More

    ಕರಾವಳಿಯಲ್ಲಿ ಶ್ರದ್ಧೆಯ ಶಿವಾರಾಧನೆ

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಹಾಶಿವರಾತ್ರಿ ಮಹೋತ್ಸವವನ್ನು ಶುಕ್ರವಾರ ಜನರು ಶ್ರದ್ಧೆ, ಸಂಭ್ರಮದಿಂದ ಆಚರಿಸಿದರು.
    ಪ್ರಮುಖ ಶಿವಾಲಯಗಳು ಮತ್ತು ಆಯಾ ಊರಿನ ಶಿವ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಭಕ್ತರು ಪೂಜೆ ಸಲ್ಲಿಸಿದರು. ದ.ಕ. ಜಿಲ್ಲೆಯ ಧರ್ಮಸ್ಥಳ ಶ್ರೀ ಮಂಜುನಾಥ, ಕದ್ರಿ ಶ್ರೀ ಮಂಜುನಾಥ, ಕುದ್ರೋಳಿ ಗೋಕರ್ಣನಾಥ, ಶರವು ಶ್ರೀ ಶರಭೇಶ್ವರ, ನರಹರಿ ಶ್ರೀ ಸದಾಶಿವ ದೇವಸ್ಥಾನ, ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಹಿತ ಶಿವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ಶಿವಾರಾಧನೆ ನಡೆಯಿತು.
    ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ತಡರಾತ್ರಿವರೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಉತ್ಸವ ಬಲಿ, ಭಜನೆಯೊಂದಿಗೆ ಜಾಗರಣೆ ಮತ್ತಿತರ ಧಾರ್ಮಿಕ ವಿಧಿವಿಧಾನ ನೆರವೇರಿದವು. ಜಾಗರಣೆ ಉದ್ದೇಶದಿಂದ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.

    ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಶಿವಪೂಜೆ, ಜಾಮಪೂಜೆ, ವಿಶೇಷ ಪೂಜೆ, ಅಭಿಷೇಕ, ರಾತ್ರಿ ಬೆಳ್ಳಿ ರಥೋತ್ಸವ ನೆರವೇರಿತು. ಕ್ಷೇತ್ರದ ಪುಷ್ಕರಿಣಿಯಲ್ಲಿ ಮಿಂದು ಭಕ್ತರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೆಳಗ್ಗೆ ಉಮಾಮಹೇಶ್ವರ ಹೋಮ, ಮಹಾರುದ್ರಾಭಿಷೇಕ, ಶತ ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ರಥೋತ್ಸವ, ವಿಷ್ಣು ಬಲಿ ಉತ್ಸವ, ಶಿವಬಲಿ ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ, ಕೆರೆದೀಪ, ಮಂಟಪಪೂಜೆ ನೆರವೇರಿತು.

    ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಜಾಗರಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಸೋಮೇಶ್ವರ ಶ್ರೀ ಸೋಮನಾಥೇಶ್ವರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ನೆಲ್ಲಿತೀರ್ಥ ಸೋಮನಾಥೇಶ್ವರ, ಪಣಂಬೂರು ನಂದನೇಶ್ವರ, ಕಳವಾರು ಬೆಂಕಿನಾಥೇಶ್ವರ ದೇವಸ್ಥಾನಗಳಲ್ಲಿಯೂ ಶಿವರಾತ್ರಿ ಸಂಭ್ರಮವಿತ್ತು. ಉಪ್ಪಿನಂಗಡಿಯ ನೇತ್ರಾವತಿ ನದಿಗರ್ಭ ದಲ್ಲಿರುವ ಉದ್ಭವ ಶಿವಲಿಂಗಕ್ಕೆ ಸಾವಿರಾರು ಭಕ್ತರು ಸ್ವಯಂ ಅಭಿಷೇಕ, ಪೂಜೆ ಸಲ್ಲಿಸಿದರು.
    ಉಡುಪಿ ಜಿಲ್ಲೆಯ ವಿವಿಧ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಟೇಶ್ವರ ಕೋಟಿಲಿಂಗೇಶ್ವರ, ರಥಬೀದಿಯಲ್ಲಿರುವ ಅನಂತೇಶ್ವರ, ಚಂದ್ರಮೌಳೇಶ್ವರ ಮೊದಲಾದ ಪ್ರಮುಖ ದೇವಸ್ಥಾನಗಳಲ್ಲಿ ಮಹಾಪೂಜೆ, ಧಾರ್ಮಿಕ ಕಾರ್ಯಕ್ರಮ ವಿಶೇಷವಾಗಿ ಜರುಗಿದವು. ವಿವಿಧ ಶಿವನ ದೇವಾಲಯಗಳಿಗೆ ತೆರಳಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

    ಬನ್ನಂಜೆ ಮಹಾಲಿಂಗೇಶ್ವರ, ಕೊಡವೂರು ಶಂಕರನಾರಯಣ ದೇವಸ್ಥಾನ, ಕುತ್ಪಾಡಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನ, ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಓಂಕಾರೇಶ್ವರ ದೇವಸ್ಥಾನ, ಉದ್ಯಾವರ ಶಂಭುಕಲ್ಲು ದೇವಳ, ಪಿಲಾರ್‌ಕಾನ್ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಮೊದಲಾದ ದೇವಳಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಜರುಗಿದವು.
    ದೇವಳಗಳಲ್ಲಿ ಬೆಳಗ್ಗೆ ವಿಶೇಷ ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ, ಶತ ರುದ್ರಾಭಿಷೇಕ, ವಿಶೇಷ ಪೂಜೆ, ಸಾಯಂಕಾಲ ರಂಗಪೂಜೆ, ವಿಶೇಷ ಮಹಾಪೂಜೆ, ಕೆಲವು ದೇವಳಗಳಲ್ಲಿ ಉಪವಾಸ ವ್ರತ ಜರಗಿದರೆ ಕೆಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ದೇವಸ್ಥಾನ ಆವರಣದಲ್ಲಿ ಭಕ್ತರಿಂದ ಜಾಗರಣೆ ನಿಮಿತ್ತ ರಾತ್ರಿ ನಿರಂತರ ಭಜನೆ,ಕುಣಿತ ಭಜನೆ, ಅಖಂಡ ಭಜನೆ, ಯಕ್ಷಗಾನ, ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

    ಹತ್ತೂರ ಒಡೆಯನಿಗೆ ಶತರುದ್ರಾಭಿಷೇಕ
    ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಭಕ್ತರಿಂದ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ 9ರಿಂದ ಶತರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಸೇವೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯ ನೆರವೇರಿತು. ಸುಮಾರು 80 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts