More

    ಸಿದ್ದರಾಮೇಶ್ವರರು ಒಳಿತಿಗೆ ಶ್ರಮಿಸಿದ ಕಾಯಕಯೋಗಿ

    ಕಡೂರು: ಮಹಾಪುರುಷರು ಜನಿಸಿದ ಈ ನೆಲದಲ್ಲೇ ಜನಿಸಿದ ಶ್ರೀ ಗುರು ಸಿದ್ದರಾಮೇಶ್ವರರು ಮನುಕುಲದ ಒಳಿತಿಗಾಗಿ ಶ್ರಮಿಸಿದ ಕಾಯಕಯೋಗಿ ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.

    ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ತಾಲೂಕು ಭೋವಿ ಸಮಾಜದಿಂದ ಏರ್ಪಡಿಸಿದ್ದ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾಪುರುಷರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
    ಮಹನೀಯರ ಸಿದ್ಧಾಂತಗಳನು ಅನುಸರಿಸಿದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಸಿದ್ದರಾಮೇಶ್ವರರು ಬಸವಣ್ಣ ಅವರಿಂದ ಪ್ರಭಾವಿತರಾಗಿ ಅವರ ಅನುಭವ ಮಂಟಪದಲ್ಲಿ ಪ್ರಮುಖರಾಗಿದ್ದರು. ಅವರ ಸಿದ್ಧಾಂತಗಳು ಕೇವಲ ಭೋವಿ ಸಮಾಜಕ್ಕಷ್ಟೇ ಅಲ್ಲ, ಎಲ್ಲ ಸಮುದಾಯಗಳಿಗೂ ಪ್ರಸ್ತುತ ಎಂದು ಹೇಳಿದರು.
    ಕಲ್ಲು ಒಡೆಯುವ ಕಾಯಕವನ್ನು ನಂಬಿಕೊಂಡ ಭೋವಿ ಸಮುದಾಯಕ್ಕೆ ಯಾವುದೇ ತೊಂದರೆ ಆಗಲು ಬಿಡುವುದಿಲ್ಲ. ಕಲ್ಲು ಒಡೆಯುವ ಜಾಗದಿಂದ ಒಕ್ಕಲೆಬ್ಬಿಸಿ ಅದನ್ನು ಕ್ರಷರ್ ಮಾಲೀಕರಿಗೆ ನೀಡಲು ಬಿಡಲ್ಲ. ಶ್ರೀಮಂತರಿಗೆ ಆಕ್ಷೇಪವಿಲ್ಲದೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ. ಕೈಯ್ಯಲ್ಲಿ ಕಲ್ಲು ಒಡೆಯುವವರನ್ನು ಒಕ್ಕಲೆಬ್ಬಿಸಲಾಗುತ್ತದೆ. ಇದು ಸರಿಯಲ್ಲ ಎಂದರು.
    ಪಟ್ಟಣದಲ್ಲಿ ಭೋವಿ ವಿದ್ಯಾರ್ಥಿ ನಿಲಯವಿದ್ದ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಮುಂದಾದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸಮುದಾಯದವರು ವಾಸಿಸುವ ಕಾಲನಿಗಳಿಗೆ ಸಮುದಾಯ ಭವನ ಸೇರಿ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎಸ್.ಡಿ.ಚಂದ್ರಶೇಖರ್ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಕೊಲ್ಲಾಭೋವಿ, ತಾಲ್ಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎಂ.ಡಿ.ಜಯಣ್ಣ, ಜಿಪಂ ಮಾಜಿ ಸದಸ್ಯ ಷಣ್ಮುಖ ಭೋವಿ, ಪಾಲಾಕ್ಷಪ್ಪ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಗೀತಾ ಪ್ರಭಾಕರ್, ವಕೀಲ ತಿಪ್ಪೇಶ್, ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts