More

    ದೇಸಿ ಸಂಸ್ಕೃತಿ ರಸದೌತಣ

    ಹುಬ್ಬಳ್ಳಿ: ಜಾನಪದ ನೃತ್ಯ.., ಸಂತ ಶಿಶುನಾಳ ಶರೀಫರ ಹಾಡು.., ಭಜನೆ, ತತ್ವ, ಗೀಗಿ ಪದಗಳ ಇಂಪು.., ಮಹಿಳಾ ವೀರಗಾಸೆ…, ಹುಲಿವೇಷ, ಪುಗಡಿ ನೃತ್ಯ, ಡಮಾಮಿ ನೃತ್ಯ…

    ಹೀಗೆ ಜಾನಪದ ರಸದೌತಣ ಉಣಬಡಿಸಿದ್ದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಜಾನಪದ ಜಾತ್ರೆಯಲ್ಲಿ.

    ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಸಹಕಾರದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಧಾರವಾಡ, ಉತ್ತರ ಕನ್ನಡ, ಗದಗ, ಹಾವೇರಿ, ಬೆಳಗಾವಿ ಸೇರಿ 30 ಜಿಲ್ಲೆಗಳ ವಿವಿಧ ಜಾನಪದ ಕಲಾ ತಂಡಗಳು ವಿವಿಧ ಕಲೆಗಳ ಪ್ರದರ್ಶನ ನೀಡಿ ಮನಸೂರೆಗೊಂಡವು.

    ಧಾರವಾಡದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಬಸಲಿಂಗಯ್ಯ ಹಿರೇಮಠ ಅವರು ಹಾಡಿದ ಗೀಗಿ ಪದ, ಸಂತ ಶಿಶುನಾಳ ಶರೀಫರ ಗೀತೆಗಳು, ಅಭಿವ್ಯಕ್ತಿ ಕಲಾ ತಂಡದ ಜನಪದ ನೃತ್ಯ, ಬೆಳಗಾವಿ, ಧಾರವಾಡ, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳ ತಂಡದ ಜನಪದ ನೃತ್ಯ, ಮಾಯದಂಥ ಮಳೆ ಬಂತಣ್ಣ.., ಚೆಲ್ಲಿದರು ಮಲ್ಲಿಗೆಯಾ.., ತಿಂಗಳು ಮುಳಿಗದವೊ…ಜಾನಪದ ನೃತ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

    ಇದಕ್ಕೂ ಮೊದಲು ಶ್ರೀಮಠದ ಗೋಪುರದಿಂದ ವೇದಿಕೆವರೆಗೆ ನಡೆದ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಕಲಾವಿದರು ಹಲವಾರು ಕಲೆಗಳನ್ನು ಪ್ರದರ್ಶಿಸಿದರು.

    ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಳೆದ 4 ವರ್ಷದಿಂದ ಧಾರವಾಡ ಉತ್ಸವ ಆಯೋಜಿಸಿಲ್ಲ. ಸರ್ಕಾರ ಪ್ರತಿ ವರ್ಷ ಜನಪದ ಜಾತ್ರೆ ಏರ್ಪಡಿಸಬೇಕು. ಮಕ್ಕಳಿಗೆ ಜನಪದ ಕಲೆ ಕಲಿಸಬೇಕು ಎಂದು ಹೇಳಿದರು.

    ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಶ್ರೀಮಠದ ಚೇರ್ಮನ್ ಡಿ.ಡಿ. ಮಾಳಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಸದಾಶಿವ ಮರ್ಜಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts