More

    ಬಡೆಸೋಂಪನ್ನು ಊಟದ ನಂತರ ಸೇವಿಸುವುದು ಸರಿಯೇ? ಯಾವ್ಯಾವ ಪದಾರ್ಥಗಳು ಯಾವುದಕ್ಕೆ ಪ್ರಯೋಜನಕಾರಿ?

    ಜಗತ್ತಿನ ಯಾವುದೇ ಜ್ಞಾನಕೋಶಗಳಲ್ಲಿ ಆಯುರ್ವೇದದಲ್ಲಿ ಹೇಳಿರುವಷ್ಟು ಗುಣಗಳನ್ನು ಹೇಳಲಾಗಿಲ್ಲ. ವಿಭಿನ್ನ ಸಂದರ್ಭಗಳಲ್ಲಿ ವಿವರಿಸಿರುವುದನ್ನು ಒಂದೆಡೆ ಸೇರಿದರೆ ಎಪ್ಪತ್ತು ಗುಣಗಳ ವರ್ಣನೆ ಲಭ್ಯವಾಗುತ್ತದೆ! ಗುರು, ಪರ, ಬುದ್ಧಿ, ಚಿಂತ್ಯ ಮೊದಲಾದ ನಲವತ್ತಾರು ಗುಣಗಳು ಒಂದೆಡೆಯಾದರೆ ದೀಪನ ಪಾಚನಾದಿ ಇಪ್ಪತ್ತನಾಲ್ಕು ಗುಣಗಳು ಚಿಕಿತ್ಸೆಯಲ್ಲಿ ವೈದ್ಯರಿಗೆ ನೆರವಾಗುತ್ತವೆ. ಭಾವಪ್ರಕಾಶ ಗ್ರಂಥದಲ್ಲಿಯೂ ದೀಪನ ಪಾಚನಾದಿ 24 ಗುಣಗಳ ವಿವರಣೆ ಇದೆ.

    ದೀಪನ: ಹಸಿವನ್ನು ಹೆಚ್ಚಿಸುವುದಕ್ಕೆ ದೀಪನ ಗುಣ ಎನ್ನಲಾಗುತ್ತದೆ. ಬಡೆಸೋಂಪು ಇದಕ್ಕೊಂದು ಉದಾಹರಣೆ. ಭೋಜನದ ಆರಂಭದಲ್ಲಿ ಇದನ್ನು ಸೇವಿಸಬೇಕೇ ಹೊರತು ಊಟದ ಕೊನೆಯಲ್ಲಿ ನೀಡುವುದಲ್ಲ. ಈಗ ಹೋಟೆಲ್‌ಗಳೂ ಸೇರಿದಂತೆ ಎಲ್ಲೆಡೆ ಅದನ್ನು ಊಟದ ನಂತರವೇ ನೀಡಲಾಗುತ್ತಿದೆ!

    ಪಾಚನ: ಜೀರ್ಣಶಕ್ತಿಯನ್ನು ಹೆಚ್ಚಿಸುವ, ಜೀರ್ಣವಾಗದ ಆಹಾರವನ್ನು ಪಚನಮಾಡುವ ಗುಣಧರ್ಮ. ನಾಗಕೇಶರ, ಚಿತ್ರಕಗಳು ಈ ಗುಣವನ್ನು ಹೊಂದಿವೆ.
    ಶಮನ: ಏರುಪೇರಾಗಿರುವ ದೋಷಗಳನ್ನು ಸಹಜ ಸ್ಥಿತಿಗೆ ತರುವ ಗುಣವಿದು. ಅಮೃತಬಳ್ಳಿ ಇದಕ್ಕೊಂದು ಉದಾಹರಣೆ.
    ಅನುಲೋಮನ: ಆಹಾರ ಜೀರ್ಣವಾಗುತ್ತಿದ್ದಂತೆ ಮಲದ ಚಲನೆಗೆ ಉಂಟಾಗುವ ತಡೆಯನ್ನು ತೆಗೆದು ಕೆಳಗೆ ತರುವ ಕಾರ್ಯವಿದು. ಅಳಲೆಕಾಯಿ ಈ ಗುಣ ಪಡೆದಿದೆ.
    ಸ್ರಂಸನ: ಕರುಳಿಗೆ ಅಂಟಿಕೊಂಡಿರುವ ಮಲವನ್ನು ಹಾಗೆಯೇ ಕೆಳಗೆ ತಳ್ಳುವುದು ಸ್ರಂಸನ. ಹಳದಿ ಹೂ ಬಿಡುವ ಆರಗ್ವಧ ಗಿಡವಿದಕ್ಕೆ ನಿದರ್ಶನ.
    ಭೇದನ: ಮಲವನ್ನು ಕೆಳಗೆ ತಳ್ಳುವ ಗುಣಕ್ಕೆ ಭೇದನ ಎಂದು ಹೆಸರು. ಕಟುಕರೋಹಿಣಿ ಗಿಡದ ಕಾರ್ಯವು ಹೀಗಿರುತ್ತದೆ.
    ರೇಚನ: ಪಕ್ವವಾದ ಮಲವನ್ನು ದ್ರವೀಕರಿಸಿ ಕರುಳಿನಿಂದ ಹೊರಕ್ಕೆ ತಳ್ಳುವ ತೀವ್ರ ಗುಣಕ್ಕೆ ತ್ರಿವೃತ್‌ಬೀಜವು ಒಂದು ಉದಾಹರಣೆ.
    ವಮನ: ಜೀರ್ಣವಾಗದ ಪಿತ್ತ, ಕಫಗಳನ್ನು ವಾಂತಿ ಮಾಡಿಸುವ ಗುಣಹೊಂದಿದ ದ್ರವ್ಯಗಳು. ಮದನಫಲ ಇದೇ ಗುಣ ಹೊಂದಿದೆ.
    ದೇಹ ಸಂಶೋಧನ: ಸಂಚಯವಾದ ಮಲವನ್ನು ದೋಷಗಳೊಂದಿಗೆ ಹೊರತೆಗೆಯುವುದು ಸಂಶೋಧನ. ಕಾಡು ಹಾಗಲಕಾಯಿ ಈ ಗುಣಭರಿತವಾಗಿದೆ.
    ಗ್ರಾಹಿ: ದೀಪನ, ಪಾಚನ ಗುಣವಿದ್ದು ತನ್ನ ಉಷ್ಣಗುಣದಿಂದ ಮಲದ ದ್ರವಾಂಶವನ್ನು ಒಣಗಿಸುವುದು. ಶುಂಠಿ, ಜೀರಿಗೆ, ಗಜಹಿಪ್ಪಲಿಗಳು ಉದಾಹರಣೆ.
    ಸ್ತಂಭನ: ಒಣತ್ವ, ಶೀತಲ, ಕಷಾಯರುಚಿ, ಬೇಗನೆ ಪಾಕವಾಗುವ ಗುಣಗಳಿಂದ ವಾತವನ್ನು ಹೆಚ್ಚಿಸಿ ಮಲದ ಚಲನೆ ತಡೆಯುವುದೇ ಸ್ತಂಭನ ಗುಣ. ಕೊಡಸಿಗೆ, ಶ್ಯೋನಾಕಗಳು ಈ ರೀತಿಯ ಕಾರ್ಯ ಹೊಂದಿವೆ.
    ಛೇದನ: ಕಫಾದಿ ದೋಷಗಳು ಕರುಳಿಗೆ ಅಂಟಿಕೊಂಡಿರುವ ಮಲವನ್ನು ಬಲದಿಂದ ಕತ್ತರಿಸಿ ಕೆಳತರುವ ಗುಣ. ಕ್ಷಾರಗಳು, ಕಾಳುಮೆಣಸು ಉದಾಹರಣೆ.
    ಲೇಖನ: ಧಾತು ಮಲಗಳನ್ನು ಶುಷ್ಕಗೊಳಿಸಿ ಹೊರತರುವ ಗುಣ. ಇದು ಜೇನುತುಪ್ಪ, ಬಿಸಿನೀರು, ಬಜೆ, ಕೊಡಸಿಗೆಗಳಲ್ಲಿ ಕಾಣಸಿಗುತ್ತದೆ.
    ವಾಜೀಕರಣ: ಲೈಂಗಿಕ ಶಕ್ತಿಯನ್ನು ಹರ್ಷದಾಯಕವಾಗಿಸುವ ಗುಣ. ಅಶ್ವಗಂಧ, ಮುಸಲಿ, ಸಕ್ಕರೆ, ಶತಾವರಿಗಳು ಉದಾಹರಣೆ.
    ಶುಕ್ರಲ: ವೀರ್ಯವನ್ನು ಹೆಚ್ಚಿಸುವ ಗುಣ. ನಾಗಬಲ, ನಸುಗುನ್ನಿ ಬೀಜಗಳು ಇದಕ್ಕೆ ಉದಾಹರಣೆ.
    ಶುಕ್ರಜನಕ: ವೀರ್ಯವನ್ನು ಶೀಘ್ರ ಉತ್ಪತ್ತಿಮಾಡಿ ರೇಚನಗೊಳಿಸಬಲ್ಲ ಗುಣ. ಹಾಲು, ಉದ್ದು ಹಾಗೂ ನೆಲ್ಲಿಕಾಯಿಗಳು ಇದರಿಂದ ಸಂಪನ್ನಗೊಂಡಿವೆ.
    ಶುಕ್ರರೇಚಕ: ವೀರ್ಯ ಹೊರಬರಲು ಅನೂಕೂಲ ಮಾಡಿಕೊಡುವ ಗುಣ. ಉದಾಹರಣೆಗೆ ಹೆಗ್ಗುಳ್ಳಕಾಯಿ.
    ಶುಕ್ರಸ್ತಂಭಕ: ಶುಕ್ರವು ಬೇಗನೆ ಸ್ರಾವವಾಗದಂತೆ ತಡೆಯುವ ಗುಣವಾಗಿದ್ದು ಜಾಯಿಕಾಯಿ ಇಂತಹ ಗುಣಪಡೆದಿದೆ.
    ಶುಕ್ರಕ್ಷಯ: ವೀರ್ಯವನ್ನು ಕಡಿಮೆ ಮಾಡುವಂತಹ ಕಾರ್ಯಗುಣ. ಉದಾಹರಣೆಗೆ ಕಲ್ಲಂಗಡಿಹಣ್ಣು.
    ರಸಾಯನ: ಮುಪ್ಪು ಮುಂದೂಡುವ, ರೋಗ ನಾಶಗೊಳಿಸುವ ಕಾರ್ಯದಕ್ಷತೆಯೇ ರಸಾಯನ ಗುಣ. ಅಳಲೆಕಾಯಿ, ಲೂತಿಕಾಯಿ, ಶಿಲಾಜಿತುಗಳಲ್ಲಿದೆ.
    ವ್ಯವಾಯಿ: ಮೊದಲು ದೇಹವಿಡೀ ವ್ಯಾಪಿಸಿ ಬಳಿಕ ಪಾಕ ಪ್ರಕ್ರಿಯೆಗೆ ಒಳಗಾಗುವ ದ್ರವ್ಯಗಳ ಗುಣ. ಗಾಂಜಾ, ಗಸಗಸೆ ಬೀಜಗಳು ಉದಾಹರಣೆ.
    ವಿಕಾಶಿ: ಧಾತುಗಳಲ್ಲಿರುವ ಓಜಸ್ಸನ್ನು ಒಣಗಿಸಿ ಸಂಧಿಗಳಲ್ಲಿ ಶಿಥಿಲತೆ ಉಂಟುಮಾಡುವ ಗುಣ. ಅಡಕೆ ಹಾಗೂ ಹಾರಕ ಸಿರಿಧಾನ್ಯಗಳು ಉದಾಹರಣೆ.
    ಮದಕಾರಿ: ತಮೋಗುಣದ ಪ್ರಾಧಾನ್ಯದಿಂದ ಬುದ್ಧಿ ವಿಹೀನತೆ ಉಂಟುಮಾಡುವ ಮದ್ಯದ ಗುಣ.
    ವಿಷ: ಕಫವನ್ನು ಛೇದಿಸಿ ಸುಡುವ ಗುಣದೊಂದಿಗೆ ಜೀವನಾಶಗೊಳಿಸುವ ಗುಣ.
    ಪ್ರಮಾಥಿ: ವೀರ್ಯದಿಂದ ನಾಡಿಗಳಲ್ಲಿ ಸಂಚಯವಾದ ದೋಷ ಹೊರಹಾಕುವ ಗುಣ. ಉದಾಹರಣೆ ಕಾಳುಮೆಣಸು ಹಾಗೂ ಬಜೆ.
    ಅಭಿಷ್ಯಂಧಿ: ರಸಧಾತು ಸಂಚಾರಕ್ಕೆ ತಡೆಮಾಡಿ ದೇಹದ ಆ ಭಾಗವನ್ನು ಭಾರಗೊಳಿಸುವ ಗುಣ. ಮೊಸರು ಇಂತಹ ಗುಣ ಹೊಂದಿದೆ.
    ವಿದಾಹಿ: ಹುಳಿತೇಗು, ಬಾಯಾರಿಕೆ, ಎದೆಉರಿ ಉಂಟುಮಾಡಿ ಜೀರ್ಣವಾಗಲು ಬಹಳಹೊತ್ತು ತೆಗೆದುಕೊಳ್ಳುವ ಗುಣವಾಗಿದೆ. ಅವರೆಕಾಯಿಯ ಲಕ್ಷಣವಿದು.
    ಯೋಗವಾಹಿ: ಯಾವ ದ್ರವ್ಯದ ಜೊತೆ ಸೇರುತ್ತದೋ ಅದರ ಗುಣ ಪಡೆದು ಕಾರ್ಯವೆಸಗುವುದು. ಜೇನುತುಪ್ಪ, ನೀರು, ಎಣ್ಣೆ, ತುಪ್ಪ, ಲೋಹಗಳೆಲ್ಲ ಯೋಗವಾಹಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts