More

    ಬನ್ನಂಜೆ ಸತ್ಯಾನ್ವೇಷಕ, ಶ್ರದ್ಧಾಂಜಲಿ ಸಭೆಯಲ್ಲಿ ಪುತ್ತಿಗೆ ಶ್ರೀ ಅಭಿಮತ

    ಉಡುಪಿ: ಪ್ರಭಾವಕ್ಕೆ ಒಳಗಾಗದೆ ತತ್ವ ಮತ್ತು ಸತ್ಯವನ್ನು ತಿಳಿಯಲು ಒಳಗಣ್ಣು ತೆರೆದು ಸಾಗಿದ್ದರಿಂದ ಅಗಾಧ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಗಿದೆ. ಬನ್ನಂಜೆ ಗೋವಿಂದಾಚಾರ್ಯರು ಪಂಡಿತ, ಕವಿ ಮಾತ್ರವಲ್ಲ, ಸತ್ಯಾನ್ವೇಷಕರೂ ಆಗಿದ್ದರು ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
    ಎಂಜಿಎಂ ಕಾಲೇಜಿನಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಸಾರ್ವಜನಿಕ ನುಡಿನಮನ ಸಭೆಯಲ್ಲಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

    ಮಾತು, ಕೃತಿ ಮತ್ತು ಆಚರಣೆಯಲ್ಲಿ ಒಂದೇ ತೆರನಾಗಿದ್ದ ಬನ್ನಂಜೆ ಯಾರನ್ನೂ ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳುತ್ತಿರಲಿಲ್ಲ. ಸತ್ಯವನ್ನು ನಿಷ್ಠುರವಾಗಿ ಹೇಳುವ ಧೈರ್ಯ ಅವರಿಗಿತ್ತು. ಈ ಕಾರಣದಿಂದ ತ್ರಿಕರಣ ಪೂರ್ವಕ ತತ್ವಬದ್ಧ ಜೀವನ ಸಾಗಿಸಲು ಸಾಧ್ಯವಾಗಿದೆ. ಸರ್ಕಾರ ಬನ್ನಂಜೆ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
    ಸಂಸ್ಕೃತ ಶ್ಲೋಕಗಳಿಗೆ ಸಮಾನಾರ್ಥವಾಗಿ ಕನ್ನಡದ ಪದಗಳನ್ನು ಬಳಸುತ್ತಿದ್ದ ಅವರ ಪ್ರತಿಭೆ ವಿಶಿಷ್ಟವಾಗಿತ್ತು ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

    ಸಮಕಾಲೀನ ಸಮಾಜದಲ್ಲಿ ಬನ್ನಂಜೆಯವರಿಗೆ ಸಮಾನರಿರಲಿಲ್ಲ ಎಂದ ಸಂಸದೆ ಶೋಭಾ ಕರಂದ್ಲಾಜೆ, ಅವರ ವ್ಯಕಿತ್ವ ಮತ್ತು ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಾಖಲೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
    ಶಾಸಕ ರಘುಪತಿ ಭಟ್, ವಿದ್ವಾನ್ ರಾಮನಾಥ ಆಚಾರ್ಯ, ಹೆರ್ಗ ರವೀಂದ್ರ ಭಟ್ ನುಡಿನಮನ ಸಲ್ಲಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆ ಮಾಡಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.

    ಸ್ವಾತಂತ್ರೋತ್ತರ ಭಾರತದಲ್ಲಿ ಭಾರತೀಯ ಪರಂಪರೆ ಹಾಗೂ ಸನಾತನ ಪದ್ಧತಿಗಳು ಆಧುನಿಕ ವಿಮರ್ಶಕರ ದಾಳಿಗೆ ಸಿಲುಕಿ ಮೂಲೆಗುಂಪಾಗುವ ಸಾಧ್ಯತೆಗಳಿದ್ದವು. ಆದರೆ ಬನ್ನಂಜೆ ಗೋವಿಂದಾಚಾರ್ಯರು ನೂರಾರು ಪ್ರವಚನಗಳ ಮೂಲಕ ದೇಶ, ವಿದೇಶದಲ್ಲೂ ಭಾರತೀಯ ತತ್ವಶಾಸ್ತ್ರಗಳ ಮಹತ್ವವನ್ನು ಪಾಂಡಿತ್ಯಪೂರ್ಣವಾಗಿ ಸಮರ್ಥಿಸಿ ವಿತಂಡವಾದಿಗಳ ಬಾಯಿ ಮುಚ್ಚಿಸಿದ್ದರು.
    – ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts