More

    ಕೋಟಿ ಕಂಠಕ್ಕೆ ದನಿಯಾದ ಶಿವಮೊಗ್ಗ ಜಿಲ್ಲೆಯ 4 ಲಕ್ಷ ಮಂದಿ

    ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಕೋಟಿ ಕಂಠ ಗಾಯನಕ್ಕೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಕೋಟಿ ಕಂಠ ಗಾಯನಕ್ಕೆ ಸುಮಾರು 4 ಲಕ್ಷ ಮಂದಿ ದನಿಯಾದರು. ಏಕಕಾಲಕ್ಕೆ ಆರು ಕನ್ನಡ ಗೀತೆಗಳು ಮೊಳಗಿದವು.
    ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ವಿವಿಧ ಶಾಲಾ, ಕಾಲೇಜುಗಳಲ್ಲಿ ಏಕಕಾಲಕ್ಕೆ ಕನ್ನಡದ ಆರು ಗೀತೆಗಳನ್ನು ಹಾಡಲಾಯಿತು. ದೀರ್ಘ ಇತಿಹಾಸವಿರುವ ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಮೂಹ ಗಾಯನದಲ್ಲಿ ಪಾಲ್ಗೊಂಡರು. ಪ್ರತಿ ತಾಲೂಕಿನಲ್ಲೂ ಕಾರ್ಯಕ್ರಮ ಆಯೋಜನೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಪ್ರಸಿದ್ಧ ಗಾಯಕರ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿತ್ತು.
    ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನಕ್ಕೆ ಗುರುವಾರ ಸಂಜೆವರೆಗೆ 3.65 ಲಕ್ಷ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಜಿಲ್ಲಾಡಳಿತದಿಂದ 10 ಕಡೆಗಳಲ್ಲಿ ಕೋಟಿ ಕಂಠಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಷ್ಟೇ ಅಲ್ಲದೇ ವಿವಿಧ ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳು ಗೀತೆಗಳನ್ನು ಹಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಮಂದಿ ಇದರಲ್ಲಿ ಭಾಗವಹಿಸಿರುವ ಅಂದಾಜಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಯು.ಉಮೇಶ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕೋಟಿ ಕಂಠ ಗಾಯನದ ನೇತೃತ್ವವನ್ನು ವಿದ್ವಾನ್ ಅರುಣ್‌ಕುಮಾರ್ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಶಾಸಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.
    ಡಿಸಿ ಕಚೇರಿ, ಉಪವಿಭಾಗಧಿಕಾರಿ ಕಚೇರಿ, ತಹಸೀಲ್ದಾರ್, ಆರ್‌ಟಿಒ ಮುಂತಾದ ಇಲಾಖೆ ಸಿಬ್ಬಂದಿ ಕೋಟಿ ಕಂಠದಲ್ಲಿ ಭಾಗಿಯಾದರು. ಡಿಸಿ ಕಚೇರಿ ಕೆಲಸಕ್ಕೆಂದು ಆಗಮಿಸಿದ್ದ ಸಾರ್ವಜನಿಕರೂ ಕನ್ನಡ ಗೀತೆಗಳಿಗೆ ದನಿಯಾಗಿದ್ದು ವಿಶೇಷವಾಗಿತ್ತು. ಗೀತೆಗಳ ಗಾಯನದ ಬಳಿಕ ಕನ್ನಡದ ಬಳಕೆ ಹಾಗೂ ಬೆಳವಣಿಗೆಗೆ ಸಂಬಂಧಿಸಿದಂತೆ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts