More

    ಕರೊನಾ ಸಂಕಷ್ಟ ಕಾಲದಲ್ಲಿ ಸಿದ್ದು V/S ಸರ್ಕಾರ

    ಬೆಂಗಳೂರು: ಕರೊನಾ ಕಷ್ಟಕಾಲದಲ್ಲಿ ಒಂದೇ ಒಂದು ಪೈಸೆ ದುರ್ಬಳಕೆ ಆಗಿದ್ದರೂ ದೇವರು ಶಿಕ್ಷಿಸುತ್ತಾನೆ. ಕೋವಿಡ್​ ನಿರ್ವಹಣೆಯಲ್ಲಿ ಅವ್ಯವಹಾರ ಆಗಿಲ್ಲ. ಇದನ್ನು ಸಾಬೀತು ಪಡಿಸಿದ್ರೆ ರಾಜೀನಾಮೆ ಕೊಡುವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಪಕ್ಷಗಳಿಗೆ ಸವಾಲು ಹಾಕಿದ್ದ ಬಳಿಕವೂ ಸರ್ಕಾರದ ವಿರುದ್ಧ ಸಮರ ಮುಂದುವರಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

    ಪಿಪಿಇ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್, ಸರ್ಜಿಕಲ್ ಗ್ಲೌಸ್, ವೆಂಟಿಲೇಟರ್, ಥರ್ಮಲ್​ ಸ್ಕ್ಯಾನರ್​ ಖರೀದಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಆಗ್ರಹಿಸಿದ್ದಾರೆ. ಇಂದು(ಗುರುವಾರ) ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಇವರಿಬ್ಬರೂ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿರಿ video/ ಸಂಗಾತಿ ಜತೆ ರಮಿಸೋದನ್ನು ಬಿಟ್ಟು ಕೋಳಿ ಜತೆ ಕಾಳಗಕ್ಕಿಳಿದ ಮಯೂರ!

    ಸಿದ್ದರಾಮಯ್ಯ ಮಾತನಾಡಿ, ಮೆಡಿಕಲ್ ಉಪಕರಣ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಜುಲೈ 3ರಂದು ಪ್ರಸ್ತಾಪಿಸಿದ್ದಕ್ಕೆ ಸುಮಾರು ಹದಿನೇಳು ದಿನಗಳ ನಂತರ ಡಿಸಿಎಂ ಅಶ್ವತ್ಥನಾರಾಯಣ ಮತ್ತು ಸಚಿವ ಶ್ರೀರಾಮುಲು ನನ್ನ ಆರೋಪ ನಿರಾಕರಿಸಿದರು.

    ಸಿದ್ದರಾಮಯ್ಯ ಸುಳ್ಳು ಆರೋಪಿಸಿದ್ದಾರೆ, ಖರೀದಿಗೆ ಖರ್ಚು ಮಾಡಿದ್ದು 324 ಕೋಟಿ ರೂ. ಅಷ್ಟೆ. ಭ್ರಷ್ಟಾಚಾರ ಸಾಬೀತು ಮಾಡಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಮೊನ್ನೆ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ಸಿಎಂ ಕೂಡ ‘ಯಾವುದೇ ಅವ್ಯವಹಾರ ನಡೆದಿಲ್ಲ, ಈ ಬಗ್ಗೆ 24 ಗಂಟೆಯಲ್ಲಿ ಮಾಹಿತಿ ಕೊಡುತ್ತೇವೆ’ ಎಂದರು. ಉತ್ತರಕ್ಕಾಗಿ ನಾನು ಮೂರು ಬಾರಿ ಪತ್ರ ಬರೆದಿದ್ದೇನೆ. ಬೇರೆ ಇಲಾಖೆಗಳಿಗೂ 20 ಪತ್ರ ಬರೆದಿದ್ದೇನೆ. ಅಲ್ಲಿಂದ ಬಂದಿರೋದು ಅರೆಬರೆ ಉತ್ತರವಷ್ಟೆ. ಸತ್ಯ ಮುಚ್ಚಿಡುವ ಪ್ರಯತ್ನ ನಡೆಯುತ್ತಿದ್ದೆ ಎಂದು ಟೀಕಿಸಿದರು.
    ಪ್ರತಿಪಕ್ಷ ನಾಯಕನಾಗಿ ನಾನು ಮಾಹಿತಿ ಸಂಗ್ರಹಿಸಿದರೆ ಅದನ್ನು ಸುಳ್ಳು ಎನ್ನುತ್ತೀರಿ. ಕರೊನಾ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಇಲ್ಲಸಲ್ಲದ ಆರೋಪ ಮಾಡುತ್ತೇನೆ ಎಂದು ಆರೋಪಿಸುತ್ತೀರಿ. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಜನರ ಮುಂದೆ ಲೆಕ್ಕ ಇಡಿ ಎಂದು ಸವಾಲು ಹಾಕಿದರು.

    ಇದನ್ನೂ ಓದಿರಿ ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ; ಶ್ರೀರಾಮುಲು

    ಸಚಿವರಾದ ಅಶ್ವತ್ಥನಾರಾಯಣ, ಶ್ರೀರಾಮುಲು ಅವರು 324 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ನನ್ನ ಬಳಿ ಇರುವ ದಾಖಲೆ ಪ್ರಕಾರ 700 ಕೋಟಿ ರೂ. ಖರ್ಚು ಮಾಡಿದೆ. ಬಿಬಿಎಂಪಿ 200 ಕೋಟಿ ರೂ. ಖರ್ಚು ಮಾಡಿವೆ. ಜಿಲ್ಲಾಡಳಿತ ಎಸ್​ಡಿ‌ಆರ್​ಎಫ್ 767 ಕೋಟಿ ರೂ., ಕಾರ್ಮಿಕ ಇಲಾಖೆ 1 ಸಾವಿರ ಕೋಟಿ ರೂ., ಸಮಾಜ ಕಲ್ಯಾಣ, ಶಿಕ್ಷಣ, ಆಹಾರ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 500 ಕೋಟಿ ರೂ. ಖರ್ಚು ಮಾಡಿವೆ. ರಾಜ್ಯದಲ್ಲಿ ಕರೊನಾ ನಿರ್ವಹಣೆಗೆ ಒಟ್ಟು 4,160 ಕೋಟಿ ರೂ. ಖರ್ಚು ಮಾಡಿದ್ದಾರೆ. ಮಾರುಕಟ್ಟೆ ದರಕ್ಕಿಂದ ಒಂದೆರೆಡು ಪಟ್ಟು ಹೆಚ್ಚಿಗೆ ಖರ್ಚು ಮಾಡಿದ್ದು, ಅಧಿಕಾರಿಗಳು ಮತ್ತು ಸಚಿವರು ಕೋಟ್ಯಂತರ ರೂ.ನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂಬುದು ನನ್ನ ಆರೋಪ. ಈ ಆರೋಪ ಸುಳ್ಳಾಗಿದ್ದರೆ ಸರ್ಕಾರ ದಾಖಲೆ ಸಹಿತ ಜನರ ಮುಂದೆ ಲೆಕ್ಕ ಕೊಡಲಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

    ಡಿ.ಕೆ ಶಿವಕುಮಾರ್ ಮಾತನಾಡಿ, ಕೋವಿಡ್ 19ರ ಪಿಡುಗನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರನ್ನು ರಕ್ಷಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕರೊನಾ ಸೋಂಕಿತರ ಹೆಣದ ಮೇಲೆ ಹಣ ಮಾಡಲು ಸರ್ಕಾರ ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

    ‘ನಮ್ಮ ವಿರೋಧ ಪಕ್ಷದ ನಾಯಕರು ಲೆಕ್ಕ ಕೊಡಿ ಅಂತಾ ಕೇಳಿದ್ದಾರೆ. ನಾನು ಉತ್ತರ ಕೊಡಿ ಅಂತಾ ಕೇಳಿದ್ದೇನೆ. ಸರ್ಕಾರ ಜನರಿಗಾಗಿ ಮಾಡಿರುವ ಖರ್ಚಿನ ಲೆಕ್ಕ ಕೇಳಿದ್ದಾರೆ. ಈಗಾಗಲೇ ಸರ್ಕಾರ 4 ಸಾವಿರ ಕೋಟಿ ರೂ. ಖರ್ಚು ಮಾಡಿದ್ದು, ಅದರಲ್ಲಿ 2 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇಡೀ ಕಾಂಗ್ರೆಸ್ ಒಮ್ಮತದಿಂದ ಇದನ್ನು ಅನುಮೋದಿಸುತ್ತದೆ’ ಎಂದರು.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, 150 ವರ್ಷ ಆಳಿದ ಪಕ್ಷ, ನೂರಾರು ಹಗರಣದಲ್ಲಿ ಭಾಗಿಯಾಗಿ ಸಾವಿರಾರು ಕೋಟಿ ಲೂಟಿ ಮಾಡಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಹಕಾರ ನೀಡಬೇಕಾದವರು ಜನರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಎಂದು ಕಿಡಿಕಾರಿದ್ದಾರೆ.

    LIVE| ಮಾಜಿ ಸಿಎಂ ಸಿದ್ದು ಆರೋಪಕ್ಕೆ ಸರ್ಕಾರದ ಪಂಚ ಸಚಿವರಿಂದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts