More

    ಕಸ್ತೂರಿ ರಂಗನ್ ವರದಿ ಸಮಸ್ಯೆಯಾಗದಂತೆ ಕ್ರಮ, ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

    ಕಾರ್ಕಳ: ಪಶ್ಚಿಮಘಟ್ಟ ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿ ಕಸ್ತೂರಿರಂಗನ್ ವರದಿಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.
    ಕೇಂದ್ರ ಸರ್ಕಾರದಿಂದ ಕಾರ್ಕಳಕ್ಕೆ ಸಿಆರ್‌ಎಫ್ / ಸಿಆರ್‌ಎಫ್/ ಗ್ರಾಮ ಸಡಕ್ ಯೋಜನೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ನಡೆದಿದೆ. ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಗೊಂಡಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ರಾಜಕೀಯ ಪ್ರೇರಿತ: ಕೃಷಿ ನೀತಿ ಜಾರಿಗೊಂಡು 2-3 ತಿಂಗಳ ನಂತರ ಹೋರಾಟ ನಡೆಯುತ್ತಿದೆ. ಇದರ ಹಿಂದೆ ರಾಜಕೀಯ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳು ಕೈಜೋಡಿಸಿವೆ ಎಂದು ಸಂಸದೆ ಶೋಭಾ ಆತಂಕ ವ್ಯಕ್ತಪಡಿಸಿದರು. ರೈತರ ಹೋರಾಟದಲ್ಲಿ ಖಲಿಸ್ಥಾನ ಭಯೋತ್ಪಾದಕರ ಪಾತ್ರ ಆತಂಕಕಾರಿ. ಕೆನಡಾದಲ್ಲಿ ಸಿಖ್ ಸಮುದಾಯದ ರಾಜಕೀಯ ಪ್ರಭಾವವನ್ನು ಗಮನಿಸಿ ಆ ದೇಶ ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮಾತನಾಡುತ್ತಿದೆ ಎಂದರು.

    ಕೇರಳದಲ್ಲಿ ಎಪಿಎಂಸಿಯೇ ಇಲ್ಲ!: ಕೃಷಿ ನೀತಿ ಕುರಿತು ವಾಮರಂಗಗಳು ಮಾತನಾಡುತ್ತಿವೆ. ಆದರೆ ಅವರ ಅಧಿಕಾರದ ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಕೇಂದ್ರ ಮಸೂದೆ ಅಂಗೀಕಾರಕ್ಕೂ ಮುನ್ನ ಈ ಕುರಿತು ವಿಸ್ತೃತ ಚರ್ಚೆ ನಡೆಸಿತ್ತು. ಇತರ ಪಕ್ಷಗಳ ಮುಖಂಡರು ಹಿಂದೆ ಎಪಿಎಂಸಿ ತಿದ್ದುಪಡಿ ಬಗ್ಗೆ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆ ನೀಡಿದ್ದರು. ಆದರೆ ಈಗ ಎಲ್ಲರೂ ಸೇರೊಕೊಂಡು ಕೃಷಿ ನೀತಿ ವಿರೋಧಿಸುತ್ತಿರುವುದು ದುರದೃಷ್ಟಕರ ಎಂದು ಸಂಸದೆ ಹೇಳಿದರು. ಶಾಸಕ ವಿ.ಸುನೀಲ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಪಕ್ಷದ ನಿಕಟಪೂರ್ವ ವಕ್ತಾರ ಹರೀಶ್ ಶೆಣೈ, ನವೀನ್ ನಾಯಕ್, ರವೀಂದ್ರಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಮಂಗಳೂರು-ಶೃಂಗೇರಿ ರೈಲು: ಮಂಗಳೂರು- ಕಾರ್ಕಳ- ಶೃಂಗೇರಿ ಸಂಪರ್ಕದ ರೈಲ್ವೆ ಯೋಜನೆ ರೂಪುಗೊಳ್ಳುತ್ತಿದ್ದು, ಕಡೂರು ಜಂಕ್ಷನ್‌ನಿಂದ ಶೃಂಗೇರಿವರೆಗೆ ಸರ್ವೇ ಕಾರ್ಯ ನಡೆದಿದೆ ಎಂದು ಶೋಭಾ ತಿಳಿಸಿದರು.

    ಗೋ ಹತ್ಯೆ-ಮತಾಂತರ: ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಮೊದಲು ಮುಂದಾದವರು ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ. ಗೋಹತ್ಯೆ ಕಾನೂನು ಅನುಷ್ಠಾನ ರಾಜ್ಯ ಸರ್ಕಾರದಿಂದಲೇ ಆಗಬೇಕು ಹೊರತು ಕೇಂದ್ರದಿಂದಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2008ರಲ್ಲಿ ಜಾರಿಗೆ ತರುವ ಪ್ರಯತ್ನ ನಡೆದಿತ್ತು. ಇದು ಈಗ ಅಂತಿಮ ಹಂತದಲ್ಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts