More

    ಹಟ್ಟಿ ತಿಪ್ಪೇಶನ ರಥೋತ್ಸವಕ್ಕೆ ಕ್ಷಣಗಣನೆ

    ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ನಡೆಯಲಿರುವ ರಥೋತ್ಸವಕ್ಕೆ ಭಕ್ತರು ದಂಡು ಆಗಮಿಸುತ್ತಲೇ ಇದೆ.
    ವಿವಿಧ ಜಿಲ್ಲೆಯಲ್ಲಿ ನೆಲೆಸಿರುವ ಹಟ್ಟಿಯ ಜನರು, ಒಂದು ವಾರದಿಂದ ನಾಯಕನಹಟ್ಟಿಗೆ ಆಗಮಿಸುತ್ತಿದ್ದು, ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿತ್ತು. ಜತೆಗೆ ವಿವಿಧೆಡೆಯಿಂದ ತಂಡೋಪ ತಂಡವಾಗಿ ಪಾದಯಾತ್ರಿಗಳು ಕೂಡ ಆಗಮಿಸುತ್ತಿದ್ದಾರೆ.

    ಜತೆಗೆ ಅಂಗಡಿ-ಮುಂಗಟ್ಟುಗಳು ಠಿಕಾಣಿ ಹೂಡಿದ್ದು, ಮಕ್ಕಳ ಆಟಿಕೆಗಳು ಗಮನಸೆಳೆಯುತ್ತಿವೆ. ಒಳ ಮತ್ತು ಹೊರಮಠಗಳು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿವೆ.
    ಶುಕ್ರವಾರ ಬೆಳಗ್ಗೆ 10 ಗಂಟೆ ತಿಪ್ಪೇರುದ್ರಸ್ವಾಮಿ ಚಿಕ್ಕ ರಥೋತ್ಸವ ನಡೆಯಲಿದ್ದು, ಒಳಮಠದಿಂದ ಪಲ್ಲಕ್ಕಿಯಲ್ಲಿ ಆಗಮಿಸುವ ಉತ್ಸವ ಮೂರ್ತಿಯನ್ನು ಅರ್ಧ ವೃತ್ತಾ ಕಾರದಲ್ಲಿ ನಿರ್ಮಿಸಿರುವ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಚಿಕ್ಕ ರಥೋತ್ಸವ 1 ಗಂಟೆಗೆ ಪೂರ್ಣಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಗೆ ಚಿತ್ತ ನಕ್ಷದ ಸಮಯದಲ್ಲಿ ದೊಡ್ಡ ರಥೋತ್ಸವ ನೆರವೇರಲಿದೆ.

    ಪಪಂ, ಪೊಲೀಸ್ ಇಲಾಖೆ, ತಾಲೂಕು, ಜಿಲ್ಲಾ ಆಡಳಿತ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿ ಠಿಕಾಣಿ ಹೂಡಿದ್ದು, ಸಿದ್ಧತೆ ಕಾರ್ಯ ಪೂರ್ಣ ಗೊಳಿಸಿದ್ದಾರೆ. ಪಪಂ ಮುಖ್ಯಾಧಿಕಾರಿ ಟಿ.ಲೀಲಾವತಿ, ಸಿಬ್ಬಂದಿಯೊಂದಿಗೆ ಒಂದು ತಿಂಗಳಿನಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿದ್ದಾರೆ. ಈಶ್ವರ ದೇವಾಲಯದಲ್ಲಿ ಗಣ್ಯರಿಗೆ ವೇದಿಕೆ ಸಿದ್ಧ ಮಾಡಲಾಗಿದೆ.

    ಮುಕ್ತಿ ಬಾವುಟ ಪಡೆಯುವ ವಿಧಾನ
    ಪ್ರತಿ ವರ್ಷ ಮುಕ್ತಿ ಬಾವುಟ ಪಡೆಯುವುದಕ್ಕೆ ಯಾವುದೆ ನಿಬಂಧನೆಗಳಿರಲಿಲ್ಲ. ಆದರೆ, ಕೆಲವು ವ್ಯಕ್ತಿಗಳು ಹರಾಜು ಬಳಿಕ ಪೂರ್ಣ ಮೊತ್ತವನ್ನು ಸಂದಾಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ಹರಾಜುದಾರರು ಮೊದಲ ಪಾರ್ಟಿ, ದೇಗುಲದ ಇಒ ಎರಡನೇ ಪಾರ್ಟಿಯಾಗಿ 100 ರೂ. ಛಾಪಾ ಕಾಗದದಲ್ಲಿ ಹರಾಜಿನ ಮೊತ್ತ ಪಾವತಿಸುತ್ತೇನೆಂದು ಒಪ್ಪಂದಕ್ಕೆ ಒಪ್ಪಿ ಸಹಿ ಮಾಡಬೇಕು. ಒಂದು ವರ್ಷ ಅಡ್ವಾನ್ಸ್ ಮೊತ್ತದ ಚೆಕ್ ನೀಡಬೇಕು. ಈ ಹಿಂದಿನ ಸಾಲಿನಲ್ಲಿ ಹರಾಜಿನಲ್ಲಿ ಬಾವುಟ ಪಡೆದು, ಮೊತ್ತ ಪಾವತಿಸದ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

    ಸಂಚಾರಕ್ಕೆ ವ್ಯವಸ್ಥೆ
    ಮಾರ್ಚ್ 11ರವರೆಗೆ ಕೆಎಸ್‌ಆರ್‌ಟಿಸಿ 200 ವಿಶೇಷ ಬಸ್‌ಗಳನ್ನು ಓಡಿಸಲಿದೆ. ಪಟ್ಟಣದ 3 ಕಡೆಗಳಲ್ಲಿ ಬಸ್ ನಿಲ್ದಾಣ ಸ್ಥಾಪಿಸಲಾಗಿದೆ. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗಂಗಯ್ಯನಹಟ್ಟಿ ಬಳಿ, ಬಳ್ಳಾರಿ-ಅನಂತಪುರ-ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಾಸದ ಬಳಿ, ಬೆಂಗಳೂರು-ತುಮಕೂರು- ಚಳ್ಳಕೆರೆ-ಚಿತ್ರದುರ್ಗ ಮಾರ್ಗ ದಿಂದ ಬರುವವರಿಗೆ ಮನುಮೈನಹಟ್ಟಿ ಏಕಾಂತೇಶ್ವರ ದೇವಾಲಯದ ಬಳಿ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಬಳಿಗೆ ತೆರಳಲು ಆಟೋ ವ್ಯವಸ್ಥೆ ಮಾಡಲಾಗಿದೆ.

    *ಆರೋಗ್ಯ ಸೇವೆ
    180ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 25 ವೈದ್ಯರು ಆರೋಗ್ಯ ಸೇವೆಗೆ ಸಜ್ಜಾಗಿದ್ದಾರೆ. ಪಟ್ಟಣದ 4 ಕಡೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts