ಶಿವಮೊಗ್ಗ:ಬೇಡ ಜಂಗಮ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಅ.18ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಬೇಡ ಜಂಗಮ ಸಮಾಜದ ಸಾವಿರಾರು ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜದ ಶಿವಮೊಗ್ಗ ತಾಲೂಕು ಅಧ್ಯಕ್ಷ ಲೋಕೇಶ ದೊಡ್ಡಮಠ, ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ವಿಧಾನಸೌಧ ಚಲೋದಲ್ಲಿ ಭಾಗವಹಿಸಲಿದ್ದಾರೆ. ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಇದು ನಮ್ಮ ದೊಡ್ಡ ಹೋರಾಟವಾಗಿದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿಯನ್ನು ಸರ್ಕಾರ ಹೆಚ್ಚಳ ಮಾಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ನಮ್ಮ ಹಕ್ಕನ್ನು ಕೇಳುತ್ತಿದ್ದೇವಷ್ಟೆ. ಬೇಡ ಜಂಗಮ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೇ ಇರುವುದು ಬೇಸರ ತಂದಿದೆ ಎಂದು ಹೇಳಿದರು.
ನಮ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅ.12ರಂದು ಮಹತ್ವದ ಸಭೆ ನಿಗದಿಯಾಗಿತ್ತು. ಆದರೆ ಏಕಾಏಕಿ ಸಭೆ ರದ್ದುಗೊಳಿಸಿರುವುದು ಆಶ್ಚರ್ಯ ತಂದಿದೆ. ಈ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಾನೂನು ಸಲಹೆಗಾರ ಎಂ.ಎಸ್.ವಾಗೀಶ್ ಮಾತನಾಡಿ, ಸಂವಿಧಾನ ರೂಪಿಸಿದ ಸಂದರ್ಭದಲ್ಲಿ ರಚಿಸಿದ ಮೀಸಲಾತಿ ಪಟ್ಟಿಯಲ್ಲಿ ಬೇಡ ಜಂಗಮ ಸಮಾಜವನ್ನೂ ಸೇರಿಸಲಾಗಿತ್ತು. ಆದರೆ ಇಂದಿಗೂ ಮೀಸಲಾತಿ ಹಂಚಿಕೆ ಮಾಡದಿರುವುದು ದುರದೃಷ್ಟಕರ. ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವ ಬಗ್ಗೆ ನಮ್ಮ ವಿರೋಧವಿಲ್ಲ. ಹೀಗಾಗಿ ಬೇರೆಯವರು ನಮ್ಮ ಬೇಡಿಕೆ ಬಗ್ಗೆ ಟೀಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಖಜಾಂಚಿ ಉಮೇಶ್ ಹಿರೇಮಠ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನಂದಾ, ಕಾರ್ಯದರ್ಶಿ ಜ್ಯೋತಿ ನಾಗರಾಜಯ್ಯ, ಪ್ರಮುಖರಾದ ಸೋಮಶೇಖರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.