More

    ಮೋದಿ ಹವಾ ದೆಹಲಿಯಲ್ಲೇ ಇಲ್ಲ, ನಮ್ಮ ರಾಜ್ಯದಲ್ಲಿ ಇರುತ್ತಾ?: ಸಿದ್ದರಾಮಯ್ಯ

    ಮೈಸೂರು: ಗುಜರಾತ್​ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಎಷ್ಟರ ಮಟ್ಟಿಗೆ ಕರ್ನಾಟಕದ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎನ್ನುವ ಚರ್ಚೆ ರಾಜಕೀಯ ಪಕ್ಷಗಳ ಒಳಗೆ ನಡೆಯುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ರೀತಿಯಲ್ಲಿ ಚುನಾವಣೇಯ ವಿಶ್ಲೇಷಣೆ ಮಾಡಿದ್ದಾರೆ. ಇದೇ ಸಂದರ್ಭ ಮೋದಿ ಅಲೆಯ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

    ‘ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಇತ್ತು. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಇತ್ತು. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವೇ ಆಮ್‌ ಆದ್ಮಿ ಪಕ್ಷಕ್ಕೆ ಹಣ ನೀಡಿ ಕಾಂಗ್ರೆಸ್‌ನ ಮತಗಳನ್ನು ಒಡೆಯುವ ತಂತ್ರ ಮಾಡಿದೆ. ಕರ್ನಾಟಕದಲ್ಲಿ ಆಮ್‌ ಆದ್ಮಿ ಪಕ್ಷ ಇಲ್ಲ. ಹಾಗಾಗಿ ಜೆಡಿಎಸ್‌ ಜೊತೆ ಬಿಜೆಪಿ ರಾಜ್ಯದಲ್ಲಿ ತಂತ್ರಗಾರಿಕೆ ಮಾಡಬಹುದು. ಆದರೆ ಇದರಿಂದ ಯಾವ ಲಾಭವೂ ಆಗಲ್ಲ.

    ಕರ್ನಾಟಕದಲ್ಲಿ ಬೇರೆ ರೀತಿಯ ವಿಚಾರಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ. ಇಲ್ಲಿನ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆ ಇವುಗಳು ಮುಖ್ಯವಾದುದು. ಲಂಚ ನೀಡದೆ ಯಾವ ಕೆಲಸಗಳು ಇಲ್ಲಿ ಆಗುತ್ತಿಲ್ಲ, 40% ಕಮಿಷನ್‌ ಗುಜರಾತ್‌ ನಲ್ಲಿ ಇದೆ ಎಂದು ಯಾರಾದರೂ ಹೇಳಿದ್ದರಾ? ಇದು ಇರುವುದು ರಾಜ್ಯದಲ್ಲಿ.

    ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಹೊಸದಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, 1999 ರಿಂದಲೂ ಚುನಾವಣಾ ಅಖಾಡದಲ್ಲಿದೆ. ಆಮ್‌ ಆದ್ಮಿ ಪಕ್ಷ ಗುಜರಾತ್‌ ನಲ್ಲಿ 10% ಮತ ಪಡೆದರೂ ಕೂಡ ಕಾಂಗ್ರೆಸ್‌ ನ ಗೆಲ್ಲುವ ಸೀಟುಗಳು ಕಡಿಮೆಯಾಗಿಬಿಡುತ್ತದೆ. ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ ಗಿಂತ ಹೆಚ್ಚು ಪ್ರಚಾರ ಮಾಡಿದರೂ ಕೇವಲ ಆರು ಸೀಟುಗಳನ್ನು ಗೆಲ್ಲಲಿದೆ. ಹೆಚ್ಚು ಹಣವನ್ನು ಆಮ್‌ ಆದ್ಮಿ ಪಕ್ಷ ಚುನಾವಣೆಗೆ ಖರ್ಚು ಮಾಡಿದೆ. ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆಯಲ್ಲಿ ಇದ್ದುದ್ದರಿಂದ 2 ದಿನ ಅಷ್ಟೆ ಪ್ರಚಾರ ಮಾಡಲು ಹೋಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರ ನಡೆಸಿದ್ದಾರೆ.

    ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಯಾವ ತಂತ್ರಗಾರಿಕೆಯೂ ಬೇಡ, ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ. ನರೇಂದ್ರ ಮೋದಿ ಅವರ ಹವಾ ರಾಜ್ಯದಲ್ಲಿ ಇಲ್ಲ. ನರೇಂದ್ರ ಮೋದಿ ಅವರು ವಾಸ ಮಾಡುವ ದೆಹಲಿಯಲ್ಲೇ ಅವರ ಹವಾ ಇಲ್ಲ. ಇನ್ನು ಇಲ್ಲಿ ಇರುತ್ತಾ?’ ಎಂದು ಸುದೀರ್ಘವಾಗಿ ವಿಶ್ಲೇಷಣೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts