More

    ಡಿಜಿಟಲ್​ ಯುಗದಿಂದಾಗಿ ಓದಿನ ಆಸಕ್ತಿ ಕುಂದುತ್ತಿದೆ: ಸಚಿವ ಶಿವರಾಜ ತಂಗಡಗಿ

    ಬೆಂಗಳೂರು: ಡಿಜಿಟಲ್​ ಯುಗದಿಂದಾಗಿ ಇಂದಿನ ಮಕ್ಕಳಲ್ಲಿ ಕಡಿಮೆಯಾಗುತ್ತಿರುವ ಓದಿನ ಆಸಕ್ತಿಯನ್ನು ಹೆಚ್ಚಿಸಬೇಕಾಗಿದೆ ಎಂದು ಕನ್ನಡ ಮತ್ತು ಸಂಸತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್​. ತಂಗಡಗಿ ಅಭಿಪ್ರಾಯಪಟ್ಟಿದ್ದಾರೆ.

    ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ನಯನ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಡಿಜಿಟಲ್​ ಸೌಲಭ್ಯಗಳಿಂದ ಓದಿನ ಶೈಲಿಯೂ ಬದಲಾಗಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದಿದರೆ ಮಾತ್ರ ಓದಿನ ರುಚಿ ಹಿಡಿಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗೂ ಪುಸ್ತಕಗಳನ್ನು ತಲುಪಿಸುವ ಪ್ರಯತ್ನವಾಗಬೇಕು. ಪ್ರಸಕ್ತ ವರ್ಷ ಪುಸ್ತಕ ಮುದ್ರಣಕ್ಕೆ ಈ ಬಾರಿ 42 ಲ ರೂ. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ರೂ.12 ಲಕ್ಷದಷ್ಟು ಉಳಿಕೆಯಾಗಿದೆ. ಮುಂದಿನ ವರ್ಷ ಇನ್ನು ಹೆಚ್ಚಿನ ಪುಸ್ತಕ ಮುದ್ರಣ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

    ಜ್ಞಾನಪೀಠ ಪ್ರಶಸ್ತಿ ಪುರಸತ ಹಿರಿಯ ಕವಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಇಂದಿನ ಮಕ್ಕಳಿಗೆ ಓದಿನ ಚಟ ಹತ್ತಿಸಿದರೆ, ನಾಡಿನಾದ್ಯಂತ ಪುಸ್ತಕಗಳು ಹಬ್ಬುತ್ತವೆ. ಜತೆಗೆ ಸರ್ಕಾರಿ ಗ್ರಂಥಾಲಯಗಳ ಮೂಲಕ ಓದುಗರಿಗೆ ಪುಸ್ತಕಗಳು ತಲುಪಬೇಕು ಎಂದು ಅಭಿಪ್ರಾಯಪಟ್ಟರು.

    ಕರ್ನಾಟಕ ಲೇಖಕಿಯರ ಸಂದ ಅಧ್ಯಕ್ಷೆ ಡಾ.ಎಚ್​.ಎಲ್​. ಪುಷ್ಪ ಮಾತನಾಡಿ, ಪುಸ್ತಕ ಪ್ರಕಾಶನ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಆಕರ್ಷಣೀಯವಾಗಿ ಹೊಸ ಹೊಸ ಪುಸ್ತಕಗಳು ಓದುಗರ ಕೈಸೇರುತ್ತಿವೆ. ಆದರೆ ಇಂದು ಓದಿನ ಕ್ರಮ ಬದಲಾಗಿದ್ದು ಇ-ಬುಕ್​ ಹೆಚ್ಚು ಪ್ರಚಲಿತಕ್ಕೆ ಬರುತ್ತಿವೆ ಎಂದರು.

    ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಂಪುಟದ 5 ಸಂಪುಟಗಳು, ಗೌರೀಶ ಕಾಯ್ಕಿಣಿ ಅವರ ಮೂರು ಸಂಪುಟಗಳು, ಕೋ.ಚನ್ನಬಸಪ್ಪ ಅವರ ಸಮಗ್ರ ಸಾಹಿತ್ಯದ ಆರು ಸಂಪುಟಗಳು, ವಿ.ಜಿ ಭಟ್ಟ ಅವರ ಸಮಗ್ರ ಸಾಹಿತ್ಯದ ಮೂರು ಸಂಪುಟಗಳು ಮತ್ತು ಅ. ನ.ಕೃಷ್ಣರಾಯರ ಐದು ಸಂಪುಟಗಳು ಲೋಕಾರ್ಪಣೆಗೊಂಡವು. ಈ ಸಂದರ್ಭದಲ್ಲಿ ಬೆಂಗಳೂರು ಕಂದಾಯ ವಿಭಾಗದ ವಿವಿಧ ಶಾಲಾ ಮತ್ತು ಕಾಲೇಜುಗಳಿಗೆ ಪುಸ್ತಕ ಪ್ರಾಧಿಕಾರದ ವತಿಯಿಂದ ರೂ.25,000 ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.

    ಗ್ರಂಥಾಲಯಗಳು ಇದ್ದ ಜಾಗದಲ್ಲಿ ಇಂದು ಜಿಮ್​ಗಳು ತಲೆ ಎತ್ತುತ್ತಿವೆ. ಈ ಬೆಳವಣಿಗೆ ಆತಂಕಕಾರಿಯಾಗಿದ್ದು, ಓದು ಕೂಡ ಒಂದು ದೊಡ್ಡ ಯೋಗ ಎಂಬುದು ಇಂದಿನ ತಲೆಮಾರಿಗೆ ಅರ್ಥವಾಗುತ್ತಿಲ್ಲ. ನಾವು ಒಂದೇ ಜೀವನವನ್ನು ನಡೆಸುತ್ತಿದ್ದಾಗಲೇ, ಪರ್ಯಾಯವಾಗಿ ಹಲವು ಜೀವನಗಳನ್ನು ನಡೆಸಬಲ್ಲ ಯೋಗ ಪುಸ್ತಕಗಳ ಓದು. ಒಂದು ಪುಸ್ತಕ ತೆರೆದರೆ ಅದು ಅನೇಕ ಬದುಕುಗಳನ್ನು ಅನುಭವಿಸುವಂತೆ ಮಾಡುತ್ತದೆ. ಈ ಕ್ರಮವನ್ನು ನಾವಿಂದು ಸಾಧಿಸಬೇಕಾಗಿದೆ.
    – ಜಯಂತ ಕಾಯ್ಕಿಣಿ, ಹಿರಿಯ ಸಾಹಿತಿ

    ಪುಸ್ತಕ ಬರೆದರೂ ಬರೆವೆ!

    ಹಿಂದೆ ಎರಡು ಬಾರಿ ಮಂತ್ರಿಯಾಗಿದ್ದಾಗ ಅಭಿವೃದ್ಧಿ ಇಲಾಖೆಗಳನ್ನು ನಿಭಾಯಿಸಿದ್ದೆ. ಈ ಬಾರಿ ಮುಖ್ಯಮಂತ್ರಿಗಳು ಕರೆದು ಕನ್ನಡ ಮತ್ತು ಸಂಸತಿ ಇಲಾಖೆ ಖಾತೆ ನಿರ್ವಹಿಸಿ ಎಂದಾಗ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಇದೀಗ ಇಲಾಖೆಯ ಜವಾಬ್ದಾರಿ ಖುಷಿ ತಂದಿದ್ದು ಓದಿನ ರುಚಿ ಹತ್ತಿದೆ. ಮುಂದಿನ ದಿನಗಳಲ್ಲಿ ನಾನೇ ಪುಸ್ತಕ ಬರೆದರೂ ಬರೆವೆ ಎನ್ನುವಷ್ಟು ಆತ್ಮವಿಶ್ವಾಸ ಬಂದಿದೆ ಎಂದು ಸಚಿವ ಶಿವರಾಜ ಎಸ್​ ತಂಗಡಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts