More

    ಕೀಟನಾಶಕ ಅವಲಂಬನೆ ಕಡಿಮೆಯಾಗಲಿ

    ಶಿವಮೊಗ್ಗ: ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಜೈವಿಕ ನಿಯಂತ್ರಣಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಐಸಿಎಆರ್‌ನ ಕೃಷಿ ಕೀಟ ವಿಭಾಗದ ನಿರ್ದೇಶಕ ಡಾ.ಎಸ್.ಎನ್.ಸುಶೀಲ್ ಸಲಹೆ ನೀಡಿದರು.
    ನವುಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಗೆದ್ದಲು ಮತ್ತು ಬೇರು ಹುಳುಗಳು ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಗೆದ್ದಲುಗಳು ಕೃಷಿಗೆ ಪ್ರಯೋಜನಕಾರಿಯಾಗಿದ್ದರೆ, ಮತ್ತೆ ಕೆಲವು ಹಾನಿಕಾರಿಯಾಗಿವೆ ಎಂದು ಹೇಳಿದರು.
    ಮನು ಕುಲದ ಒಳಿತಿಗೆ ಪ್ರಯೋಜನಕಾರಿ ಸ್ವಭಾವವುಳ್ಳ ಗೆದ್ದಲುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಹಾನಿಕಾರಕ ಗೆದ್ದಲುಗಳನ್ನು ಪರಿಸರಸ್ನೇಹಿ ರೀತಿಯಲ್ಲೇ ನಿರ್ವಹಣೆ ಮಾಡುವ ಮೂಲಕ ಅವುಗಳ ಪ್ರಭಾವವನ್ನು ತಗ್ಗಿಸಬೇಕು. ಆಗ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
    ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ ಮಾತನಾಡಿ, ಪಶ್ಚಿಮ ಘಟ್ಟಗಳು ಜೀವವೈವಿಧ್ಯದಿಂದ ಸಮೃದ್ಧವಾಗಿವೆ. ನಮ್ಮ ವಿವಿಯು ಜೀವವೈವಿಧ್ಯ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದೆ. ಅಡಕೆಗೆ ತಗುಲುವ ಬೇರು ಹುಳುಗಳ ಹತೋಟಿಗೆ ಸಮಗ್ರ ಕೀಟ ನಿರ್ವಹಣೆ ಕ್ರಮಗಳನ್ನು ನಮ್ಮ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದರು.
    ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ, ಕೀಟಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಎಂ.ಕಲ್ಲೇಶ್ವರ ಸ್ವಾಮಿ ಮಾತನಾಡಿ, ಗೆದ್ದಲುಗಳ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
    ವಿವಿಧೆಡೆಯಿಂದ ಆಗಮಿಸಿದ್ದ ವಿಜ್ಞಾನಿಗಳು ಗೆದ್ದಲು ಮತ್ತು ಬೇರು ಹುಳುಗಳ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದರು. ವಿವಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರೂ ಸೇರಿದಂತೆ ಸುಮಾರು 80 ಮಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
    ವಿವಿಯ ಶಿಕ್ಷಣ ನಿರ್ದೇಶಕ ಡಾ.ಎಂ.ಹನುಮಂತಪ್ಪ, ವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾನಾಯಕ್, ಕುಲಸಚಿವ ಡಾ.ಲೋಕೇಶ, ಕೃಷಿ ವಿಭಾಗದ ಡೀನ್ ಡಾ.ಬಿ.ಎಂ.ದುಷ್ಯಂತ್ ಕುಮಾರ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts