More

    ಶಾಪಿಂಗ್ ನನಸು ಯಾವಾಗ?

    ಬೆಳಗಾವಿ : ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖವಾದ ಶಾಪಿಂಗ್ ಮಾಲ್ ನಿರ್ಮಾಣ ಯೋಜನೆ ಇನ್ನೂ ಕನಸಾಗಿಯೇ ಉಳಿದಿದೆ. ಎಪಿಎಂಸಿ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಟ್ಟಡ ನಿರ್ಮಾಣದ ಹಂತದಲ್ಲಿಯೇ ಇದೆ.

    ದಿನದಿಂದ ದಿನಕ್ಕೆ ನಗರ ವಿಸ್ತರಣೆಯಾಗುತ್ತಿದ್ದು, ಜನರಿಗೆ ಸಮೀಪದಲ್ಲಿಯೇ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮತ್ತು ಈಗಿರುವ ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು 2012ರಲ್ಲಿಯೇ ‘ಶಾಪಿಂಗ್ ಮಾಲ್’ ಯೋಜನೆ ಸಿದ್ಧಪಡಿಸಿತ್ತು. ಪಾಲಿಕೆ ಸಾಮಾನ್ಯ ಸಭೆಯಲ್ಲೂ ನಿರ್ಣಯ ಕೈಗೊಂಡು ನಗರಾಭಿವೃದ್ಧಿ ಇಲಾಖೆ ಅನುಮತಿ ಪಡೆಯಲಾಗಿತ್ತು.
    ಆದರೆ, ಬಳಿಕ ಆರ್ಥಿಕ ಸಮಸ್ಯೆ, ಆಡಳಿತ ಮಂಡಳಿ ಬದಲಾವಣೆ ಇನ್ನಿತರ ಕಾರಣಗಳಿಂದ ಯೋಜನೆ ನನೆಗುದಿದೆ ಬಿದ್ದಿದೆ.

    ನಾಲ್ಕು ಕಡೆ ಮಾಲ್: ಪಾಲಿಕೆಯು ಮಾಸಿಕ ಕೋಟ್ಯಂತರ ರೂ. ಆದಾಯದ ಗುರಿ ಹಾಕಿಕೊಂಡು ನಗರದ ನಾಲ್ಕು ಸ್ಥಳಗಳಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಅದರಲ್ಲಿ ಟಿಳಕವಾಡಿ ಕಲಾಮಂದಿರ ಸ್ಥಳದಲ್ಲಿ 44.62 ಕೋಟಿ ರೂ. ವೆಚ್ಚದಲ್ಲಿ ಮಾಲ್ ನಿರ್ಮಿಸುವ ಯೋಜನೆಯಿತ್ತು. ನೆಲಮಹಡಿ ಮತ್ತು 1ನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆ, 2ನೇ ಮಹಡಿಯಲ್ಲಿ ಚಲನಚಿತ್ರ ಮಂದಿರ, 3ನೇ ಮಹಡಿಯಲ್ಲಿ ಫುಡ್ ಕೋರ್ಟ್ ಮತ್ತು 4ನೇ ಮಹಡಿಯಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು.

    ಮಾಳಮಾರುತಿ ಬಡಾವಣೆ: ಈ ಪ್ರದೇಶದಲ್ಲಿ 32.05 ಕೋಟಿ ರೂ. ವೆಚ್ಚದಲ್ಲಿ ಮಾಲ್ ನಿರ್ಮಿಸಿ ಅದರ ನೆಲಮಹಡಿ ಮತ್ತು 1ನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು, 2ನೇ ಮಹಡಿಯಲ್ಲಿ ಮಲ್ಟಿಪ್ಲೆಕ್ಸ್, 3ನೇ ಮಹಡಿಯಲ್ಲಿ ುಡ್ ಕೋರ್ಟ್ ಸೌಲಭ್ಯ ಕಲ್ಪಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿತ್ತು.

    ಗೋವಾವೇಸ್: ಇಲ್ಲಿನ ಬಸವೇಶ್ವರ ವೃತ್ತದಲ್ಲಿಯೂ 3.2 ಕೋಟಿ ರೂ. ವೆಚ್ಚದಲ್ಲಿ ಶಾಪಿಂಗ್ ಮಾಲ್ ನಿರ್ಮಿಸಿ ಅದರ ನೆಲ ಮಾಳಿಗೆ, ನೆಲಮಹಡಿ ಮತ್ತು 1ನೇ ಮಹಡಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಎಪಿಎಂಸಿ ಪ್ರದೇಶದಲ್ಲಿ ಮಾತ್ರ ಶಾಪಿಂಗ್ ಮಾಲ್ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಗತಿ ಹಂತದಲ್ಲಿ 40 ಕೋಟಿ ರೂ. ವೆಚ್ಚದ ಕಾಮಗಾರಿ: ಪಾಲಿಕೆ ಒಡೆತನದ ಎಪಿಎಂಸಿ ಪ್ರದೇಶದಲ್ಲಿ 2015 ರಲ್ಲಿ ಸುಮಾರು 40 ಕೋಟಿ ರೂ.ವೆಚ್ಚದಲ್ಲಿ 24,540 ಚ.ಮೀ. ವಿಸ್ತೀರ್ಣದಲ್ಲಿ ಮಾಲ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಈ ಕಟ್ಟಡದ ನೆಲಮಹಡಿ ಮತ್ತು 1ನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆ, 2ನೇ ಮಹಡಿಯಲ್ಲಿ ಚಲನಚಿತ್ರ ಮಂದಿರ, 3ನೇ ಮಹಡಿಯಲ್ಲಿ ಫುಡ್ ಕೋರ್ಟ್ ಮತ್ತು 4ನೇ ಮಹಡಿಯಲ್ಲಿ ಮಲ್ಟಿಪ್ಲೆಕ್ಸ್ ಸೌಲಭ್ಯ ಇರುವ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ನ್ಯಾಯಾ ಲಯದಲ್ಲಿ ಪ್ರಕರಣ ಇತ್ಯರ್ಥಗೊಂಡು ಮತ್ತೆ ಕಾಮಗಾರಿ ಆರಂಭಗೊಂಡಿದೆ. ಆದರೆ, ಯಾವಾಗ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಇಲ್ಲ.

    ನಗರದ ವಿವಿಧ ಕಡೆ ಮಹಾನಗರ ಪಾಲಿಕೆ ವತಿಯಿಂದ ಶಾಪಿಂಗ್ ಮಾಲ್ ನಿರ್ಮಿಸಲು ಈ ಹಿಂದೆ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಎಪಿಎಂಸಿ ಪ್ರದೇಶದಲ್ಲಿ ಮಾತ್ರ ಮಾಲ್ ನಿರ್ಮಾಣ ಪ್ರಗತಿಯಲ್ಲಿದೆ. ಒಟ್ಟು 220 ಮಳಿಗೆಗಳ ಪೈಕಿ 48 ಮಳಿಗೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಮೂರು ಕಡೆಯ ಶಾಪಿಂಗ್ ಮಾಲ್ ನಿರ್ಮಾಣ ಯೋಜನೆ ಕೈ ಬಿಡಲಾಗಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಶಾಪಿಂಗ್ ಮಾಲ್ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
    | ಕೆ.ಎಚ್.ಜಗದೀಶ ಪಾಲಿಕೆ ಆಯುಕ್ತ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts