More

    ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿ

    ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿಮಹಾಶಿವನ ಮಂಗಳಕರ ಶಿವರಾತ್ರಿಯನ್ನು ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತದೆ. ವಿಶೇಷ ಪೂಜೆಗಳ ಸಹಿತ ಶಿವನಾಮಸ್ಮರಣೆ, ಭಜನೆ, ರಥೋತ್ಸವಗಳ ಮೂಲಕ ಮಹಾಶಿವರಾತ್ರಿ ನೆರವೇರುತ್ತದೆ. ನಾಲ್ಕು ಜಾವಗಳಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ, ಅರ್ಚನೆಯ ಬಳಿಕ ನಡೆಯುವ ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈ ವರ್ಷದ ಶಿವರಾತ್ರಿ ಆಚರಣೆ ಸಾಂಗವಾಗಿ ನೆರವೇರಿತು. ನಾಡಿನ ವಿವಿಧ ಕಡೆಗಳಿಂದ ಬಹಳಷ್ಟು ಮಂದಿ ಪಾದಯಾತ್ರೆಯಲ್ಲಿ ಬಂದು ಶಿವ ಪಂಚಾಕ್ಷರೀ ಪಠಣದೊಂದಿಗೆ ಜಾಗರಣೆ ಮಾಡಿ ಶ್ರೀಸ್ವಾಮಿಯ ದರ್ಶನ ಮಾಡಿದ್ದಾರೆ. ಏಳೆಂಟು ದಿನಗಳ ಕಾಲ ಪಾದಯಾತ್ರೆ ಮಾಡುವಾಗ ಕೈ-ಕಾಲು ನೋವು, ಸುಸ್ತು ಲೆಕ್ಕಿಸದೆ ಶ್ರೀಕ್ಷೇತ್ರವನ್ನು ತಲುಪಬೇಕು, ಸ್ವಾಮಿಯನ್ನು ಕಾಣಬೇಕೆಂಬ ಭಕ್ತಿ, ಏಕಾಗ್ರತೆ, ಗುರಿಯೊಂದಿಗೆ ಉತ್ಸಾಹಭರಿತರಾಗಿ ಗಾಳಿಯೇ ತಳ್ಳಿಕೊಂಡು ಬಂದ ರೀತಿಯಲ್ಲಿ ಭಕ್ತರು ಆಗಮಿಸಿದ್ದಾರೆ.

    ಈ ದೇಹವೆಂಬುದು ಒಂದು ವಾಹನದಂತೆ. ವಾಹನ ಆರಂಭ ಆಗಬೇಕಾದರೆ ಉತ್ತಮ ಇಂಧನ ಬೇಕು. ಹಾಗೆಯೇ ದೇಹಕ್ಕೂ ಚೈತನ್ಯ ಅಥವಾ ಜೀವ ಬೇಕು. ಸರಿಯಾದ ಸಮಯಕ್ಕೆ ಊಟ, ನಿದ್ರೆ, ಕೆಲಸ ಮಾಡುತ್ತ ಆರೋಗ್ಯ ಕಾಪಾಡಿಕೊಳ್ಳಬೇಕು. ಊಟ, ನಿದ್ದೆ ಸರಿಯಾಗಿ ಮಾಡದಿದ್ದರೆ ಸುಸ್ತು ಅನ್ನಿಸಬಹುದು, ಸಂಕಟ ಆಗಬಹುದು. ಆಗ ಅನಾರೋಗ್ಯ ಕಾಡಬಹುದು. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರುತ್ತದೆ. ಜೀವವಿದ್ದರೆ ಶಿವ. ಇಲ್ಲದಿದ್ದರೆ ಶವ ಎನ್ನಬಹುದು. ಅದಕ್ಕಾಗಿ ಚೈತನ್ಯದಿಂದ ಇರುವುದು ಮುಖ್ಯ. ಡೀಸೆಲ್ ಗಾಡಿಗೆ ಪೆಟ್ರೋಲ್ ಹಾಕಿದರೆ ಅದು ಚಲಿಸದು. ಯಾಕೆಂದರೆ ಅದನ್ನು ಡೀಸೆಲ್​ನಿಂದ ಮಾತ್ರ ಚಲಿಸುವಂತೆ ತಯಾರಿಸಲಾಗಿದೆ. ಕಾರು, ಬೈಕು, ಬಸ್ ಏನೇ ವಾಹನ ಅಥವಾ ವಸ್ತು ಕೊಂಡರೂ ಅದನ್ನು ತಯಾರಿಸಿದ ಕಂಪನಿಯವರು ಅದಕ್ಕೊಂದು ಮ್ಯಾನುವಲ್ (ಕೈಪಿಡಿ) ಕೊಡುತ್ತಾರೆ. ಅಂದರೆ ಅವರು ತಯಾರಿಸಿದ ವಾಹನವನ್ನು ಯಾವ ರೀತಿ ಬಳಸಬೇಕೆಂಬುದಕ್ಕೆ ಅದರಲ್ಲಿ ವಿವರಣೆ ನೀಡಿರುತ್ತಾರೆ. ವಾಹನ ಬಿಡಿಭಾಗಗಳ ವಿವರ, ಅದರ ಉಪಯೋಗ, ಬಳಕೆ ಎಲ್ಲವನ್ನು ಹೇಳುವ ಮೂಲಕ ಹೇಗೆ ಬಳಸಬಾರದು ಎಂಬುದನ್ನೂ ತಿಳಿಸುವುದು ಅವರ ಮುಖ್ಯ ಉದ್ದೇಶ.

    ಇದೇ ರೀತಿ ಭಗವಂತನೂ ಮಾನವರಿಗೆ ಮ್ಯಾನುವಲ್ ನೀಡಿ ಕಳುಹಿಸಿದ್ದಾನೆ. ಈ ಭೂಮಿಯಲ್ಲಿ ಪುರುಷನೋ, ಸ್ತ್ರೀಯೋ ಆಗಿ ಹುಟ್ಟಿ, ಹೇಗೆ ಬದುಕನ್ನು ನಡೆಸಬೇಕೆಂಬ ಮಾರ್ಗಸೂಚಿಯನ್ನು ನಿರ್ಣಯಿಸಿ ಕಳಿಸಿದ್ದಾನೆ. ನಾವೂ ಸನಾತನ ಧರ್ಮ, ಆಚರಣೆ, ಪರಂಪರೆ ಮೂಲಕ, ಹಿರಿಯರಿಂದ ಅದನ್ನು ತಿಳಿದುಕೊಳ್ಳುತ್ತೇವೆ. ಆದರೆ ಅನೇಕ ಬಾರಿ ಅವೆಲ್ಲವನ್ನು ಲೆಕ್ಕಿಸದೆ ಇಷ್ಟಾನುಸಾರ ಬದುಕಿಬಿಡುವುದುಂಟು. ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ, ನಿದ್ರೆ, ಮದ್ಯಪಾನ, ಡ್ರಗ್ಸ್, ಇತ್ಯಾದಿ ದುಶ್ಚಟ ದೇಹಕ್ಕೆ ನಾನಾ ರೀತಿಯಲ್ಲಿ ಹಾನಿ ಉಂಟು ಮಾಡುತ್ತವೆ. ಅಂದಾಜು ವಯಸ್ಸು 40 ವರ್ಷಗಳಾಗುವವರೆಗೆ ದೇಹ ನಾವು ಮಾಡುವುದೆಲ್ಲವನ್ನು ತಡೆದುಕೊಳ್ಳಬಹುದು. ಬಳಿಕ ತೊಂದರೆ ಶುರುವಾಗುತ್ತದೆ. ‘ಈವತ್ತು ಜೀರ್ಣವಾಗಿಲ್ಲ, ಹೊಟ್ಟೆಉರಿ ಇದೆ, ಮಲಮೂತ್ರ ಹೋಗಿಲ್ಲ, ಸಿಕ್ಕಾಪಟ್ಟೆ ಬೆವರುತ್ತದೆ, ಎದೆನೋವು’- ಹೀಗೆ ಒಂದೊಂದು ಅವಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಮಾನವ ಪಂಚೇಂದ್ರಿಯಗಳಿಂದ ರೂಪಿತನಾದವನು. ಈ ಪಂಚ ಜ್ಞಾನೇಂದ್ರಿಯಗಳು ನಮಗೆ ಹೊರಗಿನ ವಸ್ತುಗಳ ಸಾಕ್ಷಾತ್ಕಾರವನ್ನು ಮಾಡಿಸುತ್ತವೆ. ಆದರೆ ಈ ಪಂಚೇಂದ್ರಿಯಗಳು ಮಾನವನ ಹತೋಟಿಯಲ್ಲಿರಬೇಕೇ ಹೊರತು ಅವುಗಳ ಹತೋಟಿಯಲ್ಲಿ ಮಾನವ ಇರಬಾರದು. ಇಂದ್ರಿಯಗಳನ್ನು ಹತೋಟಿಯಲ್ಲಿ ಹೇಗೆ ಇಟ್ಟುಕೊಳ್ಳಬೇಕೆಂಬುದಕ್ಕೆ ಸಾಕ್ಷಾತ್ ಈಶ್ವರ ದೇವರು ಮಾದರಿ. ‘ಅಕಿಂಚನಃ ಸನ್ ಪ್ರಭವಃ ಸ ಸಂಪದಾಮ್ ತ್ರಿಲೋಕನಾಥಃ ಪಿತೃಸದ್ಮಗೋಚರಃ’- ‘ಪ್ರಪಂಚದ ಸಂಪತ್ತಿಗೇ ಒಡೆಯನಾದರೂ ಪರಿಗ್ರಹರಹಿತನಾಗಿದ್ದಾನೆ, ಮೂರು ಲೋಕದ ಒಡೆಯನಾದರೂ ಸ್ಮಶಾನವಾಸಿಯಾಗಿದ್ದಾನೆ’.

    ಮನುಷ್ಯನು ಗುಣಗ್ರಾಹಿಯಾಗಿರಬೇಕು. ಒಳ್ಳೆಯ ವಿಚಾರಗಳನ್ನು ಸ್ವೀಕರಿಸಬೇಕು. ಬದುಕಿನಲ್ಲಿ ಹೆಣ್ಣು, ಹೊನ್ನು, ಮಣ್ಣು ಇತ್ಯಾದಿ ಏನೇನೋ ಆಸೆಗಳು ಬರುತ್ತವೆ. ಪ್ರಪಂಚದಲ್ಲಿ ಈ ಮೂರರ ಕಾರಣಕ್ಕಾಗಿ ಬಹಳಷ್ಟು ಜನ ಆಯುಷ್ಯವನ್ನೇ ವ್ಯರ್ಥ ಮಾಡುತ್ತಾರೆ. ಭೋಗದ ಬದಲು ತ್ಯಾಗ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ. ಒಬ್ಬಾತ ಕತ್ತಲು ಆವರಿಸಿದಾಗ ನದಿ ದಾಟಲು ದೋಣಿ ಹತ್ತಿದ. ಆತನೇ ಹುಟ್ಟು ಹಾಕಿಕೊಂಡು ಮುಂದೆ ಸಾಗುವವನಾಗಿದ್ದ. ರಾತ್ರಿಯಿಡೀ ಹುಟ್ಟು ಹಾಕಿದರೂ ತಲುಪಬೇಕಾದ ದಡ ಸಿಗಲಿಲ್ಲ. ಬೆಳಗ್ಗೆ ಆದಾಗ ಆತ ಎಲ್ಲಿ ದೋಣಿ ಹತ್ತಿದ್ದಾನೋ ಅಲ್ಲೇ ಇದ್ದ. ಯಾಕೆ ಹೀಗೆ ಎಂದು ನೋಡುವಾಗ ದಡಕ್ಕೆ ಕಟ್ಟಿದ್ದ ದೋಣಿಯ ಹಗ್ಗವನ್ನು ಬಿಚ್ಚದೆ, ದೋಣಿ ಹತ್ತಿ ಹುಟ್ಟು ಹಾಕುತ್ತಿದ್ದ ಕಾರಣ ಆತ ಇದ್ದಲ್ಲೇ ಇದ್ದ. ಇದೇ ರೀತಿ ವಿಷಯಾಸಕ್ತಿಯೆಂಬುದು ದೋಣಿಯ ಹಗ್ಗವಿದ್ದ ಹಾಗೆ. ಅದನ್ನು ತೊರೆಯದಿದ್ದರೆ ಇದ್ದಲ್ಲಿಯೇ ಇರುತ್ತೇವೆ. ಬದುಕು ಮುಂದೆ ಸಾಗದು.

    ನಿತ್ಯ ಜೀವನದಲ್ಲಿ ನಮ್ಮ ದೇಹದಲ್ಲಿ ಯಾವೆಲ್ಲ ಅಂಗಗಳು ಎಲ್ಲೆಲ್ಲಿವೆ ಎಂದು ನಾವು ಗಮನವನ್ನು ನೀಡುವುದಿಲ್ಲ. ಪಾದಯಾತ್ರೆ ಮಾಡುವವರಿಗೆ ದೇಹದ ಅಂಗಗಳ ಬಗ್ಗೆ ಹೆಚ್ಚಾಗಿ ಸ್ಪರ್ಶಜ್ಞಾನವಾಗುತ್ತದೆ. 50-60 ಕಿ.ಮೀ. ನಡೆಯುವಾಗ, ಅಭ್ಯಾಸವಿಲ್ಲದ ಕಾರಣ ಕಾಲು ನೋಯುತ್ತದೆ. ಮತ್ತಷ್ಟು ದೂರ ನಡೆದಾಗ ಸೊಂಟ ಹಿಡಿದುಕೊಳ್ಳುತ್ತದೆ. ಹಸಿವು, ಬಾಯಾರಿಕೆಯಾದಾಗ ಹೊಟ್ಟೆಯ ಮೇಲೆ ತನ್ನಷ್ಟಕ್ಕೆ ಕೈಯಾಡುತ್ತದೆ. ಮಲಗಲು ಮೆತ್ತನೆಯ ಹಾಸಿಗೆಯೇ ಬೇಕು, ಉಣ್ಣಲು ಸ್ವಾದಿಷ್ಟ ಆಹಾರವೇ ಆಗಬೇಕು ಎಂಬಿತ್ಯಾದಿ ವಿಷಯಾಸಕ್ತಿಗಳನ್ನು ಬಿಟ್ಟು ದಾರಿಯಲ್ಲಿ, ಸಿಕ್ಕ-ಸಿಕ್ಕಲ್ಲಿ ದಣಿವಾರಿಸಿಕೊಳ್ಳುತ್ತಾರೆ, ನಿದ್ದೆ ಮಾಡುತ್ತಾರೆ. ಕೆಲವು ಪಾದಯಾತ್ರಿಗಳು ಕಠಿಣ ವ್ರತವನ್ನಾಚರಿಸಿಕೊಂಡು ಬರುತ್ತಾರೆ. ದಿನಕ್ಕೆ ಇಂತಿಷ್ಟೇ ಆಹಾರ ಸೇವನೆ ಎಂದು ನಿಶ್ಚಯಿಸಿಕೊಂಡಿರುತ್ತಾರೆ. ಅವರಿಗೆ ಉಚಿತವಾಗಿ ಎಷ್ಟು ಕೊಟ್ಟರೂ, ಏನು ಕೊಟ್ಟರೂ ಬೇಡ. ಯಾಕೆಂದರೆ ಅವರಿಗೆ ವಿಷಯಾಸಕ್ತಿಗಿಂತ ಭಕ್ತಿಯೇ ಮುಖ್ಯವಾಗಿರುತ್ತದೆ.

    ಮನಸ್ಸು ಮತ್ತು ಪಂಚೇಂದ್ರಿಯಗಳು ವಿಷಯಾಸಕ್ತಿ ಹೆಚ್ಚಲು ಕಾರಣಕರ್ತರು. ಕಣ್ಣು ಯಾವುದನ್ನೆಲ್ಲ ನೋಡುತ್ತದೆಯೋ ಅವುಗಳ ಬಗ್ಗೆ ಮನಸ್ಸಿನಲ್ಲಿ ಆಸೆ ಮೂಡುತ್ತದೆ. ಮೂಗಿಗೆ ಮಸಾಲೆ ದೋಸೆಯ ಪರಿಮಳ ಬಂದರೆ ನಾಲಗೆಗೆ ಅದನ್ನು ತಿನ್ನಬೇಕೆಂಬ ಆಸೆಯಾಗುತ್ತದೆ. ಮದ್ಯವ್ಯಸನಿಗಳಿಗಂತೂ ನಾಲಗೆಯ ತುರಿಕೆ ಚಟದ ದಾಸನನ್ನಾಗಿ ಮಾಡುತ್ತದೆ. ಅಂದರೆ ಕೆಲವರು ತಾವು ದೇವರ ಹೆಸರಿನಲ್ಲಿ, ತಾಯಿ-ತಂದೆಯ ಆಣೆಯಾಗಿ, ಮಡದಿ ಮಕ್ಕಳ ಮೇಲೆ ಪ್ರಮಾಣಮಾಡಿ ‘ಬಿಟ್ಟುಬಿಡುತ್ತೇವೆ’ ಎನ್ನುತ್ತಾರೆ. ಅವರ ಸಮಸ್ಯೆಯೆಂದರೆ ಅವರು ಇಷ್ಟು ದೃಢವಾಗಿದ್ದರೂ ಇಂದ್ರಿಯಗಳನ್ನು ಗೆಲ್ಲಲಾಗದೆ ಮತ್ತದೇ ಪಾಪಕೂಪದಲ್ಲೇ ಬಿದ್ದುಬಿಡುತ್ತಾರೆ. ಹೀಗೆ ಪಂಚೇಂದ್ರಿಯಗಳ ಆಸೆ, ಚಪಲಗಳಿಗೆ ಬಲಿಬೀಳುವುದು ಸಾಮಾನ್ಯ. ಯಾಕೆಂದರೆ ‘ಪರ್ವತ ದೊಡ್ಡದು. ಅದಕ್ಕಿಂತ ಸಮುದ್ರ ದೊಡ್ಡದು. ಅದಕ್ಕಿಂತ ಆಕಾಶ ದೊಡ್ಡದು. ಆಕಾಶಕ್ಕಿಂತ ಭಗವಂತ ದೊಡ್ಡವನು. ಅವನಿಗಿಂತ ದೊಡ್ಡದೊಂದಿದ್ದರೆ ಅದೇ ಆಸೆ’ ಎಂದು ಒಬ್ಬ ಕವಿ ಹೇಳಿದ್ದಾನೆ. ಹಾಗಾಗಿ ಆಸೆಯನ್ನು ಗೆದ್ದರೆ ಇಡೀ ಲೋಕವೇ ನಮ್ಮ ದಾಸನಾಗಿರುತ್ತದೆ. ಶ್ರದ್ಧೆ, ಭಕ್ತಿಯಿಂದ ಪಾದಯಾತ್ರೆ ಮಾಡಿದಾಗ ವಿಷಯಾಸಕ್ತಿಗಳು ಕಡಿಮೆಯಾಗಿ, ಭಗವಂತನೆಡೆಗಿನ ಭಕ್ತಿ ಹಾಗೂ ಗುಣಗ್ರಾಹಿ ಶಕ್ತಿ ಹೆಚ್ಚಾಗುವಂತೆ ಸಹಕಾರಿಯಾಗುತ್ತದೆ. ಈ ಕಾರಣದಿಂದ ಧರ್ಮಸ್ಥಳ ತಲುಪಬೇಕೆಂಬ ಗುರಿಯೊಂದಿಗೆ ಬರುವ ಪಾದಯಾತ್ರಿಗಳೆಲ್ಲ ವಿಶೇಷ ಗೌರವಕ್ಕೆ ಪಾತ್ರರಾಗುತ್ತಾರೆ. ಆಮೆಯ ಮೇಲೆ ಚಿಪು್ಪ ಇರುತ್ತದೆ. ಬಹಳ ಗಟ್ಟಿ. ಚಿಪ್ಪಿನ ಒಳಗೆೆ ಅದರ ಎಲ್ಲ ಅಂಗಾಂಗಗಳು ಇವೆ. ಅದು ಬೇಕೆಂದಾಗ ತನ್ನ ಕೈ ಕಾಲುಗಳನ್ನು ಚಿಪ್ಪಿನೊಳಗೆ ಸೆಳೆದುಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲುದು. ಅದು ದೇವರು ನೀಡಿರುವ ವಿಶೇಷ ವರ. ಭಗವದ್ಗೀತೆಯಲ್ಲಿ ಒಂದು ಮಾತಿದೆ.

    ಯದಾ ಸಂಹರತೇ ಚಾಯಂ ಕೂಮೋಂಗಾನೀವ ಸರ್ವಶಃ |

    ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||

    ಆಮೆ ಎಲ್ಲ ಕಡೆಯಿಂದ ತನ್ನ ಅಂಗಗಳನ್ನು ಹೇಗೆ ಒಳಕ್ಕೆ ಸೆಳೆದು ಕೊಳ್ಳುತ್ತದೆಯೋ ಹಾಗೆಯೇ ಯಾವಾಗ ಮನುಷ್ಯನು ವಿಷಯಾಸಕ್ತಿಗಳಿಂದ ಇಂದ್ರಿಯಗಳನ್ನು ಹಿಂದಕ್ಕೆಳೆದುಕೊಳ್ಳುತ್ತಾನೋ ಆಗ ಅವನ ಬುದ್ಧಿ ಸ್ಥಿರವಾಗಿರುತ್ತದೆ. ಅಂತೆಯೇ ನಾವು ಕೂಡ ಕ್ಷೇತ್ರ ಯಾತ್ರೆ ಮಾಡುವುದು, ಪುಣ್ಯ ಪ್ರವಾಸ ಹೋಗುವುದು, ಪೂಜೆ ಮಾಡುವುದು ಭಗವಂತನ ರಕ್ಷೆಯೆಂಬ ಚಿಪ್ಪಿನೊಳಗೆ ಹುದುಗಿ ಅಭಯ ಪಡೆದು, ಕಷ್ಟಗಳನ್ನು ಪರಿಹರಿಸಿಕೊಂಡು ಬುದ್ಧಿಯನ್ನು ಸ್ಥಿರಗೊಳಿಸಿಕೊಳ್ಳಬೇಕು.

    ಪುಣ್ಯಕ್ಷೇತ್ರ ದರ್ಶನ ಮಾಡುವಾಗ ಆಹಾರ, ವಿಹಾರ, ವಿಚಾರಗಳು ಹತೋಟಿಯಲ್ಲಿ ಇದ್ದಾಗ ಗುಣಗ್ರಹಣ ಶಕ್ತಿ ಜಾಸ್ತಿಯಾಗುತ್ತದೆ. ದೋಷಗ್ರಹಣ ಶಕ್ತಿ ಕಮ್ಮಿಯಾಗುತ್ತದೆ. ಬಹುತೇಕ ಪಾದಯಾತ್ರಿಗಳು ಕಾಷಾಯವಸ್ತ್ರವನ್ನು ಧರಿಸಿ ಬಂದಿದ್ದರು. ಈ ಕಾಷಾಯ ಉಡುಗೆ ವೈರಾಗ್ಯದ ಸಂಕೇತ. ಸ್ವಾಮೀಜಿಗಳು ದೀಕ್ಷೆ ತೆಗೆದುಕೊಂಡು ನಿತ್ಯವೂ ಕಾಷಾಯ ಬಟ್ಟೆ ಧರಿಸುತ್ತಾರೆ. ಅಯ್ಯಪ್ಪನ ಭಕ್ತರಾದರೆ ಕಪು್ಪಬಣ್ಣದ ಬಟ್ಟೆ ಧರಿಸುತ್ತಾರೆ. ಯಾವುದೇ ರೀತಿಯಲ್ಲಿಯೂ ಸಂಸಾರದ ಬಂಧನ ಬೇಡ. ಆಚಾರ, ವಿಚಾರ, ವಿಹಾರದಲ್ಲಿ ನಿಯಮ ಪಾಲಿಸುತ್ತೇನೆ ಎಂದು ನಿರ್ಧರಿಸಿ ಅದರಂತೆ ನಡೆದುಕೊಳ್ಳುತ್ತಾರೆ. ಹೀಗೆ ಬಟ್ಟೆಯೆಂಬುದು ಹಸು, ಹೋರಿಗಳಲ್ಲಿರುವ ಮೂಗು ದಾರದಂತೆ. ಎಷ್ಟು ಬಲಿಷ್ಠವಾದ ಹೋರಿಯನ್ನೂ ಮೂಗುದಾರ ಹಾಕಿ ಅಂಕೆಯಲ್ಲಿಟ್ಟುಕೊಳ್ಳಬಹುದು. ದೊಡ್ಡ ದೇಹದ ಆನೆಯನ್ನು ಸಣ್ಣ ಅಂಕುಶದಿಂದ ಮಣಿಸಬಹುದು. ಕಾಷಾಯ ಧರಿಸಿದಾಗ, ‘ನಾನು ವ್ರತದಲ್ಲಿದ್ದೇನೆ. ಸಂಕಲ್ಪದಲ್ಲಿದ್ದೇನೆ’ ಎಂದೆನ್ನುತ್ತ ನಮ್ಮಲ್ಲಿರುವ ವಿಷಯಾಸಕ್ತಿಗಳಿಗೆ ಅಂಕುಶ ಹಾಕಲು ನೆರವಾಗುತ್ತದೆ. ಶ್ರೀಮಂಜುನಾಥ ಸ್ವಾಮಿ ಅಂದರೆ ಶಿವ. ಯಾವುದೇ ಆಡಂಬರ ಬಯಸದಿರುವ, ಮುಗ್ಧ ಭಕ್ತಿಗೊಲಿಯುವ ದೇವರು. ಮೈಗೆ ಭಸ್ಮವನ್ನು ಮೆತ್ತಿಕೊಂಡು, ಚರ್ವಂಬರ ಉಟ್ಟು ಕುತ್ತಿಗೆಯಲ್ಲಿ ಹಾವನ್ನೇ ಆಭರಣದಂತೆ ಧರಿಸಿ ವಿರಕ್ತಿಯಿಂದ ಇರುವ ದೇವರು. ಇನ್ನೂ ಬೇಕು, ಮತ್ತಷ್ಟು ಬೇಕೆಂಬ ಆಸೆ ಮಾಡಿದರೆ, ಅದು ಈಡೇರದಿದ್ದರೆ ನಿರಾಸೆಯಾಗುತ್ತದೆ. ಅದು ದುಃಖಕ್ಕೆ ಕಾರಣ. ಹಾಗಾಗಿ ವಿಷಯಾಸಕ್ತಿಯ ನಿಗ್ರಹಕ್ಕಾಗಿ ದೀಕ್ಷೆ ಪಡೆದು ವ್ರತ-ನಿಯಮ ಪಾಲಿಸುವುದಿದೆಯಲ್ಲ ಅದೊಂದು ಒಳ್ಳೆಯ ಉಪಾಯ.

    ನಮ್ಮೆಲ್ಲ ದೋಷಗಳನ್ನು ತ್ಯಜಿಸಿ ಪರಿವರ್ತಿತರಾಗಿ ಉತ್ತಮ ಜೀವನ ನಡೆಸಬೇಕು. ಕೇವಲ ಬಾಯಿ ಮಾತಿನಲ್ಲಿ ‘ಪರಿವರ್ತನೆಯಾದೆ’ ಎಂದರೆ ಸಾಲದು, ನಡೆ-ನುಡಿಯಲ್ಲಿ ಒಂದೇ ಆಗಿರಬೇಕು. ಕಾಶಿಗೆ ಹೋದರೆ ಏನಾದರೂ ಬಿಟ್ಟು ಬರಬೇಕೆಂಬುದು ಪ್ರತೀತಿ. ಕೆಲವರು ಇಷ್ಟವಿರುವ ಸಿಹಿ, ಇನ್ನು ಕೆಲವರು ಖಾರ ತಿನ್ನೋದು ಬಿಡುತ್ತಾರೆ. ಒಬ್ಬ ಮಹಾ ಸಿಡುಕನಿದ್ದ. ಆತ ಕಾಶಿಗೆ ಹೋದವನು ತನ್ನಲ್ಲಿರುವ ಕೆಟ್ಟ ಗುಣ- ‘ಕೋಪವನ್ನು ಬಿಡುತ್ತೇನೆ’ ಎಂದು ಸಂಕಲ್ಪಮಾಡಿದ. ಕಾಶಿ ವಿಶ್ವನಾಥ ಸ್ವಾಮಿಯ ದರುಶನ ಮಾಡಿ ಊರಿಗೆ ವಾಪಸ್ಸಾದ. ‘ಏನು ಬಿಟ್ಟು ಬಂದೆ?’ ಎಂದು ಊರವರು ಕೇಳಿದರು. ಅದಕ್ಕಾತ ‘ಕೋಪ ಬಿಟ್ಟು ಬಂದೆ’ ಎಂದ. ಆಗ ಇನ್ನೊಬ್ಬಾತ ಹೌದೋ ಅಲ್ಲವೋ ಎಂದು ಪರೀಕ್ಷಿಸಲು ‘ಏನನ್ನು ಬಿಟ್ಟು ಬಂದೆ’ ಎಂದು ಕೇಳಿದ. ‘ಕೋಪ ಬಿಟ್ಟೆ’ ಎಂದ ಕಾಶಿಗೆ ಹೋಗಿದ್ದಾತ. ಮತ್ತೆ ಕೇಳಿದ, ‘ಏನನ್ನು ಬಿಟ್ಟು ಬಂದಿದ್ದೀ?’ ‘ಕೋಪ’ ಎಂದುತ್ತರಿಸಿದ. ಹೀಗೆ ಮೂರು-ನಾಲ್ಕು ಸಲ ಪದೇಪದೆ ‘ಏನನ್ನು ಬಿಟ್ಟು ಬಂದಿರಿ’ ಎಂದಾಗ ಆ ವ್ಯಕ್ತಿ, ‘ರೀ.. ಎಷ್ಟು ಸಲ ಹೇಳೋದ್ರೀ, ಕೋಪ ಬಿಟ್ಟು ಬಂದೆ ಅಂತ. ಒಂದು ಸಲ ಹೇಳಿದ್ರೆ ಅರ್ಥವಾಗಲ್ವಾ?’ ಎಂದು ದಬಾಯಿಸಿದ. ಒಮ್ಮೊಮ್ಮೆ ಹೀಗೂ ಆಗುತ್ತದೆ. ನಾವು ಅದನ್ನು ಬಿಟ್ಟರೂ ಅದು ನಮ್ಮನ್ನು ಬಿಡುವುದಿಲ್ಲ. ಆತ ಸಿಟ್ಟು ಬಿಟ್ಟದ್ದು ಮಾತ್ರ. ಪರಿವರ್ತನೆ ಆಗಿರಲಿಲ್ಲ. ನಾವೂ ದೋಷ ಕಳೆದುಕೊಳ್ಳುವುದರೊಂದಿಗೆ ಪರಿವರ್ತನೆ ಆಗಬೇಕು. ಸರ್ವರಿಗೂ ಶ್ರೀಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts