More

    ಶಿರಸಿ ಮಾರಿಕಾಂಬೆ ಜಾತ್ರೆ ಮಾ. 19ರಿಂದ 27ರವರೆಗೆ, ಮಾ. 20ರಂದು ದೇವಿಯ ರಥಾರೋಹಣ

    ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಮಾ. 19ರಿಂದ 27ವರೆಗೆ ನಡೆಯಲಿದೆ.

    ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜಾತ್ರೆಯ ಮೂಹೂರ್ತ ಸಭೆಯಲ್ಲಿ ದಿನಾಂಕ ಘೊಷಿಸಲಾಯಿತು.

    ದೀಪ ಬೆಳಗಿಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಬಾಬುದಾರರ ಪ್ರಾಮುಖ್ಯತೆ ಬಹಳ ದೊಡ್ಡದಿರುತ್ತದೆ. ಜಾತ್ರೆಗೆ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಲಾಗಿದೆ. ಈ ಭಾರಿಯ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.

    ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಆಗದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಾತ್ರಾ ಗದ್ದುಗೆಯಲ್ಲಿ ಶ್ರೀ ದೇವಿಯ ದರ್ಶನಕ್ಕೆ ಬರುವವರಿಗೆ ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ಕಾರ್ಯಕರ್ತರಿಗೆ , ಗಣ್ಯರಿಗೆ ನೀಡುವ ಪಾಸ್ ವಿಚಾರ ಸೇರಿ ಹಲವು ವಿಚಾರಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಿದರು. ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ, ಶಿರಸಿ ಸಹಾಯಕ ಆಯುಕ್ತೆ ಅಪರ್ಣ ರಮೇಶ, ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಐ ರಾಮಚಂದ್ರ ನಾಯಕ್, ಎಸ್.ಪಿ. ಶೆಟ್ಟಿ, ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ಬಾಬುದಾರರು ಇದ್ದರು.

    ಜಾತ್ರಾ ಕಾರ್ಯಕ್ರಮಗಳು:

    ಜ. 31ರಂದು ಬೆಳಗ್ಗೆ 11.21ಕ್ಕೆ ಶ್ರೀದೇವಿಯ ಪ್ರತಿಷ್ಠಾ ಮಂಟಪ ಕಳಚುವುದು. ಫೆ.27ರಂದು ರಾತ್ರಿ 9ಗಂಟೆ ನಂತರ ಮೊದಲನೇ ಹೊರಬೀಡು(ಪೂರ್ವ ದಿಕ್ಕಿಗೆ), ಮಾ. 1ರಂದು ರಾತ್ರಿ 9ಗಂಟೆ ನಂತರ ಎರಡನೇ ಹೊರಬೀಡು (ಉತ್ತರ ದಿಕ್ಕಿಗೆ) ಮಾ. 5ರಂದು ರಾತ್ರಿ 9ಗಂಟೆ ನಂತರ ಮೂರನೇ ಹೊರಬೀಡು (ಪೂರ್ವ ದಿಕ್ಕಿಗೆ), ಮಾ. 8ರಂದು ಮಧ್ಯಾಹ್ನ ರಥದ ಬಗ್ಗೆ ಪೂಜಾರಿ ,ಆಚಾರಿ ಮತ್ತು ಬಡಗಿಯವರಿಂದ ವೃಕ್ಷ ಪೂಜೆ, ಮಾ. 8ರಂದು ರಾತ್ರಿ 9ಗಂಟೆ ನಂತರ ನಾಲ್ಕನೇ ಹೊರಬೀಡು (ಉತ್ತರ ದಿಕ್ಕಿಗೆ), ಮಾ. 12ರಂದು ಬೆಳಗ್ಗೆ ಶ್ರೀದೇವಿ ರಥದ ಮರ ತರುವುದು. ಮಾ. 12ರಂದು ರಾತ್ರಿ 9.45ರ ನಂತರ ಅಂಕೆಯ ಹೊರಬೀಡು (ಪೂರ್ವ ದಿಕ್ಕಿಗೆ), ಮಾ. 13ರಂದು ಮಧ್ಯಾಹ್ನ ಅಂಕೆ ಹಾಕುವುದು ಹಾಗೂ ಶ್ರೀದೇವಿಯ ವಿಗ್ರಹ ವಿಸರ್ಜನೆ, ಮಾ. 19ರಂದು ಮಧ್ಯಾಹ್ನ ಶ್ರೀದೇವಿಯ ರಥದ ಕಲಶ ಪ್ರತಿಷ್ಠೆ ಹಾಗೂ ರಾತ್ರಿ ಶ್ರೀ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ, ಮಾ. 20ರಂದು ಬೆಳಗ್ಗೆ ಶ್ರೀ ದೇವಿಯ ರಥಾರೋಹಣ, ಶೋಭಾಯಾತ್ರೆ ಮಧ್ಯಾಹ್ನ ಜಾತ್ರಾ ಗದ್ದುಗೆಯಲ್ಲಿ ಶ್ರೀ ದೇವಿಯ ಸ್ಥಾಪನೆ. ಮಾ. 21ರಂದು ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆ ಸ್ವೀಕಾರ ಆರಂಭ. ಮಾ. 27ರಂದು ಬೆಳಗ್ಗೆ 10.41ಕ್ಕೆ ಜಾತ್ರೆ ಮುಕ್ತಾಯವಾಗಿ ದೇವಿ ಜಾತ್ರಾ ಗದ್ದುಗೆಯಿಂದ ಏಳುವುದು. ಏ. 9ರಂದು ಬೆಳಗ್ಗೆ ಯುಗಾದಿ ಪ್ರತಿಷ್ಠೆ. ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಸಭೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts