More

    ಶ್ರೀಶೈಲದಲ್ಲಿ ಯುಗಾದಿ ರಥೋತ್ಸವ

    ಭೂಮಂಡಲದ ಮಧ್ಯಭಾಗದಲ್ಲಿರುವ ಶ್ರೀಶೈಲಕ್ಕೆ ನಾಭಿ ಕ್ಷೇತ್ರ ಎಂಬ ಹಿರಿಮೆ ಇದೆ. ಪುರಾಣ ಪ್ರಸಿದ್ಧ ಶ್ರೀಶೈಲ ಕ್ಷೇತ್ರದಲ್ಲಿ ಜ್ಯೋತಿರ್ಲಿಂಗದ ಜತೆಗೆ ಭಾರತದ 18 ಶಕ್ತಿಪೀಠಗಳಲ್ಲೊಂದಾದ ಶ್ರೀ ಭ್ರಮರಾಂಬ ದೇವಾಲಯ ಮತ್ತು ಸನಾತನ ಪಂಚಪೀಠಗಳಲ್ಲೊಂದಾದ ಶ್ರೀಮದ್ಗಿರಿರಾಜ ಸೂರ್ಯ ಸಿಂಹಾಸನ ಪೀಠವು ವಿರಾಜಮಾನವಾಗಿರುವುದರಿಂದ ಈ ಕ್ಷೇತ್ರವನ್ನು ಧರ್ಮದ ತ್ರಿವೇಣಿ ಸಂಗಮ ಎಂದು ಬಣ್ಣಿಸಲಾಗುತ್ತದೆ.

    ಯುಗ ಯುಗಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಶ್ರೀಶೈಲ ಕ್ಷೇತ್ರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ಸೀತಾಮಾತೆಯರು ಆದಿ ಜಗದ್ಗುರು ಶ್ರೀಚತುವ್ರಕ್ತ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸ್ಥಾಪಿಸಿರುವ ಸಹಸ್ರ ಲಿಂಗ ಮತ್ತು ದ್ವಾಪರಯುಗದಲ್ಲಿ ಆದಿಜಗದ್ಗುರು ಶ್ರೀದೇನುಕರ್ಣ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪಾಂಡವರು ಸ್ಥಾಪಿಸಿರುವ ಪಂಚಲಿಂಗಗಳನ್ನು ಇಂದಿಗೂ ಕಾಣಬಹುದು. ಹೀಗೆ ಪ್ರತಿ ಯುಗದ ಚಾರಿತ್ರಿಕ ಕುರುಹುಗಳೊಂದಿಗೆ ಪೂಜೆಗೊಳ್ಳುವ ಶ್ರೀಶೈಲ ಕ್ಷೇತ್ರದಲ್ಲಿ ಯುಗದ ಆದಿಯ ಪ್ರತೀಕವಾದ ಯುಗಾದಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

    ಮಲ್ಲಿಕಾರ್ಜುನ ಭ್ರಮರಾಂಬೆ ಕಲ್ಯಾಣೋತ್ಸವ: ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ, ಕೇವಲ ಭಕ್ತರಿಗೆ ದರ್ಶನ ಮತ್ತು ಧಾರ್ವಿುಕ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗಿದೆ. ಏ. 10ಕ್ಕೆ ಕಂಕಣ ಪೂಜೆಯೊಂದಿಗೆ ಶಿವಸಂಕಲ್ಪ ಆರಂಭವಾದ ನಂತರ ಶ್ರೀ ಮಲ್ಲಿಕಾರ್ಜುಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಭ್ರಮಾರಾಂಬದೇವಿಗೆ ಕುಂಕುಮಾರ್ಚನೆ ಮತ್ತು ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ ನೆರವೇರಲಿದೆ. ಪ್ರತಿದಿನ ರಾತ್ರಿ ಮಲ್ಲಿಕಾರ್ಜುನ ಭ್ರಮರಾಂಬೆಯರ ಕಲ್ಯಾಣೋತ್ಸವ ನಡೆಯಲಿದೆ. ಏ. 13 ಯುಗಾದಿಯಂದು ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಜರುಗಲಿದೆ. ಪರಂಪರೆಯಂತೆ ಶ್ರೀಶೈಲ ಜಗದ್ಗುರುಗಳು ಅಡ್ಡಪಲ್ಲಕ್ಕಿಯಲ್ಲಿ ಆಗಮಿಸಿ ಮಲ್ಲಿಕಾರ್ಜುನ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಲಿದ್ದಾರೆ. ಏ. 14ರಂದು ವಸಂತೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

    ಮಲ್ಲಯ್ಯನ ಕಂಬಿ ಉತ್ಸವ, ಪಾದಯಾತ್ರೆ: ಶಿವರಾತ್ರಿಯಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತರು ಶ್ರೀಶೈಲಕ್ಕೆ ಆಗಮಿಸುತ್ತಾರೆ. ಆದರೆ ಯುಗಾದಿ ಜಾತ್ರೆಗೆ ಶ್ರೀಶೈಲಕ್ಕೆ ಆಗಮಿಸುವ ಭಕ್ತರಲ್ಲಿ ಕರ್ನಾಟಕದವರದ್ದೇ ಸಿಂಹಪಾಲು. ಅದಕ್ಕೆ ಕಾರಣ ಮಲ್ಲಯ್ಯನ ಕಂಬಿ ಉತ್ಸವ. ಕರ್ನಾಟಕದ ಸುಮಾರು 15 ಜಿಲ್ಲೆಗಳ ಲಕ್ಷಾಂತರ ಭಕ್ತರು ವರ್ಷಕ್ಕೊಮ್ಮೆ ಮಲ್ಲಿಕಾರ್ಜುನನ ಕಂಬಿಯನ್ನು ತೆಗೆದುಕೊಂಡು ಶ್ರೀಶೈಲಕ್ಕೆ ಬರುತ್ತಾರೆ.

    ಕಮಾನಿನಂತಿರುವ ಬಿದಿರಿನ ಕಂಬಕ್ಕೆ ಹಿತ್ತಾಳೆಯ ಕವಚವನ್ನು ಹಾಕಿ ಗೋತ್ರಪುರುಷ ನಂದಿಯನ್ನು ಪ್ರತಿಷ್ಠಾಪಿಸಿದ ಕಂಬಿಯನ್ನು ವರ್ಷಪೂರ್ತಿ ಊರಿನಲ್ಲಿಟ್ಟು ಪೂಜೆ ಮಾಡುತ್ತಾರೆ. ಯುಗಾದಿ ಜಾತ್ರೆಯ ವೇಳೆ ಆ ಕಂಬಿಗಳನ್ನು ಶ್ರೀಶೈಲಕ್ಕೆ ತೆಗೆದುಕೊಂಡು ಬಂದು ದರ್ಶನ ಮಾಡಿ ವಾಪಸ್ ತೆಗೆದುಕೊಂಡು ಹೋಗುತ್ತಾರೆ.

    ಮಲ್ಲಿಕಾರ್ಜುನ ಸ್ವಾಮಿಗೆ ಧೂರಿ ದರ್ಶನ ಅತ್ಯಂತ ಶ್ರೇಷ್ಠ. ಪಾದಯಾತ್ರೆಯ ಮೂಲಕ ಧೂಳು ಕಾಲಿನಲ್ಲೇ ಬಂದು ದೇವರ ದರ್ಶನ ಮಾಡುವುದಕ್ಕೆ ಧೂರಿ ದರ್ಶನ ಎನ್ನಲಾಗುತ್ತದೆ. ಆ ಕಾರಣಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬಂದು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯುತ್ತಾರೆ. ಪಾದಯಾತ್ರೆ ಬರುವ ಭಕ್ತರು ‘‘ಸಿದ್ಧಗಿರಿ ಶಿವಗಿರಿ ಮಹಾಂತ ಮಲ್ಲಯ್ಯ, ಉಘೕ ಉಘೕ ಮಲ್ಲಯ್ಯ’’ ಎಂದು ಉದ್ಘೋಷ ಕೂಗುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts