿ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು ಸೆ.3, 2015ಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಒಟ್ಟು 19 ನಿರ್ದೇಶಕ ಸ್ಥಾನಗಳ ಪೈಕಿ 2 ಸ್ಥಾನ ಮಹಿಳೆಗೆ, ಒಂದು ಸ್ಥಾನ 2ಎ ಮತ್ತು ಒಂದು ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದೆ.
    ಬೆಳಗಾವಿ, ಬಾಗಲಕೋಟೆ, ಕಲಬುರಗಿ ಮತ್ತು ವಿಜಯಪುರ ವ್ಯಾಪ್ತಿ ಹೊಂದಿದ್ದು ಮುಖ್ಯ ಕಚೇರಿ ಸೇರಿದಂತೆ 10 ಶಾಖೆಗಳನ್ನು ಹೊಂದಿದೆ. ಒಟ್ಟು 36 ಸಾವಿರ ಶೇರುದಾರರಿದ್ದು ಕಳೆದ ಚುನಾವಣೆಯಲ್ಲಿ 29 ಸಾವಿರ ಜನ ಮತದಾನದ ಅರ್ಹತೆ ಹೊಂದಿದ್ದರು. ಇದೀಗ ಆ ಎಲ್ಲ ಮತದಾರರ ಪಟ್ಟಿ ಕ್ರೋಢಿಕರಿಸುವ ಕಾರ್ಯ ಕೈಗೊಳ್ಳಬೇಕಿದೆ.

    ರಾಜಕೀಯ ಪ್ರತಿಷ್ಟೆ

    ಶತಮಾನೋತ್ಸವ ಆಚರಿಸಿಕೊಂಡ ಸಿದ್ಧೇಶ್ವರ ಬ್ಯಾಂಕ್‌ಗೆ ನಿರ್ದೇಶಕರಾಗುವುದೆಂದರೆ ಅದೊಂದು ಪ್ರತಿಷ್ಟೆ ವಿಷಯ. ರಾಜಕೀಯ ಭವಿಷ್ಯಕ್ಕೆ ಇದೊಂದು ಅಡಿಪಾಯ ಎಂದೇ ಬಿಂಬಿಸಲಾಗಿದೆ. ಮಾಜಿ ಶಾಸಕರಾದ ರಾಚಪ್ಪಣ್ಣ ಔರಂಗಬಾದ್, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಲಾಸಬಾಬು ಆಲಮೇಲಕರ ಮತ್ತು ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಬ್ಯಾಂಕ್ ನಿರ್ದೇಶಕ ಮಂಡಳಿಯಿಂದಲೇ ರಾಜಕೀಯ ಭವಿಷ್ಯ ಕಂಡುಕೊಂಡಿದ್ದು ಗಮನಾರ್ಹ. ಹೀಗಾಗಿ ಸಿದ್ಧೇಶ್ವರ ಬ್ಯಾಂಕ್‌ಗೆ ನಿರ್ದೇಶಕರಾದರೆ ಮುಂದಿನ ರಾಜಕೀಯಕ್ಕೆ ಮುನ್ನುಡಿ ಬರೆದಂತೆ ಎಂಬ ಅಭಿಪ್ರಾಯ ಅನೇಕರಲ್ಲಿ ಮನೆ ಮಾಡಿದ್ದರಿಂದ ಬ್ಯಾಂಕ್ ಚುನಾವಣೆ ಪ್ರತಿಷ್ಟೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಹಾಲಿ ನಿರ್ದೇಶಕ ಮಂಡಳಿ ಸೇರಿದಂತೆ ಪರಾಜಿತರು ಮತ್ತು ಹೊಸಮುಖಡಗಳು ಅಖಾಡಕ್ಕಿಳಿಯಲು ಮತ್ತೆ ಸಜ್ಜಾಗಿದ್ದಾರೆ. ಕೆಲವರು ಆಗಲೇ ತಮ್ಮದೇ ಆದ ಪೆನಲ್ ಕಟ್ಟಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ.
    ಒಟ್ಟಿನಲ್ಲಿ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ಗೆ ಚುನಾವಣೆ ಕಳೆ ಬಂದಿದ್ದು ಕರೊನಾ ನಡುವೆಯೂ ಚುನಾವಣೆ ಪ್ರಕ್ರಿಯೆ ಹೇಗೆಲ್ಲಾ ನಡೆಯಬಹುದೆಂಬುದೇ ಕುತೂಹಲದ ಸಂಗತಿ.

    ಸಿದ್ಧೇಶ್ವರ ಬ್ಯಾಂಕ್ ಚುನಾವಣೆ ಅಧಿಕಾರಿಯಾಗಿ ನೇಮಕ ಮಾಡಿದ್ದಾಗಿ ದೂರವಾಣಿ ಮೂಲಕ ಗೊತ್ತಾಗಿದೆ. ಆದರೆ, ಈವರೆಗೂ ಆದೇಶ ಪ್ರತಿ ಕೈ ಸೇರಿಲ್ಲ. ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
    ಪಿ.ಬಿ. ಕಾಳಗಿ, ಸಹಕಾರಿ ಉಪನಿಬಂಧಕರು, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts