More

    ಶಿಪ್ ಬಂಕರಿಂಗ್ ಲಾಭ ಕೊಚ್ಚಿನ್‌ಗೆ

    ವೇಣುವಿನೋದ್ ಕೆ.ಎಸ್.ಮಂಗಳೂರು
    ಕರಾವಳಿ ಮೂಲಕ ಹಾದುಹೋಗುವ ಹಡಗುಗಳಿಗೆ ಅಗತ್ಯ ಇಂಧನವನ್ನು ಸಮುದ್ರ ಮಧ್ಯದಲ್ಲೇ ತುಂಬಿಸಿಕೊಳ್ಳುವ ಸೌಲಭ್ಯವನ್ನೇನೋ ನವಮಂಗಳೂರು ಬಂದರು(ಎನ್‌ಎಂಪಿ) ಈಚೆಗೆ ಶುರುಮಾಡಿತ್ತು. ಆದರೆ ಅಧಿಕ ಶುಲ್ಕದ ಹೊರೆ ಕಾರಣ ಈ ಯೋಜನೆಗೆ ಹಿನ್ನಡೆಯುಂಟಾಗಿದ್ದು, ಕೇರಳದ ಕೊಚ್ಚಿನ್ ಬಂದರು ಮಂಡಳಿ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿದೆ.
    ಬಹಳ ಸಮಯದಿಂದ ಎನ್‌ಎಂಪಿಟಿ ಮೇಲೆ ಒತ್ತಡ ಹೇರಿದ್ದ ಈ ಭಾಗದ ಆಸಕ್ತ ಶಿಪ್ಪಿಂಗ್ ಏಜೆಂಟರು ಈ ಸೌಲಭ್ಯ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆರಂಭದಲ್ಲಿ ಒಂದೆರಡು ಹಡಗುಗಳು ಈ ಸೌಲಭ್ಯವನ್ನು ಪಡೆದವು. ಆದರೆ ಹೆಚ್ಚು ಶುಲ್ಕ ತೆರಬೇಕಾಗಿ ಬಂದ ಕಾರಣ ಹಡಗುಗಳು ನಿರಾಸಕ್ತಿ ತೋರಿಸಲಾರಂಭಿಸಿದವು.

    ಏನಿದು ಬಂಕರಿಂಗ್?
    ಕಡಲಿನ ಮಧ್ಯ ಭಾಗದಲ್ಲಿ ಹಾದುಹೋಗುವ ಹಡಗುಗಳಿಗೆ ಹಲವು ಬಾರಿ ಇಂಧನ ಅವಶ್ಯಕತೆ ತೋರಿಬರುತ್ತದೆ. ಇಂಧನ ತುಂಬಿಸುವುದಕ್ಕಾಗಿ ಹಲವು ದಿನಗಳನ್ನು ನಷ್ಟ ಮಾಡಿಕೊಂಡು ಬಂದರಿನೊಳಗೆ ಬರುವುದು ಲಾಭದಾಯಕವಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ನೆರವಾಗುವುದೇ ಈ ಬಂಕರಿಂಗ್. ಈ ಸೌಲಭ್ಯ ಇರುವ ಬಂದರುಗಳಲ್ಲಿ ನೌಕೆಗಳು ಒಳಗೆ ಪ್ರವೇಶಿಸಬೇಕಿಲ್ಲ. ಬದಲಿಗೆ ಸಮುದ್ರದಲ್ಲೇ ಆ್ಯಂಕರೇಜ್ ಪ್ರದೇಶಕ್ಕೆ ಬಂದರೆ ಸಾಕು. ಅಲ್ಲಿಗೆ ಅಗತ್ಯವಿರುವ ಇಂಧನವನ್ನು ಬಾರ್ಜ್‌ನಲ್ಲಿ ತಂದು ತುಂಬಿಸಲಾಗುತ್ತದೆ. ನಾಲ್ಕು ತಿಂಗಳ ಹಿಂದೆ ಮಂಗಳೂರಿನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿತ್ತು. ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿಯೇ ಈ ಬಂಕರಿಂಗ್ ಉಸ್ತುವಾರಿ ವಹಿಸಿಕೊಂಡಿದೆ.

    ವ್ಯವಸ್ಥೆ ಹೇಗೆ?
    ನೌಕೆಯೊಂದಕ್ಕೆ ಇಂಧನ(ಹೈಸ್ಪೀಡ್ ಡೀಸೆಲ್, ಮೆರೈನ್ ಗ್ಯಾಸ್ ಆಯಿಲ್ ಅಥವಾ ಫರ್ನೆಸ್ ಆಯಿಲ್) ಅವಶ್ಯಕತೆ ಇದ್ದಾಗ ಬಂಕರಿಂಗ್ ಸೌಲಭ್ಯ ಇರುವ ಬಂದರಿನ ಏಜೆಂಟರನ್ನು ಸಂಪರ್ಕಿಸಿ, ಮುಂಚಿತವಾಗಿ ಆನ್‌ಲೈನ್ ಮುಖೇನ ಇಂಧನದ ದರವನ್ನು ಪಾವತಿಸಲಾಗುತ್ತದೆ. ಜೊತೆಗೆ ಹಡಗಿನ ವಿವರಗಳನ್ನು ಒದಗಿಸಲಾಗುತ್ತದೆ. ಏಜೆಂಟರು ತೈಲ ಕಂಪನಿಗೆ ಹಣ ಪಾವತಿಸಿ, ಬಂದರು ಮಂಡಳಿಗೆ ಬಂಕರಿಂಗ್‌ನ ಮಾಹಿತಿ ನೀಡಿ, ಕನಿಷ್ಠ ಪೋರ್ಟ್ ಶುಲ್ಕ ಪಾವತಿಸಿ, ಬಾರ್ಜ್ ಮೂಲಕ ಇಂಧನವನ್ನು ಸಮುದ್ರದಲ್ಲಿ ಕೊಂಡೊಯ್ಯಲಾಗುತ್ತದೆ. ಆ್ಯಂಕರೇಜ್‌ನಲ್ಲಿ ನಿಲ್ಲಿಸಿರುವ ಹಡಗಿಗೆ 2-3 ಗಂಟೆಗಳಲ್ಲಿ ಇಂಧನವನ್ನು ತುಂಬಿಸಿ ಬಾರ್ಜ್ ಹಿಂದಿರುಗುತ್ತದೆ, ಹಡಗಿನ ಮಾಸ್ಟರ್ ನೀಡಿದ ದಾಖಲೆಗಳನ್ನು ಕಸ್ಟಂಸ್‌ನವರಿಗೆ ನೀಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

    ಎನ್‌ಎಂಪಿಟಿಯಲ್ಲೇನು ಸಮಸ್ಯೆ
    ಕೊಚ್ಚಿನ್ ಬಂದರು ಮಂಡಳಿಯಲ್ಲಿಯೂ ಇದೇ ರೀತಿ ಪ್ರಕ್ರಿಯೆ ನಡೆಯುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಎನ್‌ಎಂಪಿಟಿಗೆ ಮಾಹಿತಿ ನೀಡುವಾಗ ಅವರು ಪೋರ್ಟ್‌ನ ಕನಿಷ್ಠ ಶುಲ್ಕ ಮಾತ್ರವಲ್ಲದೆ ಹಡಗು ಐಎಲ್‌ಎಚ್(ಇಂಡಿಯನ್ ಲೈಟ್‌ಹೌಸ್ ಕಾಯ್ದೆ)ಯಡಿ ತೆರಿಗೆ ಪಾವತಿಸುವಂತೆ ಸೂಚಿಸುತ್ತಾರೆ. ಆ ಬಳಿಕ ಕಸ್ಟಂಸ್‌ನಿಂದ ಕ್ಲಿಯರೆನ್ಸ್ ಕೇಳುತ್ತಿದ್ದಾರೆ, ಇಷ್ಟಾದ ಬಳಿಕ ಆ್ಯಂಕರೇಜ್‌ಗೆ ತೆರಳುವ ಬಾರ್ಜ್‌ನಲ್ಲಿ ಏಜೆಂಟರು ಹೋಗುವಂತಿಲ್ಲ, ಅವರು ಬೇರೆ ಟಗ್‌ನಲ್ಲಿ ಹೋಗಬೇಕು, ಅದಕ್ಕಾಗಿ ಪೋರ್ಟ್‌ನ ಟಗ್‌ಗೆ ಗಂಟೆಗೆ 22 ಸಾವಿರ ರೂ.ನಷ್ಟು ಪಾವತಿಸಬೇಕು. ಇಷ್ಟೆಲ್ಲಾ ಕ್ಲಿಯರೆನ್ಸ್, ದುಬಾರಿ ವೆಚ್ಚದಿಂದ ಹಡಗಿನವರಿಗೆ ದೊಡ್ಡ ಮಟ್ಟದಲ್ಲಿ ನಷ್ಟಕ್ಕೆ ಕಾರಣವಾಗುತ್ತಿದೆ. ಅದರೆ ಕೊಚ್ಚಿನ್‌ನಲ್ಲಿ ಇಂತಹ ಹೆಚ್ಚುವರಿ ಶುಲ್ಕ, ನಿಯಮದ ಕಿರಿಕಿರಿ ಇಲ್ಲ. ಹಾಗಾಗಿ ಹಡಗಿನವರು ನಮ್ಮ ಬಂದರಿನ ಬದಲು ಕೊಚ್ಚಿಯನ್ನು ಆಯ್ದುಗೊಳ್ಳುತ್ತಿದ್ದಾರೆ. ನಮಗೆ ಬರುವ ಆದಾಯ ತಪ್ಪಿ ಹೋಗುತ್ತದೆ ಎನ್ನುತ್ತಾರೆ ಏಜೆಂಟರೊಬ್ಬರು.

    ಬಂಕರಿಂಗ್ ಸೌಲಭ್ಯ ಪಡೆದ ಎರಡು ನೌಕೆಗಳು
    ಮೊದಲ ನೌಕೆ ಜ.31ರಂದು ಆರ್ಚಗೆಲೋಸ್ ಗ್ಯಾಬ್ರಿಯಲ್ 220 ಟನ್ ಇಂಧನ ಪಡೆದುಕೊಂಡಿದೆ, ಅದಕ್ಕಾಗಿ 1,56,000 ರೂ. ಐಎಲ್‌ಎಚ್ ತೆರಿಗೆ ಪಾವತಿಸಿದೆ. ಟಗ್‌ಗೆ ಹೆಚ್ಚುವರಿ ಹಣ ಪಾವತಿಸಿದೆ. ಸೆರೀನ್ ಸ್ಕೈ ಎನ್ನುವ ಇನ್ನೊಂದು ಹಡಗು 1,50,000 ಐಎಲ್‌ಎಚ್ ಪಾವತಿಸಿ 600 ಟನ್ ಇಂಧನ ಪಡೆದುಕೊಂಡಿದೆ. ಟಗ್ ಶುಲ್ಕವಾಗಿ ಸುಮಾರು 82ಸಾವಿರ ರೂ. ನೀಡಬೇಕಾಗಿ ಬಂದಿದೆ.

    ಶುಲ್ಕದ ಹೊರೆ ಮಂಗಳೂರಿನಲ್ಲಿ ಜಾಸ್ತಿಯಾದರೆ ಹಡಗಿನವರು ಬಾರದೆ ಕೇರಳದ ಕೊಚ್ಚಿನ್‌ಗೆ ಹೋಗುವುದು ಖಚಿತ. ಒಂದು ಕಡೆ ಒಳನಾಡಿನಿಂದ ಸರಕು ಆಕರ್ಷಿಸಲು ಸಭೆ ನಡೆಸುವ ಎನ್‌ಎಂಪಿಟಿ ಆಡಳಿತ, ಸಿಗುವ ವಹಿವಾಟನ್ನೂ ಕೈಚೆಲ್ಲಲು ಈ ರೀತಿ ಶುಲ್ಕ ಹೇರುತ್ತಿರುವುದು ಯಾಕೆ ಎನ್ನುವುದು ಗೊತ್ತಾಗುತ್ತಿಲ್ಲ.
    – ಓರ್ವ ಏಜೆಂಟ್, ಎನ್‌ಎಂಪಿಟಿ

    ಬಂಕರಿಂಗನ್ನು ಐಒಸಿಎಲ್ ನೋಡಿಕೊಳ್ಳುತ್ತಿದೆ, ಐಎಲ್‌ಎಚ್ ಶುಲ್ಕವನ್ನು ಕಸ್ಟಂಸ್ ಸಂಗ್ರಹಿಸುತ್ತಿದ್ದು, ಅದು ಹಣಕಾಸು ಸಚಿವಾಲಯಕ್ಕೆ ಹೋಗುತ್ತದೆ, ನಾನು ಕಸ್ಟಂಸ್ ಮುಖ್ಯ ಆಯುಕ್ತರನ್ನು ಭೇಟಿಯಾಗಿದ್ದು, ಐಎಲ್‌ಎಚ್ ಶುಲ್ಕವನ್ನು ಸಂಗ್ರಹಿಸದಂತೆ, ಕೊಚ್ಚಿನ್ ಮಾದರಿಯಲ್ಲಿ ನಿರ್ವಹಣೆ ಸಾಧ್ಯವಾಗುವ ರೀತಿಯಲ್ಲಿ ಪೋರ್ಟ್ ಕ್ಲಿಯರೆನ್ಸ್‌ಗೆ ಒತ್ತಡ ಹೇರದಂತೆ ವಿನಂತಿ ಮಾಡಿದ್ದೇನೆ.
    ಎ.ವಿ.ರಮಣ, ಅಧ್ಯಕ್ಷ, ಎನ್‌ಎಂಪಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts