More

    ಗೃಹ ಸಚಿವರ ರಾಜೀನಾಮೆ ಪಡೆಯಿರಿ : ಸಿದ್ದರಾಮಯ್ಯ ಒತ್ತಾಯ



    ಮೈಸೂರು:
    ಪ್ರಚೋದನೆ ಹೇಳಿಕೆ ನೀಡುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಂತ್ರಿ ಸ್ಥಾನದಲ್ಲಿ ಇರಲು ನಾಲಾಯಕ್. ಕೂಡಲೇ ಮುಖ್ಯಮಂತ್ರಿಗಳು ಗೃಹ ಸಚಿವರ ರಾಜೀನಾಮೆ ಪಡೆಯಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.


    ನಗರದ ಲಲಿತಮಹಲ್ ಹೆಲಿಪ್ಯಾಡ್‌ದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ದು ಭಾಷೆ ಬರಲಿಲ್ಲ ಎನ್ನುವ ಕಾರಣಕ್ಕೆ ಕೊಲೆಯಾಗಿದೆ ಎಂದು ಅವರೇ ಹೇಳಿದ್ದರು. ಬಳಿಕ ಬೈಕ್ ಡಿಕ್ಕಿಯಾಗಿ ಪರಸ್ಪರ ಜಗಳದಿಂದ ಕೊಲೆ ನಡೆದಿದೆ ಎಂದಿದ್ದಾರೆ. ಹಾಗಾದರೆ, ಇದು ಪ್ರಚೋದನೆ ಹೇಳಿಕೆ ಅಲ್ಲವೇ? ಎಂದು ಪ್ರಶ್ನಿಸಿದರು.


    ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಗಳಿಂದ ಮಾಹಿತಿ ಪಡೆಯದೇ ಹೇಗೆ ಮಾತನಾಡಿದರು? ಇಂಥ ನಾಲಾಯಕ್ ಮಂತ್ರಿಯನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
    ಮುಸ್ಲಿಂ ಸಮುದಾಯಕ್ಕೆ ನಿರ್ಬಂಧಗಳನ್ನು ಹೇರಲು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧನೆ ಮಾಡಿದ್ದೇವೆ ಎಂದು ಹೇಳಲು ಏನೂ ಇಲ್ಲ. ಅದಕ್ಕಾಗಿ ಧಾರ್ಮಿಕ ವಿಚಾರಗಳನ್ನು ಚರ್ಚೆಗೆ ಬಿಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ಹಿಜಾಬ್, ಹಲಾಲ್ ಕಟ್, ಮಸೀದಿ ಮೈಕ್ ನಿರ್ಬಂಧ, ಈಗ ಮಾವಿನ ಹಣ್ಣು ಖರೀದಿಸದಂತೆ ಹೇಳುತ್ತಿದ್ದಾರೆ. ಬೆಲೆ ಏರಿಕೆ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಧಾರ್ಮಿಕ ವಿಚಾರಗಳನ್ನು ಚರ್ಚೆಗೆ ತಂದು ವಾಸ್ತವತೆ ಮುಚ್ಚಿಡುತ್ತಿದ್ದಾರೆ ಎಂದು ದೂರಿದರು.


    ಹಲಾಲ್ ಮಾಂಸವನ್ನು ಹಿಂದೆಯಲ್ಲ ತಿಂದಿಲ್ಲವೇ? ಅದೇನು ಹೊಸದಾ? ಇದು ಪ್ರತಿ ವರ್ಷವೂ ನಡೆದುಕೊಂಡು ಬಂದಿದೆ. ಈ ವಿಚಾರವನ್ನು ಪ್ರಸ್ತಾಪಿಸಿ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದರು.
    ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂದ್ರೆ ಬಂಡವಾಳ ಹೂಡಿಕೆದಾರರು ಕರ್ನಾಟಕಕ್ಕೆ ಬರುವುದಿಲ್ಲ. ಇದರಿಂದಾಗಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗುತ್ತದೆ. ಹೀಗಾಗಿಯೇ ಒಲೊ ಬೈಕ್ ಸಂಸ್ಥೆ ತಮಿಳುನಾಡಿಗೆ ಹೋಯಿತು. ಒಲೊ ಬೈಕ್‌ನಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗುವುದು ತಪ್ಪಿತು. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

    ಅಮಿತ್ ಷಾ ಎಚ್ಚರಿಕೆಯಿಂದ ಇರಬೇಕು
    ಮಾತೃಭಾಷೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಎಚ್ಚರಿಕೆಯಿಂದ ಇರಬೇಕು. ಮಾತೃಭಾಷೆ ವಿಚಾರ ಮುಟ್ಟಲೇಬಾರದು. ಬಲವಂತವಾಗಿ ಹಿಂದಿ ಹೇರಿಕೆಗೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.
    ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ ಅಮಿತ್ ಷಾ ನೀಡಿರುವ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಹಿಂದಿ ರಾಷ್ಟ್ರ ಭಾಷೆನೂ ಅಲ್ಲ, ಸಂಪರ್ಕ ಭಾಷೆನೂ ಅಲ್ಲ ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts