More

    ರೈಲುಮಾರ್ಗದ ಪಕ್ಕ ಶಿವಕ್ಷೇತ್ರದ ಕುರುಹು: ದೇವಳ ಮರುನಿರ್ಮಾಣಕ್ಕೆ ಕಟಿಬದ್ಧರಾದ ಸ್ಥಳೀಯರು

    ಮಂಗಳೂರು: ಐದು ದಶಕಗಳ ಹಿಂದೆ ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣ ವೇಳೆ ನಿರ್ನಾಮಗೊಂಡ ವಿಠಲಕೋಡಿ ಬಾನೊಟ್ಟು ಎಂಬಲ್ಲಿನ ಪುರಾತನ ಶಿವಕ್ಷೇತ್ರವೊಂದರ ಕುರುಹುಗಳು ಮತ್ತೆ ಕಾಣಿಸಿಕೊಂಡಿದೆ.

    ಸುಳ್ಳಮಲೆಯ ಹಸಿರುಬೆಟ್ಟ, ಅದರ ತಪ್ಪಲಿನ ಗದ್ದೆತೋಟದ ನಿಸರ್ಗ ರಮಣೀಯ ತಾಣವೇ ವಿಠಲಕೋಡಿ ಬಾನೊಟ್ಟು. 1960ರ ದಶಕದಲ್ಲಿ ಮಂಗಳೂರು-ಹಾಸನ ರೈಲ್ವೆ ಮಾರ್ಗ ನಿರ್ಮಾಣಗೊಂಡಿತ್ತು. ಆಗ ಬಾನೊಟ್ಟುವಿನಲ್ಲಿ ಇದ್ದ ದೇಗುಲದ ಜಾಗ ರೈಲ್ವೇ ವಶವಾಗಿದ್ದರಿಂದ ಅದು ಕಡೆಗಣಿಸಲ್ಪಟ್ಟಿತ್ತು. ಊರಿನ ಜನರೂ ಮರೆತಿದ್ದರು. ಈಗ ಕೆಲ ವರ್ಷಗಳಿಂದ ಈ ಉಮಾಮಹೇಶ್ವರ ದೇವಸ್ಥಾನದ ಒಂದೊಂದೇ ಅವಶೇಷಗಳು ಕಾಣಸಿಗುತ್ತಿವೆ. ಊರಿನ ಕೆಲವು ಆಸಕ್ತರು ಮಾತ್ರ ದೇವಸ್ಥಾನವನ್ನು ಬೇರೆ ಕಡೆಗೆ ಯೋಗ್ಯವೆನಿಸುವ ಜಾಗದಲ್ಲಿ ಪುನರ್ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ.

    ಊರಿನ ಪ್ರಮುಖರಾದ ಮಾಣಿಯ ಎಂ.ವಿ.ಪೈ, ಸದಾಶಿವ ಆಚಾರ್, ರಮೇಶ ಕೈಂತಜೆ, ಹರೀಶ್ ಮಾಣಿ, ತೋಟ ನಾರಾಯಣ ಶೆಟ್ಟಿ, ನಾರಾಯಣ ರೈ ಬಾನೊಟ್ಟು, ರವಿ ಶರ್ಮ ಕುಕ್ಕರಬೆಟ್ಟು, ನಿತಿನ್ ಸಾಲ್ಯಾನ್ ಮೊದಲಾದವರು ಸ್ಥಳೀಯವಾಗಿ ಈ ದೇವಸ್ಥಾನದ ಮರುನಿರ್ಮಾಣ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ.
    ಸದ್ಯ ಈ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದೇವೆ, ಮುಂದೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿ, ಧಾರ್ಮಿಕ ಪರಿಷತ್ ಮತ್ತಿತರ ಸಂಸ್ಥೆಗಳನ್ನು ಸೇರಿಸಿ ಪ್ರಶಸ್ತ ಜಾಗದಲ್ಲಿ ದೇವಸ್ಥಾನ ನಿರ್ಮಿಸುವ ಯೋಜನೆ ರೂಪಿಸುತ್ತಿದ್ದೇವೆ ಎಂದು ಎಂ.ವಿ.ಪೈ ತಿಳಿಸಿದ್ದಾರೆ. ದೇವಸ್ಥಾನದ ಶಿವಲಿಂಗವನ್ನು ನಾನು ಹಿಂದೆ ನೋಡಿದ್ದೆ. ಹುಲ್ಲುಹಾಸಿನ ದೇವಸ್ಥಾನವಾಗಿತ್ತು, ಎರಡು ಅಡಿಯಷ್ಟು ಎತ್ತರದ ಶಿವಲಿಂಗ ಇಲ್ಲಿದ್ದ ನೆನಪಿದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಪ್ಪ ಕುಲಾಲ್ ಬರಣಿಕೆ. ಆದರೆ ಆ ಶಿವಲಿಂಗ ಎಲ್ಲಿದೆ ಎಂಬ ಮಾಹಿತಿ ಅಸ್ಪಷ್ಟ. ಕೆಲವರ ಪ್ರಕಾರ ಶಿವಲಿಂಗವನ್ನು ಬಾವಿಗೆ ಹಾಕಿರುವ ಸಾಧ್ಯತೆ ಇದೆ.

    ಎಲ್ಲಿದೆ ದೇವಳದ ಅವಶೇಷ?: ಕಲ್ಲಡ್ಕದಿಂದ ಮಾಣಿ ಮೂಲಕ ಪುತ್ತೂರಿಗೆ ಹೋಗುವಾಗ ಮಾಣಿಯಿಂದ ಬಲಕ್ಕೆ ತಿರುಗಿ ಒಂದು ಕಿ.ಮೀ ತೆರಳಬೇಕು. ದಾರಿಯಲ್ಲಿ ಸ್ಥಳೀಯ ಬಂಟ ಮನೆತನದವರ ಕಂಬಳ ಗದ್ದೆ, ಆ ಬಳಿಕ ರೈಲು ಮಾರ್ಗ ಸಿಗುತ್ತದೆ. ಅದರಲ್ಲಿ ಅರ್ಧ ಕಿ.ಮೀ ಸಂಚರಿಸಿದರೆ ರೈಲುಪಟ್ಟಿಯ ಎಡಬದಿಗೇ ತಾಗಿಕೊಂಡಂತೆಯೇ ಈ ಹಳೇ ದೇವಸ್ಥಾನವಿದ್ದ ಜಾಗ ಸಿಗುತ್ತದೆ. ಗಾಢವಾಗಿ ಬೆಳೆದಿರುವ ವನರಾಶಿಯ ಮಧ್ಯೆ ಶಿವಲಿಂಗದ ಪಾಣಿಪೀಠ ಮತ್ತು ಪಡಿಕಲ್ಲುಗಳು ಕಾಣಸಿಗುತ್ತಿವೆ. ಮೊದಲು ಪಾಣಿಪೀಠ ಸಿಕ್ಕಿತ್ತು. ಆ ಬಳಿಕ ಸ್ಥಳೀಯರೊಬ್ಬರು ಪರೀಕ್ಷಿಸಿದಾಗ ಪೊದರು ಕಾಡಿನ ಮಧ್ಯೆ ತೀರ್ಥಬಾವಿ ಪತ್ತೆಯಾಯಿತು. ಈ ಜಾಗವನ್ನು ಉತ್ಖನನ ಮಾಡಿದರೆ ಇನ್ನಷ್ಟು ಕುರುಹುಗಳು ಸಿಗಬಹುದು.

    800 ವರ್ಷಗಳ ಇತಿಹಾಸ?: ಈ ದೇವಸ್ಥಾನದ ಕಲ್ಲಿನ ರಚನೆಗಳನ್ನು ನೋಡಿದರೆ ಸುಮಾರು 800 ವರ್ಷಗಳ ಹಿಂದಿನ ಇತಿಹಾಸವಿರಬಹುದು, ಪಕ್ಕದ ಕಲ್ಲಡ್ಕ, ಕಬಕದಂತಹ ಪೇಟೆಗಳು ಅಭಿವೃದ್ಧಿಯಾಗಿರುವಾಗ ಮಾಣಿ ಸುಧಾರಣೆ ಕಾಣುತ್ತಿಲ್ಲ, ಇದಕ್ಕೆ ಈ ದೇವಾಲಯ ಕಡೆಗಣನೆಗೆ ಒಳಗಾಗಿರುವುದು ಕಾರಣವಾಗಿರಬಹುದು ಎಂದು ಊರಿನವರು ಹೇಳುತ್ತಾರೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ಕೊಬ್ರಿಮಠ ಬನ್ನಿಂತಾಯ ವಂಶಸ್ಥರು ಮತ್ತು ನೂಜಿಬೈಲು ಬ್ರಾಹ್ಮಣ ವಂಶಸ್ಥರು ಹಾಗೂ ಕೊಡಾಜೆಯ ಚೂರ್ಯ ಮನೆತನದವರಿಂದ ಈ ದೇವಳದಲ್ಲಿ ನಿತ್ಯಪೂಜೆ, ಕೊಡುಗೆಗಳು ಮತ್ತು ವಿಶೇಷ ಸೇವೆಗಳು ನಡೆಯುತ್ತಿದ್ದವೆಂದು ತಿಳಿದು ಬರುತ್ತದೆ. ಚೂರ್ಯ ಮನೆತನದಲ್ಲಿ ಪ್ರಸ್ತುತ ಯಾರೂ ಇಲ್ಲ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts