More

    ಶಿವಾಲಯಗಳಿಗೆ ಹರಿದು ಬಂದ ಭಕ್ತಸಾಗರ ; ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಕೆ

    ಕೋಲಾರ : ನಗರ ಸೇರಿ ಜಿಲ್ಲೆಯಾದ್ಯಂತ ಜನತೆ ಶ್ರದ್ಧಾಭಕ್ತಿಯಿಂದ ಹರನ ಸ್ಮರಣೆಯಲ್ಲಿ ವ್ರತಾಚರಣೆಯೊಂದಿಗೆ ಗುರುವಾರ ಶಿವರಾತ್ರಿ ಆಚರಿಸಿದರೆ, ಅನೇಕ ಶಿವಾಲಯಗಳಲ್ಲಿ ಭಕ್ತರಿಂದ ರಾತ್ರಿಯಿಡೀ ಶಿವನಾಮಸ್ಮರಣೆ ನಡೆಯಿತು.

    ಶಿವರಾತ್ರಿ ಅಂಗವಾಗಿ ಶಿವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಬಿಲ್ವಾರ್ಚನೆ, ಯಾಮ ಪೂಜೆ, ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ, ದೇವಾಲಯದ ಪ್ರಾಂಗಣಕ್ಕೂ ಹೂವಿನ ಅಲಂಕಾರ ಮಾಡಲಾಗಿತ್ತು.

    ನಗರದ ಕೋಟೆಯಲ್ಲಿನ ಶ್ರೀ ಸೋಮೇಶ್ವರ ದೇವಾಲಯಕ್ಕೆ ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತಸಾಗರ ಹರಿದು ಬಂದಿತ್ತು. ನಂದಿಯ ಮುಂಭಾಗದಲ್ಲಿ ಭಕ್ತರು ದೀಪಗಳನ್ನು ಬೆಳಗಿ ಹಣ್ಣು ಕಾಯಿ ಒಡೆದು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಶಿವಲಿಂಗ ದರ್ಶನ ಪಡೆದರು. ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ವಿತರಿಸಿರುವ ಗಂಗಾಜಲವನ್ನು ಪಂಚಾಮೃತದೊಂದಿಗೆ ಭಕ್ತರಿಗೆ ತೀರ್ಥವಾಗಿ ನೀಡಲಾಯಿತು.

    ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ಅಂತರಗಂಗೆಯ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಭಕ್ತರು ಕಾಶಿವಿಶ್ವನಾಥನ ದರ್ಶನ ಪಡೆದರು. ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಬೆಟ್ಟದ ತಪ್ಪಲಿನಲ್ಲಿರುವ ಜಲಕಂಠೇಶ್ವರನಿಗೂ ವಿಶೇಷ ಪೂಜೆ ನಡೆಯಿತು.

    ಕಾಳಮ್ಮಗುಡಿ ಬೀದಿಯಲ್ಲಿನ ಕಾಳಿಕಾಂಬ ಕಮಟೇಶ್ವರ ದೇವಾಲಯ, ಅರಳೆಪೇಟೆ ಬಸವೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿಗೆ ಬಿಲ್ವಸಹಸ್ರ ನಾಮಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
    ನಗರದ ಅಂತರಗಂಗೆ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲೂ ಶಿವರಾತ್ರಿ ಆಚರಿಸಲಾಯಿತು.

    ಜಾಗರಣೆ: ಶಿವರಾತ್ರಿ ಅಂಗವಾಗಿ ಮನೆಗಳಲ್ಲಿ ವ್ರತಾಚರಣೆ ನಡೆಸಿ ಶಿವನಿಗೆ ರಾಗಿ, ಸಾಮೆಯ ಪುರಿ ಉಂಡೆಗಳನ್ನು ನೈವೇದ್ಯವಾಗಿ ಇಟ್ಟು ಪ್ರಸಾದವಾಗಿ ಸ್ವೀಕರಿಸಿದರು. ಕೆಲವರು ರಾತ್ರಿಯಿಡಿ ಶಿವನಾಮಸ್ಮರಣೆಯೊಂದಿಗೆ ಜಾಗರಣೆ ಇದ್ದರೆ ವಿವಿಧೆಡೆ ಜಾಗರಣೆಯ ಹೆಸರಿನಲ್ಲಿ ಯುವಕರ ತಂಡ ತಡರಾತ್ರಿಯವರೆಗೆ ಬಯಲು, ರಸ್ತೆಗಳಲ್ಲಿ ಆಟೋಟಗಳನ್ನು ಆಡುತ್ತಿದ್ದ ದೃಶ್ಯ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts