More

    ಕುಂಟೋಜಿಯಲ್ಲಿ ಜನರೊಂದಿಗೆ ಜಿಲ್ಲಾಧಿಕಾರಿ ನೇರ ಮಾತುಕತೆ: ಪ್ರತಿಯೊಬ್ಬರನ್ನು ಕರೆಸಿ ಅರ್ಜಿ ಪಡೆದ ಸುಂದರೇಶ ಬಾಬು

    ಸಿದ್ದಾಪುರ: ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಜನರೊಂದಿಗೆ ನೇರ ಸಂದರ್ಶನ ನಡೆಸಿದ ಡಿಸಿ ಸುಂದರೇಶ್ ಬಾಬು, ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದರು.

    ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇರಲಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಗಳಿಗೆ ಸಂಬಂಧಿಸಿ ಪ್ರತ್ಯೇಕ ಕೌಂಟರ್‌ಗಳಿದ್ದು, ಅರ್ಜಿ ನೀಡಬೇಕು ಎಂದರು. ಬಳಿಕ ಪ್ರತಿಯೊಬ್ಬ ಅರ್ಜಿದಾರರನ್ನು ಕರೆಯಿಸಿ ಸಮಸ್ಯೆ ತಿಳಿದುಕೊಂಡು ಇತ್ಯರ್ಥಪಡಿಸಿದರು. ಅಲ್ಲದೇ, ತಾಲೂಕು ಮಟ್ಟದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೆ ಸ್ಥಳೀಯ ಅಧಿಕಾರಿಗಳೇ ಗಮನ ನೀಡಿ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.

    ಎಲ್ಲ ಇಲಾಖೆಗಳಿಂದ ಒಟ್ಟು 102 ಅರ್ಜಿಗಳು ಸ್ವೀಕೃತವಾದವು. ಈ ಪೈಕಿ, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಡಿಸಿ, ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ನಂತರ ಇತ್ಯರ್ಥಪಡಿಸುವುದಾಗಿ ಜನರಿಗೆ ತಿಳಿಸಿದರು.

    ಕಂದಾಯ ಇಲಾಖೆ, ಸಾಮಾಜಿಕ ಅರಣ್ಯ, ಪಶು ಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಗ್ರಾಮದಲ್ಲಿ ಸಂಚರಿಸಿ ವಸ್ತುಸ್ಥಿತಿ ಅರಿತರು: ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಕುಂಟೋಜಿ ಗ್ರಾಮದ ಬೀದಿಗಳಲ್ಲಿ ಅಧಿಕಾರಿಗಳೊಂದಿಗೆ ಸಂಚರಿಸಿ ಮೂಲಸೌಲಭ್ಯಗಳ ಕುರಿತು ವಸ್ತುಸ್ಥಿತಿ ಅರಿತರು. ಗ್ರಾಮದ ನ್ಯಾಯಬೆಲೆ ಅಂಗಡಿ, ಗ್ರಾಮ ಒನ್ ಕೇಂದ್ರ, ಅಂಗನವಾಡಿಗಳಿಗೆ ಭೇಟಿ ನೀಡಿ ಕಾರ್ಯಚಟುವಟಿಕೆ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಗ್ರಾಮದ ಎರಡು ಅಂಗನವಾಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಹಾಗೂ ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಕ್ಕಳೊಂದಿಗೆ ಕೆಲಕಾಲ ಸಮಯ ಕಳೆದರು. ಕೇಂದ್ರದಲ್ಲಿ ಪ್ರತಿನಿತ್ಯ ಏನೆಲ್ಲ ಪೌಷ್ಟಿಕ ಆಹಾರ ನೀಡುತ್ತಾರೆಂದು ಮಕ್ಕಳಿಂದ ಮಾಹಿತಿ ತಿಳಿದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts