More

    ಸಿದ್ದೇಶ್ವರ ಶ್ರೀಗಳನ್ನು ಕರೆಯಿಸುವ ಆಸೆ ಈಡೇರಲಿಲ್ಲ: ಈಶ್ವರಪ್ಪ ಬೇಸರ

    ಶಿವಮೊಗ್ಗ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಕ್ತರನ್ನು ಆಕರ್ಷಿಸುವ ಶಕ್ತಿಯಿತ್ತು. ಎಂದೂ ಹಣ ಪಡೆದವರಲ್ಲ ಅವರು. 1992ರಲ್ಲಿ ನಾನು ಯುವಮೋರ್ಚಾ ಅಧ್ಯಕ್ಷನಾಗಿದ್ದಾಗ ಅವರ ಪರಿಚಯವಾಗಿತ್ತು. ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯಿಂದ ಅವರ ಪ್ರವಚನ ಏರ್ಪಡಿಸುವ ಪ್ರಯತ್ನ ಮಾಡಿದರೂ ಅದು ಕೈಗೂಡಲಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಸಿದ್ದೇಶ್ವರ ಶ್ರೀ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಭಕ್ತರಿಗೆ ಹಣ ಪಡೆಯದೇ ಇದ್ದರೂ ಆಶ್ರಮಕ್ಕೆ ಬಂದವರಿಗೆಲ್ಲ ಊಟ ಹಾಕಿ ಕಳುಹಿಸಿಕೊಡುವ ವ್ಯವಸ್ಥೆಯನ್ನು ರೂಪಿಸಿದ್ದು ಅವರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದರು.
    ವಿಚಾರವಾದಿ, ಸಿದ್ಧಾಂತ ಪರಿಪಾಲಕರಾಗಿದ್ದ ಸಿದ್ದೇಶ್ವರ ಸ್ವಾಮೀಜಿಯವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. ಉತ್ತರ ಕರ್ನಾಟಕದಲ್ಲಿ ಪ್ರತೀ ಮನೆಯಲ್ಲಿ ಅವರ ೆಟೋ ಇರಿಸಿ ಪೂಜೆ ಸಲ್ಲಿಸುತ್ತಾರೆ. ಸಂತರಿಗೇ ಮಾರ್ಗದರ್ಶನ ಮಾಡುತ್ತಿದ್ದ ದೊಡ್ಡ ಸಂತನಾಗಿದ್ದರು ಎಂದು ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಭಾರತದ ತಳಹದಿ ರೂಪುಗೊಂಡಿರುವುದೇ ಆಧ್ಯಾತ್ಮದಲ್ಲಿ ಎಂಬುದಕ್ಕೆ ಸಿದ್ದೇಶ್ವರ ಶ್ರೀಗಳು ನಿದರ್ಶನ. ಒಲಿದ ಬಂದ ಪದ್ಮಶ್ರೀ, ಗೌರವ ಡಾಕ್ಟರೇಟ್ ಎಲ್ಲವನ್ನೂ ತಿರಸ್ಕರಿಸಿ ಆಧ್ಯಾತ್ಮದಲ್ಲಿ ಜೀವನ ಪೂರ್ತಿ ತೊಡಗಿಸಿಕೊಂಡಿದ್ದರು. ಆರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಬಸವಣ್ಣ, ಬುದ್ದ, ಮಹಾವೀರರ ಸಾಲಿನಲ್ಲಿ ನಿಲ್ಲುವ ಸಂತ ಅವರು ಎಂದು ಬಣ್ಣಿಸಿದರು.
    ಮೇಯರ್ ಎಸ್.ಶಿವಕುಮಾರ್, ನಗರ ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಎಸ್.ಜ್ಞಾನೇಶ್ವರ್, ಬಿಜೆಪಿ ನಗರಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಬಳ್ಳೇಕೆರೆ ಸಂತೋಷ್, ಡಿ.ಮೋಹನ್ ರೆಡ್ಡಿ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts