More

    ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಆಸ್ತಿಯಾಗಿಸಿ

    ಸುಂಟಿಕೊಪ್ಪ: ಮಕ್ಕಳಿಗೆ ಆಸ್ತಿ ಮಾಡಿ ಇಡುವ ಬದಲು ಅವರಿಗೆ ಉನ್ನತ ಶಿಕ್ಷಣ ಕೊಡಿಸಿ ಅವರನ್ನೇ ಸಮಾಜದ ಆಸ್ತಿಯಾಗಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
    ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಹಾನ್ ಸಂತ ನಾರಾಯಣ ಗುರುಗಳ ಸಾಧನೆ ಮತ್ತು ಜೀವನವನ್ನು ಸ್ಮರಿಸುವ ಜತೆಗೆ ಅವರ ಉದಾತ್ತ ಗುಣಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸಮುದಾಯದವರಿಗೆ ಗೌರವ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಮುದಾಯದವರು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈಗಾಗಲೇ 7ನೇ ಹೊಸಕೋಟೆಯ ಬಳಿ ಅನಾಥ ಆಶ್ರಮ ನಿರ್ಮಿಸಲಾಗುತ್ತಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಪ್ರತಿಯೊಬ್ಬರೂ ತಮ್ಮ ಸಂಪಾದನೆಯಲ್ಲಿ ಶೇ.10ರಷ್ಟನ್ನು ಸಮಾಜಸೇವೆಗೆ ಮೀಸಲಿಡಬೇಕೆಂದು ಕಿವಿಮಾತು ಹೇಳಿದರು.
    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಿನ್ ಬಂಗೇರ ಮಾತನಾಡಿ, ನಮ್ಮ ಹಬ್ಬಹರಿದಿನಗಳು, ಅವುಗಳ ಆಚರಣೆ ಕೇವಲ ವ್ಯಾಟ್ಸಾಪ್ ಸ್ಟೇಟಸ್ ಗಳಿಗೆ ಸೀಮಿತವಾಗದೆ, ಎಲ್ಲರೂ ಒಗ್ಗೂಡಿ ಆಚರಿಸುವಂತಾಗಬೇಕು. ಪ್ರತಿ ಮನೆಯಲ್ಲೂ ಮಕ್ಕಳಿಗೆ ನಮ್ಮ ಪದ್ಧತಿ, ಆಚಾರ, ವಿಚಾರಗಳನ್ನು ಹೇಳಿಕೊಡುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ತಿಳಿಸಿದರು.
    ಸುಂಟಿಕೊಪ್ಪ ಗ್ರೇಡ್ 1 ಗ್ರಾಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ಬಿಲ್ಲವ ಸಮುದಾಯದ ಸಮಸ್ಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದರೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು. ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ನಾವೆಲ್ಲರೂ ಒಂದಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
    ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿದರು. ತಾಲೂಕು ಆಹಾರ ನಿರೀಕ್ಷಕಿ ಎಂ.ಎಸ್.ಸ್ವಾತಿ, ಸೋಮವಾರಪೇಟೆ ಶ್ರೀ ನಾರಾಯಣ ಗುರುಗಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್, ವಿರಾಜಪೇಟೆ ಸಂಘದ ಅಧ್ಯಕ್ಷ ಗಣೇಶ್, ಕುಶಾಲನಗರ ಕೋಟಿಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಎಸ್.ಸುಧೀರ್, ಮಡಿಕೇರಿ ಸಂಘದ ಅಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಹೋಬಳಿ ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಮಧುನಾಗಪ್ಪ, ಸುಂಟಿಕೊಪ್ಪ ಹೋಬಳಿ ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿ.ಎಸ್.ಪ್ರೀತಮ್, ಬಿ.ಎಂ. ಮುಖೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts