More

    ಪಡಿತರ ವ್ಯವಸ್ಥೆ ಲೋಪ ಖಂಡಿಸಿ ಶಿವಮೊಗ್ಗದಲ್ಲಿ ಹೋರಾಟದ ಎಚ್ಚರಿಕೆ

    ಶಿವಮೊಗ್ಗ: ಭದ್ರಾವತಿ ನಗರ ಹಾಗೂ ಗ್ರಾಮಾಂತರ ಭಾಗದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಲೋಪ ಖಂಡಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅ.17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ತಿಳಿಸಿದ್ದಾರೆ.
    ಭದ್ರಾವತಿ ತಾಲೂಕಿನ ಆಹಾರ ಇಲಾಖೆ ಅಧಿಕಾರಿಗಳಾದ ಗಾಯತ್ರಿ ಹಾಗೂ ಜಾನಕಿ ಅವರ ನಿರ್ಲಕ್ಷೃದಿಂದ ಅಕ್ರಮ ನಡೆಯುತ್ತಿದೆ. ಇವರಿಬ್ಬರನ್ನು ಅಮಾನತು ಮಾಡಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಅವಿನ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.
    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿ ತಾಲೂಕಿನಲ್ಲಿ ಏಳು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಅವುಗಳ ಪರವಾನಗಿ ರದ್ದುಪಡಿಸಿ ಕ್ರಮ ಕೈಗೊಂಡಿಲ್ಲ. ಪ್ರತಿ ತಿಂಗಳು ಟನ್‌ಗಟ್ಟಲೆ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
    ಆಹಾರ ಇಲಾಖೆ ಬೇಜವಾಬ್ದಾರಿತನ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರ ಭ್ರಷ್ಟಾಚಾರ ಮಿತಿ ಮೀರಿದೆ. ಆದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಸ್ಪಂದಿಸದೇ ಇದ್ದರೆ ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಭಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಕೆಆರ್‌ಎಸ್ ಪಕ್ಷದ ಜಿಲ್ಲಾ ಸಂಚಾಲಕ ಅರುಣ್ ಕಾನಹಳ್ಳಿ, ಜೆಡಿಯು ಭದ್ರಾವತಿ ತಾಲೂಕು ಅಧ್ಯಕ್ಷ ರಘು, ಪ್ರಮುಖರಾದ ಭೂಪಾಳಂ ಶಿವಸ್ವಾಮಿ, ಕೆ.ರವಿ, ಡಾ.ಎಂ.ಎಸ್.ಸುಬ್ರಹ್ಮಣ್ಯ, ಕೆ.ಎನ್.ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts