More

    ಕಸದಲ್ಲಿ ಬೇಯುತ್ತಿದೆ ಶಿರಹಟ್ಟಿಯ ಬೇಂದ್ರೆ ಭವನ

    ಶಿರಹಟ್ಟಿ: ಧಾರವಾಡದ ಹೆಸರನ್ನು ಎಲ್ಲೆಡೆ ಪಸರಿಸಲು ಕಾರಣರಾದ ಸಾಹಿತ್ಯ ದಿಗ್ಗಜರಲ್ಲಿ ವರಕವಿ ದ.ರಾ. ಬೇಂದ್ರೆ ಚಿರಸ್ಮರಣೀಯರು. ಇಂಥವರ ಹೆಸರಿನಲ್ಲಿ ನಿರ್ಮಿಸಿದ ಬೇಂದ್ರೆ ಭವನ ಕಸ ಸಂಗ್ರಹಣೆ, ವಾಹನ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದ್ದು, ಪಟ್ಟಣದ ಸಾಹಿತ್ಯ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ವರಕವಿ ದ.ರಾ. ಬೇಂದ್ರೆ ತಮ್ಮ ಬಾಲ್ಯದ ದಿನಗಳನ್ನು ಶಿರಹಟ್ಟಿಯಲ್ಲಿ ಕಳೆದಿದ್ದು, ಅದನ್ನು ಸ್ಮರಣೀಯವಾಗಿಸಲು ಪಟ್ಟಣದ ಹೃದಯ ಭಾಗದಲ್ಲಿ ಬೇಂದ್ರೆ ಹೆಸರಿನ ಭವನ ನಿರ್ಮಾಣವಾಯಿತು. ಆಗ ಅಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿವೆ ಎಂದು ತಿಳಿದಿದ್ದ ಬಹುತೇಕ ಕಲಾಪ್ರೇಮಿಗಳ ಮನಸು ಈಗ ಭವನಕ್ಕೆ ಒದಗಿರುವ ದುಃಸ್ಥಿತಿ ಕಂಡು ಮರ ಮರಮರಗುತ್ತಿದೆ.

    ಇಚ್ಛಾಶಕ್ತಿ ಕೊರತೆ: ಫಕೀರೇಶ್ವರರು ನಡೆದಾಡಿದ ನಾಡು, ಧರ್ಮ ಸಂಸ್ಕೃತಿಯ ಬೀಡು ಎಂದು ಖ್ಯಾತಿ ಪಡೆದಿರುವ ಶಿರಹಟ್ಟಿ ಪಟ್ಟಣದಲ್ಲೊಂದು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲೆಂಬ ಉದ್ದೇಶದಿಂದ ಪಪಂ ಹಳೆ ಕಟ್ಟಡದ ಹಿಂಭಾಗದಲ್ಲಿ ಸೂಕ್ತವಾದ ಸ್ಥಳ ಗುರುತಿಸುವ ಮೂಲಕ ಸಾಹಿತಿ, ಕಲಾ ಆರಾಧಕರು, ವಾಗ್ಮಿಗಳಾದ ಪ್ರೊ. ಐ.ಜಿ. ಸನದಿ ಅವರು ಇಚ್ಛಾಶಕ್ತಿ ತೋರಿ (1983-84)ರಲ್ಲಿ ತಾವು ಸಂದರಾಗಿದ್ದ ಸಂದರ್ಭದಲ್ಲಿ ದ.ರಾ. ಬೇಂದ್ರೆ ಭವನ ನಿರ್ಮಾಣಕ್ಕೆ ಅನುದಾನ ನೀಡಿದರು. ನಿರ್ಮಾಣ ಕಾರ್ಯ ಆರಂಭವಾಗಿ 1985ರಲ್ಲಿ ಲೋಕಾರ್ಪಣೆ ಗೊಂಡಿದ್ದು ಇತಿಹಾಸ.

    ಆರಂಭದ ಕೆಲ ಕಲೆ, ಸಾಹಿತ್ಯದ ಚಟುವಟಿಕೆ ಜರುಗಿದವು. ನಂತರ ಭವನ ನಿರ್ವಹಣೆ ಉಸ್ತುವಾರಿ ಪಪಂಗೆ ವಹಿಸಲಾಯಿತು. ಆದರೆ ತಾಂತ್ರಿಕವಾಗಿ ದೋಷದಿಂದ ಕೂಡಿದ್ದ ಭವನ ಪ್ರತಿಧ್ವನಿಯ ಕಾರಾಣದಿಂದ ಕ್ರಮೇಣ ನಿರ್ಲಕ್ಷ್ಯಕ್ಕೆ ಗುರಿಯಾಯಿತು. ಈಗ ಭವನದ ಚಿತ್ರಣವೇ ಬದಲಾಗಿದ್ದು, ಕಿಟಕಿ, ಬಾಗಿಲು, ನೆಲಹಾಸಿಗೆ ಕಲ್ಲುಗಳು ಪುಂಡದ ದಾಳಿಗೆ ತುತ್ತಾದರೆ, ಗೋಡೆಗಳು ಶಿಥಿಲಾವಸ್ಥೆಗೆ ತಲುಪಿವೆ. ಪಟ್ಟಣ ಪಂಚಾಯಿತಿಯವರು ಕಸ ವಿಲೇವಾರಿ ಹಾಗೂ ವಾಹನಗಳ ನಿಲುಗಡೆಯ ಸ್ಥಳವಾಗಿ ಮಾಡಿದ್ದಾರೆ. ಶಿಲಾನ್ಯಾಸ ಸಮಾರಂಭದ ಶಿಲಾಫಲಕ ಮಾಯವಾಗಿದೆ.

    ಪಟ್ಟಣಕ್ಕೆ ಸಾಹಿತ್ಯಾಸಕ್ತರೂ ಆಗಮಿಸಿದರೆ ಭವನ ಹೇಗಿದೆ ಎಂದು ನೋಡಲು ಹೋದರು ವ್ಯವಸ್ಥೆಗೆ ಹಿಡಿಶಾಪ ಹಾಕುವುದರಲ್ಲಿ ಸಂಶಯವಿಲ್ಲ.

    ಎಸ್.ಎಸ್. ಪಾಟೀಲರಿಂದ ಸಿಎಂಗೆ ಪತ್ರ
    ಮುಂಡರಗಿ: ಶಿರಹಟ್ಟಿ ಪಟ್ಟಣದಲ್ಲಿರುವ ಭವನವು ಪಾಳು ಬಿದ್ದಿದ್ದು, ಅದನ್ನು ದುರಸ್ತಿಗೊಳಿಸಿ ಪ್ರವಾಸಿ ತಾಣವಾಗಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
    ಕನ್ನಡ ಸಾಹಿತ್ಯ ಲೋಕದ ಮತ್ತು ಕನ್ನಡ ಕಂಪನ್ನು ಪಸರಿಸಿದ ಬೇಂದ್ರೆ ಕೇಂದ್ರ ಅಕಾಡೆಮಿ ಸೇರಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದವರು. ಅವರ ನೆನಪಿನ ಬೇಂದ್ರೆ ಭವನ ಈಗ ಪಾಳು ಬಿದ್ದಿದೆ. ಈಚೆಗೆ ಶಿರಹಟ್ಟಿಗೆ ಭೇಟಿ ನೀಡಿದಾಗ ಅದನ್ನು ಕಂಡು ಬೇಸರವಾಗಿದೆ. ಹಾಳಾದ ಕಾಂಪೌಂಡ್ ಮತ್ತು ಕಸಕಡ್ಡಿಗಳಿಂದ ಆವರಣ ಕೂಡಿಕೊಂಡಿದ್ದು ನೋವಿನಸಂಗತಿ. ಕಲೆ, ಸಂಗೀತ, ಸಾಹಿತ್ಯ ಸೌರಭ ಬೀರಬೇಕಾದ ಬೇಂದ್ರೆ ಭವನ ಹಾಳು ಸುರಿಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನ ಹರಿಸುವ ಮೂಲಕ ಅನುದಾನ ನೀಡಿ ಬೇಂದ್ರೆ ಭವನವನ್ನು ಸಾಂಸ್ಕೃತಿಕ ನೆಲೆಯಾಗಿ ಮಾಡುವುದರ ಜತೆಗೆ ಸ್ಮಾರಕವಾಗಿಸಿ, ಭವನವನ್ನು ಪ್ರವಾಸಿ ತಾಣವಾಗಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts