More

    ಚುನಾವಣೆಯಲ್ಲಿ ಉತ್ತರ ನೀಡಬೇಕಾಗುತ್ತೆ – ಬಂಜಾರ ಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಎಚ್ಚರಿಕೆ – ಸರ್ಕಾರದ ವಿರುದ್ಧ ಬಂಜಾರ ಸಮುದಾಯ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಹಗರಿಬೊಮ್ಮನಹಳ್ಳಿ
    ರಾಜ್ಯ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಅಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು, ಬಂಜಾರ ಸಮುದಾಯದವರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಂಜಾರ ಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸದಾಶಿವ ಆಯೋಗದ ವರದಿ ಆಧಾರದಲ್ಲಿ ಒಳಮೀಸಲಾತಿಯ ವರ್ಗೀಕರಣಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವ ಮೂಲಕ ಬಂಜಾರ ಸೇರಿದಂತೆ ಕೊರಚ, ಕೊರಮ, ಭೋವಿ ಸಮುದಾಯಗಳ ಸ್ವಾಭಿಮಾನದ ಅಸ್ತಿತ್ವಕ್ಕೆ ಧಕ್ಕೆ ತರಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಸಮುದಾಯಗಳ ವಿಶ್ವಾಸ, ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಸಮುದಾಯದ ಸಂಪೂರ್ಣ ವಿರೋಧವಿದೆ ಎಂದರು.

    2011ರ ಜನಗಣತಿ ಪ್ರಕಾರ ಬಂಜಾರ ಸಮುದಾಯದ ಮಾಹಿತಿಯನ್ನು ಸುಳ್ಳು ವರದಿ ಮಾಡಲಾಗಿದೆ. ಬಯಲು ಸೀಮೆಯಿಂದ ಕಾಫಿನಾಡಿಗೆ ಲಕ್ಷಾಂತರ ಸಮುದಾಯದ ಜನರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ ? ಬಂಜಾರ, ಭೋವಿ, ಕೊರಮ, ಕೊರಚ ಸಮಾಜಗಳ ಸ್ಥಿತಿಗಳನ್ನು ಅರಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾರೋ ನೀಡಿರುವ ಸಮೀಕ್ಷೆಗಳನ್ನು ಅದೇಶಿಸಿರುವುದು ಅವೈಜ್ಞಾನಿಕವಾಗಿದೆ. ಶೀಘ್ರವೇ ಶಿಫಾರಸು ಹಿಂಪಡೆಯಲೇ ಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಇಡೀ ಸಮುದಾಯ ಉತ್ತರ ನೀಡಲಿದೆ. ಎಲ್ಲ ತಾಂಡಾಗಳಲ್ಲಿ ಮತದಾನ ಬಹಿಷ್ಕಾರಕ್ಕೆ ನಾಮಫಲಕಗಳನ್ನು ಅಳವಡಿಸಲಾಗುವುದು, ಎಚ್ಚರವಿರಲಿ. ಬಂಜಾರ ಸಮುದಾಯ ನ್ಯಾಯಯುತವಾಗಿ ಹಕ್ಕೊತ್ತಾಯ ಮಾಡುತ್ತಿದೆ. ಸ್ಪಂದಿಸದಿದ್ದರೆ ಬಂಜಾರ ಸಮುದಾಯದ ಸ್ವಾಮೀಜಿಗಳೆಲ್ಲ ಸೇರಿ ನಿರಶನ ಕೈಗೊಳ್ಳಲಿದ್ದಾರೆ ಎಂದರು.

    ಬಳಿಕ ಗಂಗಾವತಿ ಭೀಮಪ್ಪನವರ ಸರ್ಕಾರಿ ಪಿಯು ಕಾಲೇಜು ಆವರಣದಿಂದ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆ ಜಾಥಾದ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನೂರಾರು ಜನ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ತಹಸೀಲ್ದಾರ ಚಂದ್ರಶೇಖರ ಶಂಭಣ್ಣ ಗಾಳಿ ಅವರಿಗೆ ಮನವಿ ಸಲ್ಲಿಸಿದರು. ಸ್ಥಳದಲ್ಲಿ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಜಯನಗರ ಎಸ್ಪಿ ಶ್ರೀಹರಿಬಾಬು ಮೊಕ್ಕಾಂ ಹೂಡಿದ್ದರು.

    ದೂಪದಹಳ್ಳಿ ಬಂಜಾರ ಶ್ರೀಶಕ್ತಿ ಪೀಠದ ಶ್ರೀ ಶಿವಪ್ರಕಾಶ್ ಮಹಾರಾಜ್, ಬಂಜಾರ ಸಂಘದ ತಾಲೂಕಾಧ್ಯಕ್ಷ ಚಂದ್ರನಾಯ್ಕ, ಅಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ನಾಯ್ಕ, ಗೋರಸೇನಾ ಜಿಲ್ಲಾ ಉಪಾಧ್ಯಕ್ಷ ಅಲೋಕ್ ನಾಯ್ಕ, ಪ್ರಮುಖರಾದ ಹನುಮನಾಯ್ಕ, ಕುಮಾರನಾಯ್ಕ, ರಾಮಾನಾಯ್ಕ, ಭಾವುಸಾ ನಾಯ್ಕ, ತುರಾಯಿನಾಯ್ಕ, ವೆಂಕಟೇಶ್ ನಾಯ್ಕ, ಪಟೇಲ್ ನಾಯ್ಕ, ವೀರೇಶ್ ನಾಯ್ಕ, ರಾಹುಲ್ ನಾಯ್ಕ, ಪಾಂಡುನಾಯ್ಕ, ಧರ್ಮನಾಯ್ಕ, ರಾಮಾನಾಯ್ಕ ತಾಲೂಕಿನ ತಾಂಡಾಗಳ ನಾಯ್ಕ, ಡಾವೋ, ಖಾರಾಭಾರಿಗಳು, ಸೇವಾಲಾಲ್ ಮಾಲಾಧಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts