More

    ಸಿದ್ದರಾಮಯ್ಯ ‘ಅದೃಷ್ಟದ ನೆಲೆ’ ವರುಣ

    ಅವಿನಾಶ್ ಜೈನಹಳ್ಳಿ ಮೈಸೂರು
    ‘ವರುಣ’ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅದೃಷ್ಟದ ಕ್ಷೇತ್ರ’ ಎಂಬುದು ಮತ್ತೆ ಸಾಬೀತಾಗಿದೆ!
    2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

    ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡು 2008ರಲ್ಲಿ ವರುಣ ಕ್ಷೇತ್ರ ಜನ್ಮ ತಾಳಿತು. ಅಲ್ಲಿಂದ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಸಿದ್ದರಾಮಯ್ಯ ಮೂರು ಬಾರಿ ಗೆದ್ದಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ, 2013ರಲ್ಲಿ ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು.

    2018ರ ಚುನಾವಣೆಯಲ್ಲಿ ತಮ್ಮ ಅದೃಷ್ಟದ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆಲುವು ಪಡೆದರು.
    ಇದೀಗ ಮತ್ತೆ ಈ ಬಾರಿಯ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಿ ಜಯ ಸಾಧಿಸಿರುವ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಾರೆ.

    ವರುಣ ಕ್ಷೇತ್ರ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ವರುಣ ಹೋಬಳಿ, ನಂಜನಗೂಡು ತಾಲೂಕಿನ ತಾಂಡವಪುರ, ತಗಡೂರು, ಹದಿನಾರು, ಚಿಕ್ಕಕವಲಂದೆ(ಭಾಗಶಃ), ತಿ.ನರಸೀಪುರದ ಗರ್ಗೇಶ್ವರಿ ಜಿಪಂ ಕ್ಷೇತ್ರಗಳನ್ನು ಒಳಗೊಂಡಿದೆ.

    ಅರಸುಗೆ ಹುಣಸೂರು, ಸಿದ್ದುಗೆ ವರುಣ!

    ಮೈಸೂರು ಜಿಲ್ಲೆಯ ನಾಯಕರ ಪೈಕಿ ಡಿ.ದೇವರಾಜ ಅರಸು ಅವರ ಬಳಿಕ ರಾಜಕಾರಣದಲ್ಲಿ ಸಿದ್ದರಾಮಯ್ಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಡಿ.ದೇವರಾಜ ಅರಸು ಅವರ ಬಳಿಕ ಜಿಲ್ಲೆಯಲ್ಲಿ ಮುಖ್ಯಮಂತ್ರಿಯಾದವರು ಕೂಡ ಸಿದ್ದರಾಮಯ್ಯ ಒಬ್ಬರೇ. ಇದೀಗ ಅರಸು ಅವರಂತೆಯೇ ಎರಡನೇ ಬಾರಿಗೆ ಮುಖ್ಯಮಂತ್ರಿ ಪದವಿಗೇರಲು ಸಿದ್ಧರಾಗಿದ್ದಾರೆ. ಇಬ್ಬರೂ ನಾಯಕರು ಮುಖ್ಯಮಂತ್ರಿ ಪದವಿ ಪಡೆದಿರುವುದು ಕಾಂಗ್ರೆಸ್‌ನಿಂದ ಎನ್ನುವುದು ಮತ್ತೊಂದು ವಿಶೇಷ.
    ಡಿ.ದೇವರಾಜ ಅರಸು ಅವರಿಗೆ ಹುಣಸೂರು ಕ್ಷೇತ್ರ ಅದೃಷ್ಟದ ನೆಲೆಯಾಗಿದ್ದರೆ, ಸಿದ್ದರಾಮಯ್ಯ ಅವರಿಗೆ ವರುಣ ಅದೃಷ್ಟದ ಕ್ಷೇತ್ರವಾಗಿದೆ.

    ಸಿದ್ದು ಏಳುಬೀಳು!

    ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯದಲ್ಲಿ ಅನೇಕ ಏಳುಬೀಳು ಕಂಡಿದ್ದಾರೆ. 4 ದಶಕದಿಂದ ಜಿಲ್ಲೆಯ ರಾಜಕೀಯದಲ್ಲಿ ಹಿಡಿತ ಸಾಧಿಸಿರುವ ಅವರು, 1983ರಲ್ಲಿ ಚುನಾವಣಾ ರಾಜಕೀಯ ಆರಂಭಿಸಿ 11 ವಿಧಾನಸಭಾ ಚುನಾವಣೆಗಳನ್ನು ಎದುರಿಸಿ 9 ಬಾರಿ ಗೆದ್ದಿದ್ದಾರೆ. ಈ ಪೈಕಿ ಚಾಮುಂಡೇಶ್ವರಿ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ 8 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 5 ಸಲ ಜಯ ಸಾಧಿಸಿದ್ದಾರೆ. ಈ ಅವಧಿಯಲ್ಲಿ ಎರಡು ಬಾರಿ ಉಪ ಮುಖ್ಯಮಂತ್ರಿ ಕೂಡ ಆಗಿದ್ದರು.
    ವರುಣ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಮೂರು ಸಲವೂ ಜಯ ಸಾಧಿಸಿದ್ದಾರೆ. ಮೊದಲ ಬಾರಿಗೆ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ, ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾಗಿದ್ದರು. ಇದೀಗ ಮೂರನೇ ಬಾರಿ ವರುಣದಿಂದ ಗೆದ್ದಿರುವ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸೋತರೂ, ಬಾದಾಮಿಯಿಂದ ಗೆದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಲ್‌ಪಿ ನಾಯಕರಾಗಿ, ಬಳಿಕ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಪಕ್ಷೇತರವಾಗಿ ಮೊದಲ ಬಾರಿಗೆ ಜಯ

    1983ರಲ್ಲಿ ಪಕ್ಷೇತರವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ 26,614 ಮತ ಪಡೆದು ಶಾಸಕರಾಗಿ ಆಯ್ಕೆಯಾದರು. ಬಳಿಕ 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿಯೂ ಕೆಲಸ ಮಾಡಿದರು. ಜತೆಗೆ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜಶೇಖರಮೂರ್ತಿ ವಿರುದ್ಧ ಸೋಲು ಕಂಡರು. 1994ರಲ್ಲಿ 76,823 ಮತ ಪಡೆಯುವ ಮೂಲಕ ಮೂರನೇ ಬಾರಿಗೆ ಶಾಸಕರಾಗಿ, ಸಚಿವರಾದರು. ಎಚ್.ಡಿ. ದೇವೇಗೌಡರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಆದರೆ, 1999ರ ಚುನಾವಣೆಯಲ್ಲಿ ಮತ್ತೆ ಸೋತರು. 2004ರಲ್ಲಿ ಗೆಲುವು ಪಡೆದು ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅವರು 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 257 ಮತಗಳಿಂದ ಜಯ ಸಾಧಿಸಿದರು. ನಂತರ ಕ್ಷೇತ್ರ ವಿಭಜನೆಯ ಕಾರಣ 2008, 2013ರಲ್ಲಿ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts