More

    ಶಿವನಹಳ್ಳಿ ವೀರಭದ್ರೇಶ್ವರಸ್ವಾಮಿ ದೇಗುಲ ತೆರವಿಗೆ ಭಕ್ತರ ವಿರೋಧ

    ಕನಕಪುರ: ಕಸಬಾ ಹೋಬಳಿಯ ಶಿವನಹಳ್ಳಿಯಲ್ಲಿ 800 ವರ್ಷಗಳ ಇತಿಹಾಸ ಹೊಂದಿರುವ ಚೋಳರ ಕಾಲದ ವೀರಭದ್ರೇಶ್ವರಸ್ವಾಮಿ ದೇವಾಲಯದ ಮರುನಿರ್ಮಾಣಕ್ಕೆ ಗ್ರಾಮಸ್ಥರಿಂದ ಮತ್ತೆ ವಿರೋಧ ವ್ಯಕ್ತವಾಗಿದೆ.

    ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 2 ವರ್ಷಗಳ ಹಿಂದೆ ದೇವಾಲಯ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ, ಗ್ರಾಮಸ್ಥರು ಹಾಗೂ ಭಕ್ತರ ವಿರೋಧದಿಂದಾಗಿ ಸ್ಥಗಿತಗೊಂಡಿತ್ತು. ಆರಂಭದಲ್ಲಿ ದೇವಾಲಯ ಉಳಿಸಿಕೊಂಡು ರಸ್ತೆ ಅಗಲೀಕರಣ ಮಾಡಲು ಸರ್ವೇ ಮಾಡಿದಾಗ ದೇವಾಲಯ ಕಾಂಪೌಂಡ್ ಸೇರಿ ಕೇವಲ 6 ಗುಂಟೆ ಜಾಗ ಒತ್ತುವರಿಯಾಗಿದ್ದು, ಅದಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ನೀಡಿ, ಉಳಿದ ಜಾಗದಲ್ಲಿ ದೇವಾಲಯ ಅಭಿವೃದ್ಧಿಗೆ ಭಕ್ತರು ಒಪ್ಪಿದ್ದರು. ಆದರೆ, ಇತ್ತೀಚಿನ ರಾಜಕೀಯ ಮೇಲಾಟದಿಂದಾಗಿ ದೇವಾಲಯದ ಗರ್ಭಗುಡಿಯನ್ನೇ ತೆರವುಗೊಳಿಸಲು ಮುಂದಾಗಿದ್ದು ಇದಕ್ಕೆ ಗ್ರಾಮಸ್ಥರು ಮತ್ತು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಸೋಮವಾರ ಮತ್ತೆ ದೇಗುಲ ತೆರವಿಗೆ ಸರ್ವೇ ಮಾಡಲು ಅಧಿಕಾರಿಗಳು ಬಂದಾಗ, ಸರ್ವೇ ನಡೆಸದಂತೆ ಹೇಳಿ ೇರಾವ್ ಮಾಡಿದ ಗ್ರಾಮಸ್ಥರು ಹಾಗೂ ಭಕ್ತರು ಅಧಿಕಾರಿಗಳನ್ನು ವಾಪಸ್ ಕಳುಸಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಸುಸ್ಥಿತಿಯಲ್ಲಿದ್ದ ದೇವಾಲಯದ ಗೋಪುರವನ್ನು ಕೆಲವರು ಉರುಳಿಸಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಸಿಕ್ಕ ಪರಿಹಾರ ಹಣ ದುರುಪಯೋಗವಾಗಿದೆ ಎನ್ನುವುದು ಭಕ್ತರ ಆರೋಪವಾಗಿದೆ. 2 ವರ್ಷಗಳ ಹಿಂದೆ ದೇಗುಲ ಮಠದ ನಿರ್ವಾಣ ಸ್ವಾಮೀಜಿ ದೇವಾಲಯದ ಜೀರ್ಣೋದ್ಧಾರ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಯಾವುದೇ ಕಾರ್ಯ ನಡೆದಿಲ್ಲ.

    ಪಕ್ಕದಲ್ಲಿಯೇ ಇರುವ ಪಂಚಾಯಿತಿ ಕಚೇರಿ, ಅಂಗನವಾಡಿ, ಡೇರಿಗಳಿಗೆ ಬೇರೆ ಕಡೆ ಜಾಗ ನೀಡಿ ಈ ಜಾಗವನ್ನು ದೇವಾಲಯಕ್ಕೆ ನೀಡಬೇಕು. ಇದರಿಂದ ವಿಶಾಲ, ಸುಂದರ ದೇವಾಲಯ ನಿರ್ಮಾಣ ಮಾಡಬಹುದು. ದೇವಾಲಯದ ಮೂಲ ವಾತಾವರಣವನ್ನು ಹಾಗೇ ಉಳಿಸಬೇಕು, ರಸ್ತೆ ನಿರ್ಮಾಣಕ್ಕೆ ಬೇಕಾದರೆ ದೇವಾಲಯ ಮುಂಭಾಗದ ಜಾಗ ನೀಡಲು ಸಿದ್ಧ. ಬೈಪಾಸ್ ನಿರ್ಮಿಸಿ ದೇವಾಲಯ ಉಳಿಸಲು ಭಕ್ತರು ಆಗ್ರಹಿಸಿದ್ದಾರೆ. ನಂಬಿಕೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಹಾಗೂ ಭಕ್ತರ ನಿಲುವಾಗಿದೆ.

    ಹುಸಿಯಾದ ಭರವಸೆ: ಕಳೆದ ವಾರ ವೀರಭದ್ರಸ್ವಾಮಿ ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರ್ಚಕ ಹರಿಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ವೀರಪ್ಪ ಹಾಗೂ ಗ್ರಾಮದ ವೀರಭದ್ರಯ್ಯ, ಪುಟ್ಟಸ್ವಾಮಿ, ನಾಡಗೌಡ, ರುದ್ರಮೂರ್ತಿ ಮತ್ತಿತರ ನಿಯೋಗ ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ದೇವಾಲಯ ಉಳಿಸಿಕೊಡುವಂತೆ ಮನವಿ ಮಾಡಿತ್ತು. ಆಗ ಸಂಸದರು ದೇವಾಲಯ ಉಳಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಅದಾದ 3 ದಿನಗಳಲ್ಲೇ ಸಂಸದರ ಭರವಸೆ ಹುಸಿ ಎನ್ನುವಂತೆ ಅಧಿಕಾರಿಗಳು ಮತ್ತೆ ಸರ್ವೇಗೆ ಮುಂದಾಗಿದ್ದಾರೆ. ಕೂಡಲೇ ಸಂಸದರು ಮಧ್ಯ ಪ್ರವೇಶಿಸಿ ಗರ್ಭಗುಡಿ ಉಳಿಸಿಕೊಡುವಂತೆ ಭಕ್ತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts