More

    ಮಾನವೀಯತೆಯ ಮಹಾಬೆಳಗು ಶಿವಕುಮಾರ ಮಹಾಸ್ವಾಮೀಜಿ

    ಮಹಾದಾಸೋಹದ ಮಣಿಹ ಹೊತ್ತು ಧರೆಗೆ ಇಳಿದು ಬಂದ ಅಪೂರ್ವ ಚೇತನ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಅವರ ದೀರ್ಘ ಬದುಕಿನ ರಹಸ್ಯವೇ ಅವರು ಪ್ರತಿಪಾದಿಸಿದ ಮತ್ತು ಪಾಲಿಸಿಕೊಂಡು ಬಂದ ಸತ್ಯಶುದ್ಧ ಕಾಯಕ ಪ್ರಜ್ಞೆ ಹಾಗೂ ನಿಷ್ಕಾಮ ಭಾವದಿಂದ ನಿರ್ವಹಿಸಿದ ತ್ರಿವಿಧ ದಾಸೋಹ ಸೇವೆ. ಮಾನವೀಯ ಸೇವೆ, ಆಧ್ಯಾತ್ಮಿಕ ಲೋಕದಲ್ಲಿ ಸದಾ ಪ್ರೇರಣಾದಾಯಿಯಾಗಿರುವ ಸ್ವಾಮೀಜಿ ಅವರಿಗೆ ಜಯಂತಿ ನಿಮಿತ್ತ ನುಡಿನಮನ.

    ಇಂದು ಗುರುವಂದನಾ ಮಹೋತ್ಸವ

    ತುಮಕೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಸಿದ್ಧಗಂಗೆಯ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಏಪ್ರಿಲ್ 1ರಂದು ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ನೇತೃತ್ವ ವಹಿಸಲಿದ್ದು, ಹರಿದ್ವಾರದ ಪತಂಜಲಿ ಯೋಗಪೀಠದ ಬಾಬಾ ರಾಮದೇವ್ ಜೀ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಕುಮಾರ ಶ್ರೀಗಳ ಗದ್ದುಗೆಗೆ ಬೆಳಗಿನ ಜಾವದಿಂದಲೇ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳು ರುದ್ರಾಭಿಷೇಕ ಸೇರಿ ಧಾರ್ವಿುಕ ಪೂಜಾ ಕೈಂಕರ್ಯ ಹಾಗೂ ಬೆಳಗ್ಗೆ 8ಕ್ಕೆ ಶ್ರೀಗಳ ಕಂಚಿನ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿರಿಸಿ ಉತ್ಸವ ನಡೆಯಲಿದೆ. ಶ್ರೀಮಠದಲ್ಲಿ ಬೆಳಗಿನಿಂದ ರಾತ್ರಿ 11ರವರೆಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.

    | ಡಾ.ಸಿ.ಸೋಮಶೇಖರ, (ಲೇಖಕರು ವಿಶ್ರಾಂತ ಐಎಎಸ್ ಅಧಿಕಾರಿ)

    ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಕ್ಷೇತ್ರಕ್ಕೆ ಸುದೀರ್ಘ ಇತಿಹಾಸವಿದೆ. ಸುಮಾರು ಆರು ಶತಮಾನಗಳ ಹಿಂದೆ ಶೂನ್ಯ ಸಿಂಹಾಸನದ ಪ್ರಭುಗಳಾದ ಶ್ರೀ ಗೋಸಲ ಸಿದ್ಧೇಶ್ವರರು ಸಂಸ್ಥಾಪಿಸಿದ ಸಿದ್ಧಗಂಗಾ ಕ್ಷೇತ್ರವು ಮಹಾನ್ ಶಿವಯೋಗಿಗಳಾದ ತೋಂಟದ ಸಿದ್ಧಲಿಂಗೇಶ್ವರರು ಮತ್ತು ಇನ್ನು ಅನೇಕ ಮಹಾನ್ ತಪಸ್ವಿಗಳು ಸಾಧನೆ ಮಾಡಿದ ತಪೋಭೂಮಿಯೆಂದೇ ಪ್ರಖ್ಯಾತವಾಗಿದೆ. ಶ್ರೀಕ್ಷೇತ್ರಕ್ಕೆ ವಿಶ್ವದ ಧಾರ್ವಿುಕ ಮತ್ತು ಮಾನವೀಯ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟ ಹಿರಿಮೆ ಪೂಜ್ಯರಾದ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ. 1908ರ ಏಪ್ರಿಲ್ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶರಣ ದಂಪತಿ ಪಟೇಲ್ ಹೊನ್ನೇಗೌಡರು ಮತ್ತು ಗಂಗಮ್ಮನವರ ಪುತ್ರರಾಗಿ ಜನಿಸಿದ ಪೂಜ್ಯ ಶ್ರೀಗಳ ಪೂರ್ವಾಶ್ರಮದ ಹೆಸರು ಶಿವಣ್ಣ.

    ಸಿದ್ಧಗಂಗಾ ಕ್ಷೇತ್ರದ ಮಠಾಧಿಪತಿಗಳಾಗಿದ್ದ ಶ್ರೀ ಮರುಳಾರಾಧ್ಯರು ಅಕಾಲಿಕವಾಗಿ ಲಿಂಗೈಕ್ಯರಾದ ಮೇಲೆ ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶಿವಕುಮಾರ ಮಹಾಸ್ವಾಮಿಗಳ ಆಗಮನದಿಂದ ಸಿದ್ಧಗಂಗಾ ಮಠವು ದಿವ್ಯಾನುಭೂತಿಯ ಸ್ಪರ್ಶವನ್ನು ಕಂಡುಕೊಂಡಿತು. ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಾಗ ಶ್ರೀಮಠದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಆಗ ಮಠಕ್ಕೆ ಇದ್ದದ್ದು ಹದಿನೈದು-ಇಪ್ಪತ್ತು ಎಕರೆ ಜಮೀನು ಮಾತ್ರ. ಆ ಸಂದರ್ಭದಲ್ಲಿ ಶ್ರೀಕ್ಷೇತ್ರದಲ್ಲಿ ನಡೆಯುತ್ತಿದ್ದ ಅನ್ನದಾಸೋಹ ಮತ್ತು ಅಕ್ಷರದಾಸೋಹಕ್ಕಾಗಿ ಶ್ರೀಗಳವರು ಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ದವಸಧಾನ್ಯಗಳನ್ನು ಭಕ್ತರಿಂದ ಸಂಗ್ರಹಿಸಿ ತಂದು ಶ್ರೀಮಠದಲ್ಲಿನ ದಾಸೋಹವನ್ನು ನಿರಂತರವಾಗಿ ನಡೆಸುತ್ತಿದ್ದುದು ಒಂದು ಇತಿಹಾಸವೇ ಸರಿ. ಸಿದ್ಧಗಂಗಾ ಕ್ಷೇತ್ರವನ್ನು ಸಮಕಾಲೀನ ಸಾಮಾಜಿಕ ಪ್ರಜ್ಞೆಯ ಸಮರ್ಥ ಮಾನವೀಯ ಧರ್ಮಪೀಠವನ್ನಾಗಿ ಶರಣರ ಕ್ರಾಂತಿಕಾರಕ ವಿಚಾರಧಾರೆ ಹಿನ್ನೆಲೆಯಲ್ಲಿ ರೂಪಿಸಿದವರು ಶಿವಕುಮಾರ ಮಹಾಸ್ವಾಮಿಗಳು.

    ಮಹಾನ್ ಶಿಕ್ಷಣ ಪ್ರೇಮಿ: ಶಿಕ್ಷಣದಿಂದಲೇ ವ್ಯಕ್ತಿಯ ವ್ಯಕ್ತಿತ್ವದ ವಿಕಾಸ ಮತ್ತು ಸ್ವಾವಲಂಬನೆಗೆ ಅದೊಂದೇ ಸಾಧನ ಎಂದು ನಂಬಿದ್ದ ಶ್ರೀಗಳು ತಮ್ಮ ಬದುಕಿನಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. 1917ರಲ್ಲಿ ಪೂಜ್ಯ ಉದ್ಧಾನ ಶಿವಯೋಗಿಗಳಿಂದ ಸಂಸ್ಥಾಪಿಸಲ್ಪಟ್ಟಿದ್ದ ಸಂಸ್ಕೃತ ಪಾಠಶಾಲೆಯನ್ನು ಸಂಸ್ಕೃತ ಕಾಲೇಜಾಗಿ ಪರಿವರ್ತಿಸುವುದರ ಜೊತೆಗೆ ತುಮಕೂರು ಜಿಲ್ಲಾದ್ಯಂತ ಪ್ರಾಥಮಿಕ ಶಾಲೆಗಳು, ಮಾಧ್ಯಮಿಕ ಶಾಲೆಗಳು, ಪ್ರಥಮದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು, ಸಂಗೀತ ಪಾಠಶಾಲೆಗಳು ಮತ್ತು ಅಂಧಮಕ್ಕಳ ಶಾಲೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮಾಂತರ ಮಕ್ಕಳ ಹೃದಯಗಳಲ್ಲಿ ಅಕ್ಷರದ ಬೀಜವನ್ನು ಬಿತ್ತಿದರು.

    ಕಾಯಕ ಮತ್ತು ದಾಸೋಹ: ಶಿವಕುಮಾರ ಮಹಾಸ್ವಾಮಿಗಳವರು ನಡೆಸಿದ ಕಾಯಕದಲ್ಲಿ ಸ್ವಾರ್ಥದ ಲೇಪವಿಲ್ಲ. ಅವರು ನಡೆಸಿದ ಕಾಯಕಯೋಗದಿಂದ ಬಂದ ಪ್ರತಿಫಲವನ್ನು ಗುರು ಲಿಂಗ ಜಂಗಮಕ್ಕೆ ಸಮರ್ಪಿಸಿದ್ದಾರೆ. ಅವರ ದೃಷ್ಟಿಯಲ್ಲಿ ಗುರು ಲಿಂಗ ಜಂಗಮ ಎಂದರೆ ಸಮಾಜ. ತಮಗೆ ಬಂದ ಎಲ್ಲ ಫಲವನ್ನು ಅದು ಭಗವಂತನ ಕೃಪೆಯಿಂದ ಬಂದದ್ದೆಂದು ಭಾವಿಸಿ, ಸಮಾಜದ ಕಲ್ಯಾಣಕ್ಕಾಗಿ ಸಮರ್ಪಿಸಿದರು.

    ಶ್ರೀಗಳಿಗೆ ಕಾಯಕ ಮತ್ತು ದಾಸೋಹ ತಮ್ಮ ಸೇವಾಪಥದ ಎರಡು ಆದರ್ಶ ಆಧ್ಯಾತ್ಮಿಕ ಮಾರ್ಗಗಳಾಗಿದ್ದವು. ಸ್ವತಃ ತಾವೇ ದೈಹಿಕ ಪರಿಶ್ರಮದಿಂದ ಮಠದ ನೆಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಠಾಧಿಪತಿಗಳಾದವರು ಸ್ವತಃ ಶ್ರಮದ ಸಂಸ್ಕೃತಿಯನ್ನು ಸಾಕಾರಗೊಳಿಸಿಕೊಳ್ಳಬೇಕು ಎಂಬ ದಿವ್ಯವಾದ ಕಾಯಕ ಸೂತ್ರವನ್ನು ನೀಡಿದರು. ಅವರ ಅಧ್ಯಾತ್ಮ ಬದುಕಿನ ಸಾಧನೆಯ ಮೂಲಮಂತ್ರವೇ ತ್ರಿವಿಧ ದಾಸೋಹವಾಗಿತ್ತು. ಅನ್ನದಾಸೋಹ, ಜ್ಞಾನದಾಸೋಹ ಮತ್ತು ಅನಾಥರಿಗೆ, ನಿರ್ಲಕ್ಷಿತರಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ವಿಶಿಷ್ಟ ಅಭಿನಾಮಕ್ಕೆ ಅವರು ಪಾತ್ರರಾದರು.

    ದಯೆಯ ಸಾಕಾರಮೂರ್ತಿ: ಶಿವಕುಮಾರ ಮಹಾಸ್ವಾಮಿಗಳು ಶಿಸ್ತು, ಸಂಯಮಕ್ಕೆ ಹೆಸರಾಗಿದ್ದವರು. ಇದು ಅವರ ದಿನಚರಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಬೆಳಗ್ಗೆ ಮೂರು ಗಂಟೆಗೆ ಆರಂಭವಾಗುತ್ತಿದ್ದ ಅವರ ದಿನನಿತ್ಯದ ಚಟುವಟಿಕೆಗಳು ರಾತ್ರಿ ಹತ್ತು ಗಂಟೆಯವರೆಗೂ ಮುಂದುವರಿಯುತ್ತಿದ್ದುದು ಅವರ ಕ್ರಿಯಾಶೀಲತೆಯ ಸಂಕೇತವಾಗಿತ್ತು. ಅವರು ಅನುಸರಿಸುತ್ತಿದ್ದ ಶಿವಯೋಗವೇ ಅವರ ಆರೋಗ್ಯದ ರಹಸ್ಯ ವಾಗಿತ್ತು. ನಿಷ್ಠೆಯಿಂದ ಮಾಡುತ್ತಿದ್ದ ಇಷ್ಟಲಿಂಗ ಪೂಜೆ, ಅಲ್ಪಪ್ರಸಾದ ಸೇವನೆ, ಶ್ರೀಮಠದ ಮಕ್ಕಳೊಂದಿಗಿನ ಅವರ ಪ್ರೀತಿಯ ಒಡನಾಟ, ಮಠಕ್ಕೆ ಬರುತ್ತಿದ್ದ ಅಸಂಖ್ಯಾತ ಭಕ್ತರೊಂದಿಗೆ ಪ್ರೀತಿಯ ಸ್ಪಂದನ, ಈ ಮಧ್ಯೆ ಧರ್ಮಪ್ರಚಾರಕ್ಕಾಗಿ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ನೀಡುತ್ತಿದ್ದ ಧಾರ್ವಿುಕ ಸಂದೇಶಗಳು, ಅವರ ಇಳಿವಯಸ್ಸಿನಲ್ಲಿಯೂ ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿಟ್ಟಿತ್ತು.

    ಬಸವಾದಿ ಶರಣರ ವಿಚಾರಧಾರೆಯ ಪ್ರಯೋಗಶಾಲೆ: ಶ್ರೀಗಳಿಗೆ ಬಸವಾದಿ ಶರಣರ ತತ್ವಾದರ್ಶಗಳೇ ಉಸಿರಾಗಿತ್ತು. ಶರಣರು ಹನ್ನೆರಡನೆಯ ಶತಮಾನದಲ್ಲಿ ಪ್ರತಿಪಾದಿಸಿದಂತಹ ಕಾಯಕ, ದಾಸೋಹ, ವೈಚಾರಿಕ ಚಿಂತನೆ, ಸ್ತ್ರೀಸಮಾನತೆ, ಜಾತ್ಯಾತೀತ ಭಾವ ಮುಂತಾದ ವಿಚಾರಧಾರೆಗಳ ಮಹಾಪ್ರಯೋಗ ಶಾಲೆಯನ್ನಾಗಿ ಸಿದ್ಧಗಂಗಾ ಕ್ಷೇತ್ರವನ್ನು ರೂಪಿಸಿದರು.

    ಹಸಿದ ಹೊಟ್ಟೆಗೆ ಅನ್ನ, ಅಂಧಕಾರದಲ್ಲಿದ್ದವರಿಗೆ ಅಕ್ಷರದ ಜ್ಞಾನ, ಅನಾಥರಿಗೆ ಆಶ್ರಯ ನೀಡುವ ಮೂಲಕ ಸರ್ವವನ್ನೂ ಸಮರ್ಪಣಾ ಭಾವದಿಂದ ಸಮಾಜಕ್ಕೆ ಧಾರೆಯೆರೆದವರು ಶಿವಕುಮಾರ ಮಹಾಸ್ವಾಮಿಗಳು. ಅವರು ನಿಜವಾದ ಅರ್ಥದಲ್ಲಿ ಲಿಂಗದಲ್ಲಿ ಮುಕ್ತರಾಗಿದ್ದಾರೆ, ಲಿಂಗೈಕ್ಯರಾಗಿದ್ದಾರೆ. ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಜ್ಞಾನಯೋಗ, ಕಾಯಕಯೋಗ, ದಾಸೋಹ ಯೋಗ, ಶಿವಯೋಗದ ಸ್ವರೂಪಿಗಳಾಗಿ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

    | ಡಾ.ಎಸ್.ಪರಮೇಶ್, (ಲೇಖಕರು ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕರು)

    ನಡೆದಾಡುವ ದೇವರು ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳು ತಮ್ಮ ದಿವ್ಯರೂಪವನ್ನು, ಲಿಂಗರೂಪವನ್ನಾಗಿಸಿ ಆರು ವರ್ಷಗಳು ಕಳೆಯುತ್ತ್ತ ಬಂದಿವೆ. ಅವರು ನಮ್ಮನ್ನು ತಮ್ಮ ಶಿವಶರಣ ಪಥದಲ್ಲಿ ಅನ್ನ, ಆಶ್ರಯ, ಅಕ್ಷರದ ತ್ರಿವಿಧ ದಾಸೋಹದ ಮೂಲಕ ಸಾಗಿಸಿದ, ಬೋಧಿಸಿದ ಜತೆಗೆ ಕರೆದೊಯ್ದ ಜೀವನಾಮೃತ ಕ್ಷಣಗಳು ನೆನಪಿನ ಪುಟದಲ್ಲಿ ಅಚ್ಚಳಿಯದೇ ಉಳಿದಿವೆ.

    ಪರಮಪೂಜ್ಯರು ದಶಕಗಳ ಹಿಂದೆ ಉದ್ಧಾನ ಶಿವಯೋಗಿಗಳಿಂದ ತ್ರಿವಿಧ ದಾಸೋಹ ಜ್ಯೋತಿಯನ್ನು ತಮ್ಮ ಕೈಗೆತ್ತಿಕೊಂಡ ಮೇಲೆ ಹಿಂದಿರುಗಲಿಲ್ಲ. ಅವರು ನೀಡಿದ ಪಥ ಈಗ ತ್ರಿವಿಧ ದಾಸೋಹ ಯಜ್ಞದ ಸೇತುವೆಯಾಗಿ, ಈಗ ವೈದ್ಯಕೀಯ ವಿಭಾಗಕ್ಕೂ ವಿಸ್ತರಿಸಿ ಇಡೀ ಮನುಕುಲವೇ ಅನುಸರಿಸುವ ಮಾರ್ಗ ವಾಗಿ ಶಾಶ್ವತವಾಗಿ ಉಳಿದುಕೊಂಡಿದೆ.

    ಪೂಜ್ಯರ ನೆನಪಿ ನಂಗಳವನ್ನು ಹೊಕ್ಕರೆ ನನಗೆ ಮೊದಲು ಸಿಗುವುದೇ ಅವರ ದಾಸೋಹಪ್ರಜ್ಞೆ. ಪಾದಪೂಜೆ ಹೆಸರಿನಲ್ಲಿ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ, ರೈತರನ್ನು ಹರಸಿ ಬಂದು ಮಳೆಬೆಳೆಯಾದ ಕಾಲಕ್ಕೆ ಎತ್ತಿನಗಾಡಿಗಳಲ್ಲಿ ತಂದು ಸಿದ್ಧಗಂಗಾ ಮಠದ ದಾಸೋಹದ ಕಣಜಗಳನ್ನು ತುಂಬುತ್ತಿದ್ದರು. ರೈತರು ಬಂದರೆ ಮನೆಗೆ ಮನೆಮಕ್ಕಳು ಬಂದಂತೆ ಸ್ವೀಕರಿಸುತ್ತಿದ್ದ ಶ್ರೀಗಳು, ಅವರನ್ನು ಕುಳ್ಳೀರಿಸಿ ದಾಸೋಹ ಬಡಿಸಿ ಅವರೂರಿನ ಎಲ್ಲ ಸಂಕಟಗಳನ್ನು ಕೇಳುತ್ತಿದ್ದರು. ಪೂಜ್ಯರು ತಮ್ಮ ಪಾದವನ್ನರಸಿ ಬರುತ್ತಿದ್ದ ಲಕ್ಷಾಂತರ ಭಕ್ತರ ಮುಖಭಾವವನ್ನೇ ಗಮನಿಸಿ ಅವರ ಕಷ್ಟಗಳಿಗೆ ಪರಿಹಾರ ಹೇಳುತ್ತಿದ್ದರು.

    ಕಾಯಕದ ವಿಚಾರದಲ್ಲಿ ಅವರು ಕಠೋರ ತಪಸ್ವಿಯಾಗಿದ್ದರು. ಒಂದು ಕಾಯಕದಿಂದ ಮತ್ತೊಂದು ಕಾಯಕವನ್ನು ಮಾಡುವುದೇ ಕಾಯಕದ ನಿಜವಾದ ವಿಶ್ರಾಂತಿ ಎನ್ನುತ್ತಿದ್ದರು. ಪೂಜಾನಿಷ್ಠೆ, ಕಾಯಕನಿಷ್ಠೆ ಇಡೀ ದಿನಚರಿಯ ಭಾಗವಾಗಿತ್ತು. ಪ್ರತಿನಿತ್ಯ ಬೆಳಗ್ಗೆ ಮೂರು ಗಂಟೆಗೆ ಆರಂಭವಾಗುತ್ತಿದ್ದ ಶ್ರೀಗಳ ದಿನಚರಿ ಪೂಜೆ, ಪ್ರಸಾದ, ಅಧ್ಯಯನ, ಮಠದ ಕಾರ್ಯಗಳು, ಭಕ್ತರ ಸಂದರ್ಶನ, ತೋಟಗಳಲ್ಲಿ ರೈತನಾಗಿ, ಊರಿನಲ್ಲಿ ಹಿರಿಯನಾಗಿ, ಭಕ್ತರ ನಡುವೆ ಗುರುವಾಗಿ ಎಲ್ಲ ಪ್ರಾಪಂಚಿಕ ಕಾರ್ಯಗಳನ್ನು ಮುಗಿಸಿ ಶಿವಪೂಜೆಯೊಂದಿಗೆ ಅಂತ್ಯವಾಗುತ್ತಿತ್ತು. ನಿರಂತರ ಓಡಾಟವಿದ್ದರೂ, ಅಗಣಿತ ಕೆಲಸಗಳೇ ಇದ್ದರೂ ಶಿವಪೂಜೆ, ನಿಯಮಿತ ಆಹಾರ ಸೇವನೆಯನ್ನೇ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದ ಅವರ ಆರೋಗ್ಯ ಜೀವನವನ್ನು ಒಂದು ಆರೋಗ್ಯ ಶಾಸ್ತ್ರವಾಗಿ ಇಂದಿನ ಹಾಗೂ ಮುಂದಿನ ಜನಾಂಗ ಅಭ್ಯಸಿಸಬೇಕಿದೆ.

    ಸಿದ್ಧಗಂಗಾ ಮೆಡಿಕಲ್ ಕಾಲೇಜು ಆರಂಭಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎನ್ನುವ ಅವರ ಅಕಾಂಕ್ಷೆಯನ್ನು ಶ್ರೀ ಸಿದ್ಧಲಿಂಗ ಶ್ರೀಗಳು ನಿಜವಾಗಿಸಿ 400 ಹಾಸಿಗೆಯಳ್ಳ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯನ್ನೇ ತೆರೆದು ಉಚಿತ ಚಿಕಿತ್ಸೆಗಾಗಿ ಮೀಸಲಿರಿಸಿದ್ದಾರೆ. ವಾರ್ಷಿಕ 150 ಯುವ ವೈದ್ಯರನ್ನು ವೈದ್ಯಕಾಯಕಕ್ಕೆ ಅಣಿಮಾಡಿ ಕಳುಹಿಸಿಕೊಡಲಾಗುತ್ತಿದೆ. ಮಕ್ಕಳ ವಿಚಾರದಲ್ಲಿ ಅವರು ತೋರುತ್ತಿದ್ದ ಕಾಳಜಿ, ಪ್ರೀತಿ ಅನನ್ಯ. ಅವರಿಂದ ನಾಲ್ಕು ಅಕ್ಷರ ಕಲಿತ ಎಲ್ಲ ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ದಾಸೋಹ ಮೂರ್ತಿಗಳಾಗಿ ಹೊರಹೊಮ್ಮಿವೆ. ದಾಸೋಹ, ಮಕ್ಕಳು, ಮಠ, ಶಿವಧ್ಯಾನ ಪೂಜ್ಯರ ಚತುರ್ವಿದದ ಪಥ.

    ಸಿದ್ಧಗಂಗೆಯ ಪುಣ್ಯದ ನೆಲವನ್ನು ತಮ್ಮ ಧಾರ್ವಿುಕ ಕಾರ್ಯಗಳಿಂದ ದಾಸೋಹದ ಪುಣ್ಯ ನೆಲವಾಗಿಸಿದ ಅವರ ದಿವ್ಯಜ್ಯೋತಿ ಇಂದು ಅಜರಾಮರವಾಗಿ ತಲೆ-ತಲೆಮಾರಿಗೆ ದಾಟಿಸುವ ದಾರಿದೀವಿಗೆಯಾಗಿ ಪರಂಜ್ಯೋತಿಯಾಗಿ ನಿರಂತರ ಪ್ರಜ್ವಲಿಸುತ್ತಿದೆ. ಶ್ರೀ ಶಿವಕುಮಾರ ಶ್ರೀಗಳ ದಾಸೋಹ ದೀಪವನ್ನು ಹಿಡಿದು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ಸಾಗುತ್ತಿದ್ದಾರೆ. ಅವರೊಂದಿಗೆ ಶಿವಸಿದ್ಧೇಶ್ವರ ಪೂಜ್ಯರು, ಅವರ ಹಿಂದೆ ನಮ್ಮಂತಹ ಕೋಟ್ಯಂತರ ಭಕ್ತವೃಂದ ಸಾಗುತ್ತಿದೆ.

    ಬೆಳಕನ್ನು ನೋಡಬಹುದು, ಅದರ ಬೆಳಕಿನಲ್ಲಿ ನಾವು ಬೆಳಗಬಹುದೇ ಹೊರತು ಜ್ಯೋತಿಯನ್ನು ಹೇಗೆ ರ್ಸ³ಸಲಾಗುವುದಿಲ್ಲವೋ ಹಾಗೆ ಅವರಾಗಿ ಬದುಕಲಾಗದಿದ್ದರೂ ಅವರ ಬೆಳಕಿನಲ್ಲಿ ನಾವು ಬೆಳಗಬೇಕು. ನೂರಾರು ಜನರಿಗೆ ಸೂರಾಗಬೇಕು, ದಾಸೋಹದ ಮೂಲಕ ನಿರಂತರವಾಗಿ ಅವರ ದಾರಿಯಲ್ಲಿ ಸಾಗಬೇಕು.

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಡೆಬ್ಯೂ ನಿರ್ದೇಶಕರ ಜತೆ ಕೆಲಸ ಮಾಡೋದಿಲ್ಲ! ನಟ ವಿಜಯ ದೇವರಕೊಂಡ ಹೇಳಿಕೆಯ ಹಿಂದಿದೆ ಈ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts