More

    ಶ್ರೀನಿವಾಸಪುರ ಪುರಸಭೆ ಜೆಡಿಎಸ್ ತೆಕ್ಕೆಗೆ

    ಶ್ರೀನಿವಾಸಪುರ: ತೀವ್ರ ಕುತೂಹಲ ಕೆರಳಿಸಿದ್ದ ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಎಂ.ಎನ್.ಲಲಿತಾ, ಉಪಾಧ್ಯಕ್ಷರಾಗಿ ಐಷಾ ನಯಾಜ್ ಆಯ್ಕೆಯಾಗಿದ್ದಾರೆ.

    ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಲಲಿತಾ 12 ಮತ ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಲೀಲಾವತಿ 8 ಮತ ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಐಷಾ ನಯಾಜ್‌ಗೆ 12 ಮತ ಲಭಿಸಿದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿರ್ದೋಸ್ ಉನ್ನೀಸಾ 8 ಮತ ಪಡೆದಿದ್ದಾರೆ.

    ಒಟ್ಟು 23 ಸದಸ್ಯರ ಸಂಖ್ಯಾಬಲವಿರುವ ಪುರಸಭೆಯಲ್ಲಿ ಜೆಡಿಎಸ್ 11 ಹಾಗೂ ಜೆಡಿಎಸ್ ಬೆಂಬಲಿತ 1, ಕಾಂಗ್ರೆಸ್ 8, ಕಾಂಗ್ರೆಸ್ ಬೆಂಬಲಿತ 3 ಸದಸ್ಯರು ಆಯ್ಕೆಯಾಗಿದ್ದು. ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳಾ ಮೀಸಲು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿತ್ತು.

    ಶೀತಲ ಸಮರ: ಕಳೆದ ಪುರಸಭೆ ಮತ್ತು ಲೋಕಸಭೆ ಚುನಾವಣೆಯಿಂದ ಮುಖಂಡರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಆದ್ದರಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ನವರೇ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಸಹಕರಿಸಿದ್ದಾರೆ ಎನ್ನಲಾಗಿದೆ.

    ಜೆಡಿಎಸ್‌ಗೆ ಪರೋಕ್ಷ ಬೆಂಬಲ: 8 ಕಾಂಗ್ರೆಸ್, ಬೆಂಬಲಿತ 3 ಹಾಗೂ ಶಾಸಕರ ಮತ ಸೇರಿ ಒಟ್ಟು 12 ಮತ ಆಗಬೇಕಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಸಮಬಲ ಬರುವುದರಿಂದ ಅಧಿಕಾರ ಹಿಡಿಯಲು ಸಂಸದರ ಮತ ನಿರ್ಣಾಯಕವಾಗಿತ್ತು. ಆದರೆ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಗೈರಾಗುವ ಮೂಲಕ ಪರೋಕ್ಷವಾಗಿ ಜೆಡಿಎಸ್‌ಗೆ ಬೆಂಬಲ ನೀಡಿದಂತಾಗಿದೆ.

    ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಶ್ರೀನಿವಾಸ್ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಜೆಡಿಎಸ್ ಜಯಗಳಿಸುತ್ತಿದ್ದಂತೆ ಎಂ.ಜಿ.ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

    ಮುಖಂಡರಾದ ಬಿ.ಎನ್. ಸೂರ್ಯನಾರಾಯಣ, ಬಿ.ವಿ.ವೆಂಕಟರೆಡ್ಡಿ, ಸದಸ್ಯರಾದ ಕೆ. ಜಯಲಕ್ಷ್ಮೀ, ಎಸ್. ರಾಜು, ಸಿ.ಆನಂದಬಾಬು, ಷಬ್ಬೀರ್, ಶ್ರೀನಿವಾಸ್ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.

    ‘ಕೈ’ತಪ್ಪಿದ ಅಧಿಕಾರ: ಕಾಂಗ್ರೆಸ್ ಮುಖಂಡರು ಮನಸ್ಸು ಮಾಡಿದ್ದಲ್ಲಿ ಮೂವರು ಪಕ್ಷೇತರರನ್ನು ಸೆಳೆದು ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಇತ್ತಾದರೂ ಜೆಡಿಎಸ್ ಮುಖಂಡರು ಆ ಮೂವರು ಸದಸ್ಯರಲ್ಲಿ ಒಬ್ಬರನ್ನು ತಮ್ಮತೆಕ್ಕೆಗೆ ಹಾಕಿಕೊಂಡು ಕಾಂಗ್ರೆಸ್ಸಿಗೆ ಅಧಿಕಾರ ತಪ್ಪಿಸಿದ್ದಾರೆ. ಶಾಸಕ ಕೆ.ಆರ್.ರಮೇಶ್ ಕುಮಾರ್ ತಮ್ಮ ಪಕ್ಷಕ್ಕೆ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಇಲ್ಲವೆಂದು ಅರಿತು ಚುನಾವಣೆಗೆ ಗೈರಾದರೆ, ಸಂಸದ ಎಸ್.ಮುನಿಸ್ವಾಮಿ ತಮ್ಮ ಪಕ್ಷದ ರಾಜ್ಯ ನಾಯಕರ ಖಡಕ್ ಸೂಚನೆಗೆ ಹೆದರಿ ದೂರ ಸರಿದಿದ್ದು ಕಾಂಗ್ರೆಸ್ ಸೋಲಿಗೆ ಕಾರಣ ಎನ್ನಲಾಗಿದೆ.

    ಜೆಡಿಎಸ್ ವಲಯದಲ್ಲಿ ಹರ್ಷ: ಲೋಕ ಸಮರದಲ್ಲಿ ಗೆಲುವಿಗೆ ಸಹಕಾರ ನೀಡಿದ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಶ್ರೀನಿವಾಸಪುರ ಕಾಂಗ್ರೆಸ್ ಮುಖಂಡರ ಋಣ ತೀರಿಸಲು ಸಂಸದ ಮುನಿಸ್ವಾಮಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೆಂಬಲ ನೀಡಲು ಮುಂದಾಗಿದ್ದರಾದರೂ ಶಿಡ್ಲಘಟ್ಟ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿ ಬಿಜೆಪಿ ರಾಜ್ಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.

    ಮತ್ತೆ ಇದೇ ತಪ್ಪು ಮಾಡಿದಲ್ಲಿ ಪಕ್ಷದ ಶಿಸ್ತಿನ ಕ್ರಮಕ್ಕೆ ಗುರಿಯಾಗಬಹುದೆಂಬ ಭಯದಿಂದ ಗೈರಾದರೆನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿರುವುದಕ್ಕೆ ಜೆಡಿಎಸ್‌ನಲ್ಲಿ ಹರ್ಷ ವ್ಯಕ್ತವಾಗಿದ್ದರೆ, ಕಾಂಗ್ರೆಸ್‌ನಲ್ಲಿ ಮಂಕು ಆವರಿಸಿದೆ.

    ಮಾಜಿ ಶಾಸಕರಿಂದ ಅಭಿನಂದನೆ: ನನ್ನ ಅಧಿಕಾರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿ ನಡೆದಿದೆ. ಉಳಿದವರು ಪಟ್ಟಣದ ಜನತೆಗೆ ಸುಳ್ಳು ಭರವಸೆ ನೀಡಿ ಯಾಮಾರಿಸುತ್ತಿದ್ದಾರೆ. ಅದಕ್ಕೆ ಪ್ರತಿಲವಾಗಿ ಜೆಡಿಎಸ್ ಅಧಿಕಾರ ಹಿಡಿದಿದೆ. ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ತಾರತಮ್ಯ ಮಾಡಿಲ್ಲ. ಈಗ ಆಯ್ಕೆಯಾಗಿರುವವರು ಜನಸೇವೆ ಮಾಡಬೇಕು ಎಂದು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts